ಬಿ.ಎಸ್.ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಗಾಂಧಿವಾದಿ, ಹೋರಾಟಗಾರರಾದ ಜಿ.ಮಾದೇಗೌಡರಿಗೆ ಅಂದು ಮಂಡ್ಯದ ಶಿಲ್ಪಿ, ನಿತ್ಯ ಸಚಿವ ಕೆ.ವಿ.ಶಂಕರಗೌಡರು ತಮ್ಮ ಪಿಇಟಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆ ಕಲ್ಪಿಸಿದ್ದರೆ, ಇಂದು ಭಾರತೀನಗರವಾಗಿ ಬಹುದೊಡ್ಡ ಮಟ್ಟದಲ್ಲಿ ಕಾಳಮುದ್ದನದೊಡ್ಡಿ ಎಂಬ ಕುಗ್ರಾಮ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.

ಮದ್ದೂರು ತಾಲೂಕಿನ ಗುರುದೇವರಹಳ್ಳಿಯ ಪುಟ್ಟೇಗೌಡ, ಕಾಳಮ್ಮ ದಂಪತಿ ಪುತ್ರ 1928ರ ಜುಲೈ 10 ರಂದು ಜನಿಸಿದ ಜಿ.ಮಾದೇಗೌಡರ ಜೀವನಗಾಥೆ ರೋಚಕವಾಗಿದ್ದು, ಅಂದು ಕಾನೂನು ಪದವಿ ಮುಗಿಸಿದ್ದ ಜಿ.ಮಾದೇಗೌಡರಿಗೆ ಪಿಇಎಸ್ ಕಾಲೇಜಿನಲ್ಲಿ ಕೆಲಸ ಕೊಡಿಸಲು ತಂದೆ ಪುಟ್ಟೇಗೌಡರು ಮಳವಳ್ಳಿ ಶಾಸಕ ಎಚ್.ವಿ.ವೀರೇಗೌಡರ ಜೊತೆ ಕೆ.ವಿ.ಶಂಕರಗೌಡರ ಮನೆಗೆ ಕರೆದುಕೊಂಡು ಹೋದಾಗ ಕೆವಿಎಸ್ ಮಾದೇಗೌಡರಿಗೆ ಉಪನ್ಯಾಸಕ ಹುದ್ದೆ ಕೊಡದೆ ಅವರನ್ನು ರಾಜಕೀಯವಾಗಿ ಬೆಳೆಯಲು ಕಾರಣರಾದರು.

ಶಂಕರೇಗೌಡರನ್ನು ಭೇಟಿಯಾದ 6 ತಿಂಗಳಿಗೆ ತಾಲೂಕು ಬೋರ್ಡ್ ಚುನಾವಣೆ ನಡೆದು ಮಾದೇಗೌಡರನ್ನು ಚುನಾವಣೆಗೆ ನಿಲ್ಲಿಸುತ್ತಾರೆ. ಅಲ್ಲಿಂದ ಜಿ.ಮಾದೇಗೌಡರ ರಾಜಕೀಯ ಜೀವನ ಶುರುವಾಗುತ್ತದೆ. 1962ರ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದ ಸಾಮಾನ್ಯ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಬೆನ್ನಲ್ಲೆ ಕಿರುಗಾವಲು ಕ್ಷೇತ್ರ ಉದಯವಾಗಿ 1984ರವರೆಗೆ ಸೋಲಿಲ್ಲದ ಸರದಾರನಾಗಿ ಸತತವಾಗಿ ಕ್ಷೇತ್ರದಿಂದ ಶಾಸಕರಾಗುತ್ತ ರಾಜಕೀಯವಾಗಿ ಬಹು ಎತ್ತರಕ್ಕೆ ಬೆಳೆದರು.


ಕಾಂಗ್ರೆಸ್ ಕಟ್ಟಾಳಾಗಿದ್ದ ಜಿ.ಮಾದೇಗೌಡರು 1978ರಿಂದ 1983ರ ತನಕ ಜನತಾ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು. ಬಳಿಕ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಲೋಕಸಭೆಯತ್ತ ಮುಖ ಮಾಡಿದರು. ಮಂಡ್ಯ ಜಿಲ್ಲೆಯಲ್ಲಿ ಸತತ ಹಾಗೂ ಅತಿ ಹೆಚ್ಚು ಅವಧಿಗೆ (22 ವರ್)ಷ ಶಾಸಕರಾದ ದಾಖಲೆಗೆ ಭಾಜನರಾಗಿದ್ದಾರೆ. ಒಮ್ಮೆ ಸಚಿವ ಸ್ಥಾನ, ಬಳಿಕ 2 ಬಾರಿ ಲೋಕಸಭಾ ಸದಸ್ಯರು ಆಗಿದ್ದರೂ ನಂತರ ಅವರು ಸಚಿವರಾಗುವ ಅವಕಾಶ ಸಿಗಲೇ ಇಲ್ಲ.

ಕೆ.ಎಂ.ದೊಡ್ಡಿಯಲ್ಲಿ ಸಕ್ಕರೆ ಕಾರ್ಖಾನೆ ಮಾಡಲು ತನ್ನ ರಾಜಕೀಯ ಕಡುವೈರಿ ಎಸ್.ಎಂ.ಕೃಷ್ಣರ ಮನೆ ಬಾಗಿಲು ತಟ್ಟಿದರು. ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕಾಗಿ ಕೆ.ವಿ.ಶಂಕರಗೌಡ ಸಾರ್ವಜನಿಕ ಶಿಕ್ಷಣ ಸಂಸ್ಥೆ (ಪಿಇಟಿ) ಕಟ್ಟಿದ್ದರಿಂದ ಪ್ರೇರಪಣೆಯಾಗಿ ಭಾರತಿ ಶಿಕ್ಷಣ ಸಂಸ್ಥೆ ಕಟ್ಟಿದರು. ಇಂದು ಈ ಎರಡು ಶಿಕ್ಷಣ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದು, ಸಾವಿರು ಮಂದಿಗೆ ಉದ್ಯೋಗ ಕಲ್ಪಿಸಿ, ಲಕ್ಷಾಂತರ ಮಕ್ಕಳ ಜ್ಞಾನದಾಹ ತಣಿಸಿ, ಭವಿಷ್ಟ ಕಟ್ಟಿಕೊಳ್ಳಲು ನೆರವಾಗುತ್ತಿವೆ.

ಕುಗ್ರಾಮವಾಗಿದ್ದ ಕಾಳಮುದ್ದನದೊಡ್ಡಿ ಕೆ.ಎಂ.ದೊಡ್ಡಿಯಾಗಿ, ಭಾರತಿನಗರವೆಂಬ ಹೆಸರಿಗೆ ಚ್ಯುತಿ ಬಾರದಂತೆ ಬೃಹತ್ ಪಟ್ಟಣವಾಗಿ ಬೆಳೆಯುತ್ತ ಸಾಗಿದೆ. ಭಾರತಿ ಶಿಕ್ಷಣ ಸಂಸ್ಥೆ ಮರಿ ಮಾನಸ ಗಂಗೋತ್ರಿ ಎಂಬ ಖ್ಯಾತಿ ಗಳಿಸುತ್ತಿದೆ. ಇದಕ್ಕೆ ಜಿ.ಮಾದೇಗೌಡರು ಕಾರಣ. ತಮ್ಮ ಜೀವಿತಾವಧಿ ಬಹುಪಾಲು ಸಮಯವನ್ನು ಅಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು ಎಂಬುದನ್ನು ಮರೆಯುವಂತಿಲ್ಲ.

ಕಾವೇರಿ ಸುಪುತ್ರರಾದ ಜಿ.ಮಾದೇಗೌಡರು:

ಮಂಡ್ಯ ಜಿಲ್ಲೆಯನ್ನು ಕಾವೇರಿ ನದಿ ನೀರಿನ ವಿವಾದ ಸದಾ ಕಾಡುತ್ತಿತ್ತು. ಈ ವೇಳೆ ಜಿ.ಮಾದೇಗೌಡರು ಶಿಕ್ಷಣ ಸಂಸ್ಥೆ ಅಭಿವೃದ್ಧಿ ಜೊತೆಗೆ ಜಿಲ್ಲೆಯ ರೈತರ ಹಿತಕ್ಕಾಗಿ ಕಾವೇರಿ ನದಿ ನೀರು ಉಳಿವಿಗೆ ಕಾವೇರಿ ಚಳವಳಿಗೆ ದುಮುಕಿದರು. ರಾಜ್ಯದಲ್ಲಿ ತಮ್ಮದೆ(ಕಾಂಗ್ರೆಸ್) ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ಹೊಂದಾಣಿಕೆ ಮಾಡಿಕೊಳ್ಳದೆ ಬೀದಿಗಿಳಿದು ಸರ್ಕಾರದ ವಿರುದ್ಧ ಗುಡುಗುತ್ತಿದ್ದರು.

ಅಪಾರ ಮುಂಗೋಪಿಯಾಗಿದ್ದ ಗೌಡರು ಯಾರನ್ನು ಮುಲಾಜಿಗೆ ಹಾಕಿಕೊಳ್ಳುತ್ತಿರಲಿಲ್ಲ. ಸಿಎಂ, ಕೇಂದ್ರ, ರಾಜ್ಯ ಸಚಿವರು, ಡಿಸಿ, ಎಸ್ಪಿ ಯಾರೇ ಆಗಿರಲಿ ತಮ್ಮದೇ ದಾಟಿಯಲ್ಲಿ ಪ್ರಶ್ನೆ ಮಾಡಿ ಚಳಿ ಬಿಡಿಸುತ್ತಿದ್ದರು. ಗೌಡರ ಕಾಳಜಿ, ಕೋಪ, ಸಿಟ್ಟು, ಸೆಡವು ಯಾವ ರೂಪದಲ್ಲಿ ಆದರೂ ಜನರ ಹಿತಕ್ಕಾಗಿ ಇರುತ್ತಿತ್ತು. ಗೌಡರು ಹೊಂದಾಣಿಕೆ ಮಾಡಿಕೊಂಡಿದ್ದರೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅತ್ಯುನ್ನತ ಸ್ಥಾನ ಗಳಿಸುತ್ತಿದ್ದರು ಎಂಬುದು ಉತ್ಪ್ರೇಕ್ಷೆಯಲ್ಲ. ಜಿ.ಮಾದೇಗೌಡರು ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ನಿಜಕ್ಕೂ ಅಚ್ಚಳಿಯದೇ ಉಳಿದಿದೆ. ಹಳ್ಳಿಗಾಡಿನ ಮಕ್ಕಳ ಭವಿಷ್ಯ ರೂಪಿಸಲು ಸ್ಥಾಪಿಸಿದ ಭಾರತೀ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿರುವುದು ಗೌಡರು ಶಿಕ್ಷಣ ಕ್ಷೇತ್ರದಲ್ಲಿನ ಮಾಂತ್ರಿಕತೆಗೆ ಸಾಕ್ಷಿಯಾಗಿದೆ.

- ಪ್ರೊ.ಎಸ್.ನಾಗರಾಜು, ನಿರ್ದೇಶಕ, ಭಾರತೀ ಸ್ನಾತಕೋತ್ತರ ವಿಭಾಗ

ಶಿಕ್ಷಣ, ಆರೋಗ್ಯ, ರಾಜಕೀಯ ಕ್ಷೇತ್ರದಲ್ಲಿ ಜಿ.ಮಾದೇಗೌಡರ ಸಾಧನೆ ಅಪಾರ. ಮಂಡ್ಯ ಜಿಲ್ಲೆಯಲ್ಲಿನ ರೈತರ ಜ್ವಲಂತ ಸಮಸ್ಯೆಗಳಿಗೆ ದಿಟ್ಟವಾಗಿ ಹೋರಾಟ ಮಾಡಿದ್ದ ಕೆಚ್ಚೆದೆಯ ಹೋರಾಟಗಾರರಾಗಿ ಜನಮಾಸದಲ್ಲಿ ಉಳಿದಿದ್ದಾರೆ. ವರ ನಿಷ್ಕಲ್ಮಶ ಸಾಧನೆಗಳು ಇಂದಿನ ಯುವ ಪೀಳಿಗೆಗೆ ಮಾದರಿ.

- ಡಾ.ಎಂ.ಎಸ್.ಮಹದೇವಸ್ವಾಮಿ, ಪ್ರಾಂಶುಪಾಲ, ಭಾರತೀ ಕಾಲೇಜು