ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅವಳಿ ನಗರ ಹಾಗೂ ತೇರದಾಳ ಠಾಣೆ ವ್ಯಾಪ್ತಿಯ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬನಹಟ್ಟಿ ವೃತ್ತ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎರಡು ಗಾಂಜಾ ಪ್ರಕರಣಗಳು ಹಾಗೂ ಐದು ಚಿನ್ನಾಭರಣ ಕಳವು ಪ್ರಕರಣಗಳನ್ನು ಭೇದಿಸಿದ್ದಾರೆ. ಅಲ್ಲದೇ, ಒಟ್ಟು ₹೭.೬೩ ಲಕ್ಷ ಮೌಲ್ಯದ ಸ್ವತ್ತು ಹಾಗೂ ₹ ೭೨ ಸಾವಿರ ನಗದು ವಶಪಡಿಸಿಕೊಂಡಿದ್ದು, ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರದಾಳ ಹಾಗೂ ಬನಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಳವು ಹಾಗೂ ಮಾದಕ ವಸ್ತು ಸಾಗಾಟ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ತನಿಖೆ ವೇಳೆ ದೊರೆತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಕಳುವಾದ ಹಾಗೂ ಅಕ್ರಮವಾಗಿ ಹೊಂದಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪೊಲೀಸರ ಕಾರ್ಯಾಚರಣೆಯಲ್ಲಿ ೧.೩ ಕೆ.ಜಿ ಗಾಂಜಾ, ಸುಮಾರು ₹೬.೫೫ ಲಕ್ಷ ಮೌಲ್ಯದ ೫೩.೬ ಗ್ರಾಂ ಚಿನ್ನಾಭರಣ, ೩೦ ಗ್ರಾಂ ಬೆಳ್ಳಿ, ಎರಡು ಬೈಕ್ ಸೇರಿದಂತೆ ಒಟ್ಟು ₹೭.೬೩ ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಇದಲ್ಲದೆ, ಆರೋಪಿಗಳಿಂದ ₹೭೨ ಸಾವಿರ ನಗದು ಕೂಡ ವಶಪಡಿಸಿಕೊಳ್ಳಲಾಗಿದೆ.ಈ ಪ್ರಕರಣಗಳನ್ನು ಭೇದಿಸಿ ಕಳುವಾದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದ ಹಲವು ಕುಟುಂಬಗಳಿಗೆ ಮತ್ತೆ ತಮ್ಮ ಆಭರಣಗಳು ದೊರಕಿಸಿಕೊಡಲಾಗಿದೆ. ಗಾಂಜಾ ಸಾಗಾಟ ಮತ್ತು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿರುವುದು ಅಪರಾಧ ನಿಯಂತ್ರಣದಲ್ಲಿ ಮಹತ್ವದ ಯಶಸ್ಸು ಎಂದು ತಿಳಿಸಿದರು.
ಪ್ರಕರಣಗಳ ಪತ್ತೆ ಹಾಗೂ ಆರೋಪಿಗಳ ಬಂಧನದಲ್ಲಿ ಬನಹಟ್ಟಿ ವೃತ್ತ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡದ ಕಾರ್ಯವನ್ನು ಪ್ರದರ್ಶಿಸಿದ್ದಾರೆ. ಅವರ ಕರ್ತವ್ಯನಿಷ್ಠೆ ಹಾಗೂ ತ್ವರಿತ ತನಿಖೆಯನ್ನು ಎಸ್ಪಿ ಸಿದ್ಧಾರ್ಥ ಗೋಯಲ್ ಶ್ಲಾಘಿಸಿ ಅಭಿನಂದಿಸಿದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಕಳವು ಹಾಗೂ ಇತರೆ ಅಪರಾಧ ಚಟುವಟಿಕೆಗಳ ವಿರುದ್ಧ ಮುಂದೆಯೂ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಯಲಿದೆ. ಮಹಾನಗರ ಮತ್ತು ಪಾಲಿಕೆಗಳಲ್ಲಿ ಡ್ರಗ್ಸ್ ಜಾಲ ಶಾಲೆ-ಕಾಲೇಜುಗಳಲ್ಲಿ ಮಾದಕ ವಸ್ತು ಹರಡುತ್ತಿದೆ. ಇದೀಗ ಮಧ್ಯಮ ಗಾತ್ರದ ನಗರಗಳ ಮೇಲೂ ದುರುಳರು ಕಣ್ಣು ಹಾಕುತ್ತಿದ್ದು, ಅದಕ್ಕೆ ಅವಕಾಶ ಕಲ್ಪಿಸದೇ ನಮ್ಮ ಇಲಾಖೆ ಕಠಿಣ ಕಾರ್ಯಾಚರಣೆಗಿಳಿದಿದೆ. ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು. ಮಾಹಿತಿದಾರರ ಹೆಸರು ಗೌಪ್ಯವಾಗಿಟ್ಟು, ಸೂಕ್ತ ಬಹುಮಾನ ನೀಡಲಾಗುತ್ತದೆಂದು ತಿಳಿಸಿದರು.
ಈ ವೇಳೆ ಸಿಪಿಐ ರಾಜು ಪಾಟೀಲ, ಪಿಎಸ್‌ಐ ಶಿವರಾಜ ಧರಿಗೋಣ, ಕ್ರೈಂ ಪಿಎಸ್‌ಐ ಪುರಂದರ ಪೂಜಾರಿ, ಮಹಾಲಿಂಗಪೂರ ಕಿರಣ ಸತ್ತಿಗೇರಿ, ತೇರದಾಳ ಶಿವಾನಂದ ಸಿಂಗನ್ನವರ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.-