ಸೋಮರಡ್ಡಿ ಅಳವಂಡಿ ಕೊಪ್ಪಳ

ರಾಜ್ಯಾದ್ಯಂತ ನಡೆಯುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಪ್ರತಿನಿಧಿಗಳ (ಬಿಎಲ್ 2) ನೇಮಕದ ಅಧಿಕಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದು, ಅದರಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಕೈಬಿಟ್ಟು, ಸಂಸದ ರಾಜಶೇಖರ ಹಿಟ್ನಾಳಗೆ ನೀಡಿರುವುದು ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಕಾಂಗ್ರೆಸ್ ಮತ್ತಷ್ಟು ದೂರ ಮಾಡಿದಂತಾಗಿರುವುದರ ಜತೆಗೆ ಹಿಟ್ನಾಳ ಕುಟುಂಬ ಗಂಗಾವತಿ ವಿಧಾನಸಭಾ ಕ್ಷೇತ್ರದ ಮೇಲೆಯೂ ಕಣ್ಣಿಟ್ಟಿದೆ ಎನ್ನುವುದಕ್ಕೆ ಮತ್ತಷ್ಟು ಇಂಬು ನೀಡಿದಂತಾಗಿದೆ.

ಏನಿದು ಅಧಿಕಾರ?: ರಾಜ್ಯಾದ್ಯಂತ ನಡೆಯುವ ಎಸ್‌ಐಆರ್ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೂತ್ ಮಟ್ಟದ ಎಜೆಂಟರ್ ನ್ನು ನೇಮಕ ಮಾಡಬೇಕಾಗಿದೆ. ಇದಕ್ಕಾಗಿ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರ ನೀಡಿ ಜವಾಬ್ದಾರಿ ವಹಿಸಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ, ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಶಿವರಾಜ ತಂಗಡಗಿ, ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಬಸವರಾಜ ರಾಯರಡ್ಡಿಗೆ ಅಧಿಕಾರ ನೀಡಿದೆ. ಅದರಂತೆ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಅಧಿಕಾರ ನೀಡಬೇಕಾಗಿತ್ತು. ಕಳೆದ ಬಾರಿ ಸೋತಿರುವ ಅಭ್ಯರ್ಥಿಯಾಗಿರುವದರಿಂದ ಅವರಿಗೆ ಅವಕಾಶ ನೀಡಬೇಕಾಗಿತ್ತು. ಆದರೆ, ಅವರ ಬದಲಾಗಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳಗೆ ಅಧಿಕಾರ ನೀಡಲಾಗಿದೆ.


ರಾಜಕೀಯ ಚರ್ಚೆ: ರಾಜ್ಯಾದ್ಯಂತ ಕೆಪಿಸಿಸಿ ಸೋತ ಅಥವಾ ಗೆದ್ದವರಿಗೆ ಆಯಾ ಕ್ಷೇತ್ರದಲ್ಲಿ ಬೂತ್ ಮಟ್ಟದ ಎಜೆಂಟರ್ ನೇಮಕ ಮಾಡುವ ಅಧಿಕಾರ ನೀಡಿದೆ. ಆದರೆ, ಕೇವಲ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಪರಾಭವಗೊಂಡಿರುವ ಇಕ್ಬಾಲ್ ಅನ್ಸಾರಿಯವರನ್ನು ಕೈಬಿಟ್ಟು, ಸಂಸದ ರಾಜಶೇಖರ ಹಿಟ್ನಾಳಗೆ ಅವಕಾಶ ನೀಡಿರುವುದು ಈಗ ರಾಜಕೀಯ ನಾನಾ ಮಜಲುಗಳ ಚರ್ಚೆಗೆ ದಾರಿಯಾಗಿದೆ.

ಅನ್ಸಾರಿ ಕೈ ಬಿಟ್ಟಿತಾ ಕಾಂಗ್ರೆಸ್‌:ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಈಗಾಗಲೇ ಸಾಕಷ್ಟು ಬಾರಿ ಕಡೆಗಣಿಸಿರುವ ಬಗ್ಗೆ ಇಕ್ಬಾಲ್ ಅನ್ಸಾರಿ ಖುದ್ದು ಆರೋಪಿಸಿದ್ದಾರೆ. ಅದರಲ್ಲೂ ಹಿಟ್ನಾಳ ಕುಟುಂಬದ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿರುವುದು ಗೊತ್ತಿರುವ ಸಂಗತಿಯೇ ಆಗಿದೆ. ಅದರಲ್ಲೂ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಸದಸ್ಯತ್ವ ಅಭಿಯಾನದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಸದಸ್ಯರನ್ನು ನೋಂದಾಯಿಸಿದ್ದರು. ಈಗ ಅವರನ್ನು ಪಕ್ಷ ಕಡೆಗಣಿಸಿರುವುದು ಇಕ್ಬಾಲ್ ಅನ್ಸಾರಿ ಅವರಿಗೆ ಕಾಂಗ್ರೆಸ್ ಪಕ್ಷ ಗೇಟ್ ಪಾಸ್ ನೀಡಲು ಮುಂದಾಯಿತಾ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಅದರಲ್ಲೂ ಗಂಗಾವತಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸಂಸದ ರಾಜಶೇಖರ ಹಿಟ್ನಾಳಗೆ ಬೂತ್ ಮಟ್ಟದ ಎಜೆಂಟರ್ ನೇಮಕ ಮಾಡಲು ಅಧಿಕಾರ ನೀಡಿದ್ದು ಈ ಎಲ್ಲ ಚರ್ಚೆಗೆ ರೆಕ್ಕೆಪುಕ್ಕ ಬರುವಂತೆ ಮಾಡಿದೆ.

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್ 2 ನೇಮಕ ವಿಳಂಬವಾಗಿದ್ದರಿಂದ ನನಗೆ ಅಧಿಕಾರ ನೀಡಿದ್ದಾರೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಹಳ ದಿನಗಳಿಂದ ಬರದೇ ಇರುವುದರಿಂದ ಜವಾಬ್ದಾರಿ ನೀಡಿದ್ದಾರೆ. ಬೇರೆ ಜಿಲ್ಲೆಯಲ್ಲಿಯೂ ಬೇರೆ ಬೇರೆಯವರನ್ನು ನೇಮಕ ಮಾಡಿದ್ದಾರೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.