ಸಂವಿಧಾನದ ಆಶಯದಂತೆ ಬದುಕಿದರೆ ಸಾರ್ಥಕತೆ: ಡೀಸಿ ಡಾ.ಕುಮಾರ್

| Published : Nov 29 2024, 01:02 AM IST

ಸಾರಾಂಶ

ಕಾರ್ಯಕ್ರಮಕ್ಕೂ ಮುನ್ನ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಿಂದ ಹೊರಟ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಚಾಲನೆ ನೀಡಿದರು. ಸಂವಿಧಾನ ಪೀಠಿಕೆಯನ್ನು ಬೆಳ್ಳಿರಥದಲ್ಲಿ ಜಾನಪದ ಕಲಾತಂಡಗಳ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಜಾಗೃತಿ ಮೂಡಿಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತೀಯರು ಸಂವಿಧಾನದ ಆಶಯದಂತೆ ಬದುಕಿದರೆ ಸಾರ್ಥಕತೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ಅಂಬೇಡ್ಕರ್ ಪ್ರತಿಮೆ ಬಳಿ ಸಂವಿಧಾನ ಸಮರ್ಪಣಾ ದಿನ ಸಂಭ್ರಮಾಚರಣೆ ಮತ್ತು ಬೃಹತ್ ಜಾಗೃತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿ, ಸಂವಿಧಾನ ನಮ್ಮ ಬದುಕು, ಸಂವಿಧಾನವಿಲ್ಲದೆ ನಾವು ಬದುಕುವುದಕ್ಕೆ ಸಾಧ್ಯವಿಲ್ಲ, ಅಂಬೇಡ್ಮರ್ ಕೊಟ್ಟ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನೂ ಮನೆಯಲ್ಲಿ ಮತ್ತು ಮನಸಿನಲ್ಲಿ ಇಟ್ಟು ಪೂಜಿಸುವಂತೆ ತಿಳಿಸಿದರು.

ಲಿಖಿತ ಸಂವಿಧಾನ ಹೊಂದಿರುವ ಭಾರತ ವಿಶ್ವಕ್ಕೇ ಮಾದರಿಯಾಗಿದೆ, ೧೯೪೯ರಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ಅಲಿಖಿತ ಸಂವಿಧಾನವಿತ್ತು, ಭಾರತ ಲಿಖಿತ ಸಂವಿಧಾನವನ್ನು ಅಂಗೀಕರಿಸಿದಾಗ ಸಾಕಷ್ಟು ಸಮಸ್ಯೆಗಳಿದ್ದವು. ಬಡತನ, ಅನಕ್ಷರತೆ, ಮೌಢ್ಯತೆ ಇದ್ದವು. ಇವುಗಳಿಗೆ ಸಂವಿಧಾನ ಹೊಂದಿಕೊಳ್ಳುವುದೇ ಎಂಬ ಭಾವನೆ ಬೇರೆ ರಾಷ್ಟ್ರಗಳದ್ದಾಗಿತ್ತು ಎಂದರು.

ಸಂವಿಧಾನ ಸರಾಸರಿ ೨೦-೨೫ವರ್ಷಗಳು ಮಾತ್ರ ಜಾರಿಯಲ್ಲಿರಬಹುದು. ನಂತರ ಬದಲಾವಣೆ ಮಾಡಲಿಕ್ಕೆ ಸಾಧ್ಯವಾಗಬಹುದು ಎಂದು ವಿದೇಶಿ ರಾಷ್ಟ್ರಗಳು ಮಾತನಾಡಿಕೊಳ್ಳುತ್ತಿದ್ದವು, ಆದರೆ ೭೫ ವರ್ಷಗಳು ತುಂಬಿವೆ. ನಮ್ಮ ಬದುಕಿನೊಂದಿಗೆ ಸಾಗಿ ಬಂದಿದೆ. ಸಂವಿಧಾನದ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ ಎಂದರು.

ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ. ಶಿವಕುಮಾರ್, ಭಾರತ ಸಂವಿಧಾನ ಲಿಖಿತವಾಗಿದ್ದು, ಪ್ರಪಂಚದಲ್ಲಿಯೇ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆ ಇದೆ. ಸಂವಿಧಾನ ಎಂದರೆ ಕಾನೂನು ಗ್ರಂಥವಾಗಿದೆ. ಇದರ ಮೂಲಕವೇ ಎಲ್ಲರಿಗೂ ಎಲ್ಲಾ ಹಕ್ಕು, ಸೌಲಭ್ಯಗಳು ದೊರೆಯುತ್ತಿರುವುದು ಎಂದು ನುಡಿದರು.

ಕಾರ್ಯಕ್ರಮಕ್ಕೂ ಮುನ್ನ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಿಂದ ಹೊರಟ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಚಾಲನೆ ನೀಡಿದರು. ಸಂವಿಧಾನ ಪೀಠಿಕೆಯನ್ನು ಬೆಳ್ಳಿರಥದಲ್ಲಿ ಜಾನಪದ ಕಲಾತಂಡಗಳ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಜಾಗೃತಿ ಮೂಡಿಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಓ ಶೇಕ್ ತನ್ವೀರ್ ಆಸಿಫ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾಧಿಕಾರಿ ಕೆ.ಮಂಜುಳ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ ಗಂಗಾಧರ್, ಪತ್ರಕರ್ತ ಬಿ.ಪಿ ಪ್ರಕಾಶ್, ಪ್ರಗತಿಪರ ಹೋರಾಟಗಾರರಾದ ತಗ್ಗಹಳ್ಳಿ ವೆಂಕಟೇಶ್, ಸುನಂದ ಜಯರಾಮ್, ಎಲ್ ಸಂದೇಶ್, ಎಸ್ ನಾರಾಯಣ್, ನಗರಸಭಾ ಸದಸ್ಯರಾದ ಶ್ರೀಧರ್, ಗೀತಾ, ಶಿವಪ್ರಕಾಶ್, ಹರೀಶ. ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಪರಿವರ್ತನಾ ಸಂಸ್ಥೆಯ ಕಾರ್ಯದರ್ಶಿ ಟಿ.ಡಿ ನಾಗರಾಜ್, ನಿರ್ದೇಶಕ ಮುಕುಂದ ಹಾಲಹಳ್ಳಿ, ನರಸಿಂಹಮೂರ್ತಿ, ಲಂಕೇಶ್ ಮಂಗಲ, ದಸಂಸ ಮುಖಂಡ ಎಂ.ವಿ.ಕೃಷ್ಣ, ಅಂಹಿದ ಶಿವರುದ್ರಯ್ಯ ಮತ್ತಿತರರಿದ್ದರು.

ಮಂಡ್ಯ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಕಾವೇರಿ ಉದ್ಯಾನವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪರಿವರ್ತನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮತ್ತು ಸಮಾನ ಮನಸ್ಕರ್ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ೭೫ನೇ ವರ್ಷದ ಸಂವಿಧಾನ ಅಮೃತ ಮಹೋತ್ಸವ ಪ್ರಯುಕ್ತ ಸಂವಿಧಾನ ಸಮರ್ಪಣಾ ದಿನ ಸಂಭ್ರಮಾಚರಣೆ ಮತ್ತು ಬೃಹತ್ ಜಾಗೃತಿ ಮೆರವಣಿಗೆ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ. ಕುಮಾರ್ ಉದ್ಘಾಟಿಸಿದರು.