ಹೂವಿನಹಡಗಲಿ: ತಾಲೂಕಿನಲ್ಲಿ ರೈತರು ಡೀಸೆಲ್, ಪೆಟ್ರೋಲ್‌ಗಾಗಿ ಬಂಕ್‌ಗಳ ಮುಂದೆ ಪರದಾಟ 2ನೇ ದಿನವೂ ಮುಂದುವರಿದಿದೆ. ಜಮೀನು ಉಳುಮೆ ಮಾಡುವ ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ತುಂಬಿಸಿಕೊಳ್ಳಲು ರೈತರು ರಾತ್ರಿ ಇಡೀ ಸರದಿ ಸಾಲಿನಲ್ಲಿ ನಿಂತಿರುವ ಪ್ರಸಂಗ ನಡೆದಿದೆ.
ಕಳೆದೊಂದು ವಾರದಿಂದ ತಾಲೂಕಿನ ಬಂಕ್‌ಗಳಿಗೆ ಡೀಸೆಲ್, ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ರೈತರಲ್ಲಿ ಇಂಧನ ಕೊರತೆ ಆತಂಕ ಮನೆ ಮಾಡಿರುವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್, ಇತರೆ ವಾಹನಗಳು ಮತ್ತು ಕ್ಯಾನ್‌ಗಳಲ್ಲಿ ಡೀಸೆಲ್ ತುಂಬಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ. ತಾಲೂಕಿನ ನದಿ ತೀರದ ಹಳ್ಳಿಗಳಲ್ಲೇ ಅತಿಹೆಚ್ಚು ಇಂಧನ ಕೊರತೆ ಕಾಡುತ್ತಿದೆ. ಅತಿಹೆಚ್ಚು ನೀರಾವರಿ ಪ್ರದೇಶ ಹೊಂದಿದೆ. ಜತೆಗೆ ಉತ್ತಮ ಮಳೆಯಾಗಿರುವ ಕಾರಣ ಬಹುತೇಕ ರೈತರು ಜಮೀನುಗಳನ್ನು ಬಿತ್ತನೆ ಮಾಡಲು ಉಳುಮೆ ಮಾಡುತ್ತಿದ್ದಾರೆ. ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಬಿಟ್ಟು ಡೀಸೆಲ್ ತುಂಬಿಸಿಕೊಳ್ಳಲು ನಿಂತಿದ್ದಾರೆ.ಡೀಸೆಲ್ ಬಂದಿರುವ ಬಂಕ್‌ಗಳ ಮುಂದು ರಾತ್ರಿ ಇಡೀ ಸರದಿ ಸಾಲಿನಲ್ಲಿ ರೈತರು ನಿಂತಿದ್ದಾರೆ. ಜತೆಗೆ ಅಕ್ಕ ಪಕ್ಕದ ತಾಲೂಕಿನ ಬಂಕ್‌ಗಳ ಮೊರೆ ಹೋಗಿದ್ದಾರೆ. ತಾಲೂಕಿನಲ್ಲಿ ಸರಿಸುಮಾರು 23 ಬಂಕ್‌ಗಳಿವೆ. ಎಲ್ಲ ಕಡೆಗೂ ಡೀಸೆಲ್, ಪೆಟ್ರೋಲ್ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿದೆ. ಆದರೆ, ಜನ ಗಾಳಿ ಸುದ್ದಿ ನಂಬಿಕೊಂಡು ಸಿಗುತ್ತೋ ಇಲ್ಲವೋ ಎಂಬ ಭಯದಲ್ಲಿ ಇಂಧನ ಖರೀದಿಗೆ ಮುಗಿ ಬಿದ್ದಿದ್ದಾರೆ. ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಆಹಾರ ಇಲಾಖೆ ತಿಳಿಸಿದೆ.