ಗಂಗಾವತಿ: ಪ್ರಶಿಕ್ಷಣದ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಸೈದ್ದಾಂತಿಕ ನಿಲುವು, ಶಿಸ್ತು, ಸಂಯಮ, ಸಂಸ್ಕೃತಿ, ಸಂಪ್ರದಾಯದ ಜತೆಗೆ ವ್ಯಕ್ತಿತ್ವ ರೂಪಿಸುವ ದೇಶದ ಏಕೈಕ ಪಕ್ಷ ಬಿಜೆಪಿ. ಈ ಪಕ್ಷದ ರಚನೆಯ ಮೂಲ ಉದ್ದೇಶ ದೇಶ ಅಭಿವೃ ದ್ಧಿ, ಸನಾತನ ಧರ್ಮದ ರಕ್ಷಣೆ ಎಂದು ಕೇಂದ್ರ ಮಾಜಿ ಸಚಿವ ಭಗವಂತ್ ಖೂಬಾ ಅಭಿಪ್ರಾಯಪಟ್ಟರು.

ತಾಲೂಕಿನ ಮರಳಿ ಸಮೀಪದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ರಾಯಚೂರು ಜಿಲ್ಲೆಯ ಪ್ರಶಿಕ್ಷಣ ವರ್ಗದವರಿಗೆ ನಡೆದ ಎರಡು ದಿನಗಳ ಪಂಡಿತ ದೀನದಯಾಳ್ ಉಪಾ ಧ್ಯಾಯ ಪ್ರಶಿಕ್ಷಣ ಮಹಾಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಹಲವು ಪಕ್ಷಗಳಿವೆ. ಪಕ್ಷದ ಕಾರ್ಯಕರ್ತರನ್ನ ಸೈದ್ಧಾಂತಿಕ ಕಾರ್ಯಕರ್ತರನ್ನಾಗಿ ಪರಿವರ್ತನೆ ಮಾಡುವ ಪಕ್ಷ ಯಾವುದು ಇಲ್ಲ. ಈ ಕೆಲಸ ಬಿಜೆಪಿ ಮಾತ್ರ ಮಾಡುತ್ತಿದೆ. ಸದ್ಯದ ಪ್ರಶಿಕ್ಷಣ ಶಿಬಿರವು ದೇಶ, ರಾಜ್ಯ, ಜಿಲ್ಲೆಯ ರಾಜಕೀಯ ಪರಿಸ್ಥಿತಿ ತಿಳಿಸಲಿದ್ದು, ಪ್ರಶಿಕ್ಷಣ ವರ್ಗದವರು ಎಲ್ಲ ಗಮನ ಹರಿಸಿ ಮಾಹಿತಿ ಪಡೆಯಬೇಕೆಂದರು.

ಜಗತ್ತಿನ ಯಶಸ್ವಿ ವ್ಯಕ್ತಿಗಳ ಇತಿಹಾಸ ತಿಳಿದಾಗ ಹುಟ್ಟಿನಿಂದ-ಸಾವಿನವರೆಗೆ ನಿರಂತರ ಕಲಿಕೆ, ವಿದ್ಯಾರ್ಥಿ ಮನೋಭಾವ ಹೊಂದಿರುತ್ತಾರೆ. ಈಗ ಅಧಿಕಾರವೆಂದರೇ ಎಲ್ಲರ

ಹಣಗಳಿಸುವುದು, ಶ್ರೀಮಂತರಾಗುವುದು ಎಂದು ತಿಳಿಯುತ್ತಿದ್ದಾರೆ. ಬಿಜೆಪಿ ಹಾಗಲ್ಲ, ಪಕ್ಷದ ಸಿದ್ಧಾಂತ,ರಾಜಕೀಯ ಮಹತ್ವ, ಬದುಕಿನ ಮೌಲ್ಯ ತಿಳಿಸುತ್ತದೆ ಎಂದರು.


ಬಿಜೆಪಿ ಸಾಮಾನ್ಯ ರಾಜಕೀಯ ಪಕ್ಷವಲ್ಲ.ಅಂತ್ಯೋದಯ ಪರಿಕಲ್ಪನೆಯಡಿ ಜಾತಿ, ಧರ್ಮ,ಪಂಥ, ಪಂಗಡ ಮೀರಿ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣುತ್ತಾ ಸರ್ಕಾರಿ ಯೋ ಜನೆ ತಲುಪಿಸುತ್ತಿದೆ. ಬಿಜೆಪಿ ದೇಶದಲ್ಲಿರುವ ಎಲ್ಲ ಜನರ ಸಂಸ್ಕೃತಿ, ಸಂಪ್ರದಾಯ ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ನಮ್ಮ ದೇಶದ ಕಲೆ, ವಾಸ್ತುಶಿಲ್ಪ ಸೇರಿದಂತೆ ಧರ್ಮ ವಿನಾಶಕ್ಕೆ ದಂಡೆತ್ತಿ ಬಂದು ದಾಳಿ ನಡೆಸಿದರೂ ಸನಾತನ ಧರ್ಮ ಅಂತ್ಯಕಂಡಿಲ್ಲ. ಇನ್ನೂ ಜೀವಂತವಿದೆ. ಬಿಜೆಪಿ ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳ ಮೂಲ ಉದ್ದೇಶ ಕುಟುಂಬ ರಾಜಕಾರಣ, ಕುಟುಂಬ ಬೆಳೆಸುವುದು ಆಗಿದೆ. ಇವರು ಅಧಿಕಾರ ಚುನಾವಣೆ ನಡೆಸಲು ಮಾತ್ರ ಬಳಸುತ್ತಾರೆ ಎಂದರು.

ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿದ ಎಲ್ಲ ಕಾರ್ಯಕರ್ತರು ವೈಯಕ್ತಿಕ ವಿಚಾರ ಬದಿಗಿಟ್ಟು, ಶಿಸ್ತಿನಿಂದ ಎಲ್ಲವನ್ನು ಕೇಳಿ, ಕಲಿಯಬೇಕು. ಎಲ್ಲರೂ ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.

ಈ ವೇಳೆ ಮಾಜಿ ಸಂಸದ ವಿರುಪಾಕ್ಷಪ್ಪ, ಬಸವಂತರಾಯ ಕುರಿ, ಪ್ರತಾಪಗೌಡ ಪಾಟೀಲ, ಸಂತೋಷ ರಾಜಗುರು, ರಾಜಕುಮಾರ, ಗಂಗಾಧರನಾಯ್ಕ, ಕರಿಯಪ್ಪ, ಅಮರನಾಥ ಪಾಟೀಲ, ಸುಧಾಕರ, ದಿವಾಕರ್, ಶ್ರೀಕಾಂತ ಕುಲಕರ್ಣಿ, ಎನ್.ಶಂಕ್ರಣ್ಣ ,ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್, ವಿಭಾಗ ಪ್ರಭಾರಿ ಅಮರನಾಥ ಪಾಟೀಲ, ಶರಣಪ್ಪ ಕಾರ್ಯಕರ್ತರು ಉಪಸ್ಥಿತರಿದ್ದರು.