ತೀರ್ಥಹಳ್ಳಿಯಲ್ಲಿ ಶಿರಚ್ಛೇದನ ಸ್ಮಾರಕ ಶಿಲ್ಪ ಪತ್ತೆ

| Published : Sep 02 2024, 02:06 AM IST

ತೀರ್ಥಹಳ್ಳಿಯಲ್ಲಿ ಶಿರಚ್ಛೇದನ ಸ್ಮಾರಕ ಶಿಲ್ಪ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿ ತಾಲೂಕಿನ ಆರಗದ ವೀರಭದ್ರ ದೇವಾಲಯದ ಆವರಣದಲ್ಲಿ ಸುಮಾರು ಎರಡು ಮೀಟರ್‌ ಉದ್ದದ ಗ್ರಾನೈಟ್ ಶಿಲೆಯ ಗರುಡ ಪದ್ಧತಿಯ ಶಿರಚ್ಛೇದನ ಸ್ಮಾರಕ ಶಿಲ್ಪ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಿನ ಆರಗದ ವೀರಭದ್ರ ದೇವಾಲಯದ ಆವರಣದಲ್ಲಿ ಸುಮಾರು ಎರಡು ಮೀಟರ್‌ ಉದ್ದದ ಗ್ರಾನೈಟ್ ಶಿಲೆಯ ಗರುಡ ಪದ್ಧತಿಯ ಶಿರಚ್ಛೇದನ ಸ್ಮಾರಕ ಶಿಲ್ಪ ಪತ್ತೆಯಾಗಿದೆ.

ಈ ಶಿಲ್ಪವು ಎರಡು ಪಟ್ಟಿಕೆಗಳಿಂದ ಕೂಡಿದ್ದು, ಕೆಳಗಿನ ಪಟ್ಟಿಕೆಯಲ್ಲಿ ವೇಳಾವಳಿ, ಗರುಡ ಹೋಗುವ ವೀರ ಕುದುರೆಯ ಮೇಲೆ ಕುಳಿತು ಕತ್ತಿಯನ್ನು ಹಿಡಿದಿದ್ದಾನೆ. ಇವನಿಗೆ ಹಿಂಭಾಗದಲ್ಲಿ ಛತ್ರಿಯನ್ನು ಸೇವಕ ಹಿಡಿದಿದ್ದಾನೆ. ಆದ್ದರಿಂದ ಇವನನ್ನು ರಾಜ ಪ್ರಮುಖನೆಂದು ತಿಳಿಯಬಹುದಾಗಿದೆ. ಹಿಂಭಾಗದಲ್ಲಿ ಮಹಿಳೆಯು ಕತ್ತಿಯನ್ನು ಹಿಡಿದು ನಿಂತಿದ್ದಾಳೆ.

ಎರಡನೇ ಪಟ್ಟಿಕೆಯಲ್ಲಿ ಗರುಡ ಹೊದಂತಹ ವೀರನು ವೀರಾಸನದಲ್ಲಿ ನಿಂತಿದ್ದು, ರುಂಡವನ್ನು ಕತ್ತರಿಸಲಾಗಿದ್ದು ಬಲಗೈಯಲ್ಲಿ ಕತ್ತಿಯನ್ನು ಹಿಡಿದು ಮುಂಡದ ಮೇಲೆ ಹಲಗೆಯ ರೀತಿಯನ್ನು ಹೊತ್ತುಕೊಂಡಿದ್ದು, ಇದನ್ನು ಕೈಯಲ್ಲಿ ಹಿಡಿದಿರುವಂತಿದೆ. ಈ ಶಿರಚ್ಛೇದನ ಶಿಲ್ಪದ ಪಕ್ಕದಲ್ಲಿ ಮಹಿಳೆಯು ಶಿರಚ್ಛೇದನವಾದ ರುಂಡವನ್ನು ಕೈಯಲ್ಲಿ ಹಿಡಿದು ನಿಂತಿದ್ದಾಳೆ. ಮೂರನೇ ಪಟ್ಟಿಕೆಯಲ್ಲಿ ಇಲ್ಲಿ ಪಟ್ಟಿಕೆಯ ಶಿಲ್ಪಗಳ ಬದಲು ಲಿಂಗದ ರೀತಿಯಲ್ಲಿ ಇರುವ ಕಂಬವಿದ್ದು ಇದರಲ್ಲಿ ಲಿಂಗದ ಉಬ್ಬು ಶಿಲ್ಪವಿದೆ. ಈ ಲಿಂಗದ/ಕಂಬದ ಮೇಲೆ ಸಮತಟ್ಟಾಗಿದೆ.

ಶಿರಚ್ಛೇದನ ಸ್ಮಾರಕ ಶಿಲ್ಪದ ಮಹತ್ವ:

ಆತ್ಮಬಲಿದಾನವು ಹಿಂದೂಗಳ ದೃಷ್ಟಿಯಲ್ಲಿ ಮಹತ್ವ ಪೂರ್ಣವಾಗಿದ್ದು, ಆತ್ಮ ಬಲಿದಾನ ಮಾಡಿಕೊಳ್ಳಲು ಶುಭ ತಿಥಿಗಳು ಒಳ್ಳೆಯವು ಎಂಬ ನಂಬಿಕೆ ಇದೆ. ವ್ಯಕ್ತಿಗಳು ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುವಂತಹ ಅಥವಾ ಇನ್ನೊಬ್ಬರ ಸಹಾಯದಿಂದ ಮಾಡಿಕೊಳ್ಳುವಂತಹದ್ದು ಆತ್ಮ ಬಲಿದಾನ (ದೇಹತ್ಯಾಗ) ಎನ್ನಬಹುದು.

ಈ ಸ್ಮಾರಕ ಶಿಲ್ಪವು ಇದುವರೆಗೂ ದೊರೆತಿರುವ ಶಿರಚ್ಛೇದನ ಶಿಲ್ಪಗಳಲ್ಲಿ ತುಂಬಾ ಅಪರೂಪದ್ದು. ಈ ಸ್ಮಾರಕ ಶಿಲ್ಪವನ್ನು ಗರುಡ ಸ್ತಂಬವೆಂದು ಕರೆಯಬಹುದಾಗಿದೆ. ಕರ್ನಾಟಕದಲ್ಲಿ ಇದುವರೆಗೂ ಗರುಡರಾಗಿರುವಂತಹ ಎರಡು ಸ್ಥಂಬಗಳು ಹಳೇಬೀಡು, ಅಗ್ರಹಾರ ಬಾಚಿಹಳ್ಳಿಯಲ್ಲಿ ಮಾತ್ರ ಕಂಡುಬಂದಿವೆ. ಇವು ಹೊಯ್ಸಳರ ಕಾಲದ್ದಾಗಿವೆ.

ಆರಗದಲ್ಲಿ ದೊರೆತಿರುವ ಈ ಶಿರಚ್ಛೇದನ ಸ್ಮಾರಕ ಶಿಲ್ಪವು ಶಾಸನರಹಿತವಾಗಿದ್ದು, ಮೇಲ್ಭಾಗದಲ್ಲಿ ಲಿಂಗದ ಆಕೃತಿಯನ್ನು ಹೊಂದಿದ್ದರು ಹಳೇಬೀಡಿನಲ್ಲಿ ಕಂಡುಬರುವ ಸ್ಥಂಬದ ರೀತಿಯಲ್ಲಿದೆ. ಕೆಳ ಭಾಗದಲ್ಲಿ ಚೌಕಾಕಾರವಾಗಿದ್ದು ಶಿಲ್ಪಗಳಿಂದ ಕೂಡಿದೆ.ಲಿಂಗದ ರೀತಿಯ ಸ್ಥಂಬದ ಮೇಲ್ಭಾಗದಲ್ಲಿ ಚಪ್ಪಾಟೆಯಾಗಿದೆ. ಆದ್ದರಿಂದ ಇದನ್ನು ಶಿವಲಿಂಗ ಎಂದು ಹೇಳುವುದು ಕಷ್ಟವಾಗಿದೆ. ಈ ಭಾಗವು ಹಳೆಬೀಡಿನ ಗರುಡಸ್ಥಂಬದ ವೃತ್ತಾಕಾರದ ರೀತಿಯಲ್ಲಿದೆ ಅರಗ ಶಿಲ್ಪದ ವೃತ್ತಾಕಾರದ ಸ್ಥಂಬದ ಬುಡದಲ್ಲಿ ಯಾವುದೇ ಚಿಕಣಿ ಶಿಲ್ಪಗಳಿಲ್ಲ ಆದರೆ ಲಿಂಗದ ಉಬ್ಬು ಶಿಲ್ಪವನ್ನು ಕಂಡರಿಸಲಾಗಿದೆ. ಕೆಳಭಾಗದ ಚೌಕಾಕಾರದ ಭಾಗದಲ್ಲಿ ಕೈಯಲ್ಲಿ ಹಿಡಿದಿರುವ ರುಂಡವನ್ನು ಮಹಿಳೆಯು ದೇವರಿಗೆ ಆರ್ಪಿಸಿ ಸತಿ ಹೊಗಿರಬಹುದು. ಗರುಡ ಹೋಗಿರುವಂತವರು ಶೈವಾರಾಧಕಾರಾಗಿದ್ದು, ರುಂಡವನ್ನು ಉಬ್ಬು ಶಿಲ್ಪದ ಲಿಂಗಕ್ಕೆ ಅರ್ಪಿಸಿದ್ದಾರೆ.

ಗರುಡ ಪದ್ಧತಿಯ ಸ್ಮಾರಕ ಶಿಲ್ಪ

ಹೊಯ್ಸಳರ ಕಾಲದವರೆಗೆ ಇದ್ದಂತಹ ಗರುಡ ಪದ್ಧತಿ ವಿಜಯನಗರ ಅರಸರ ಕಾಲದಲ್ಲಿಯೂ ಮುಂದುವರೆಯಿತು ಎಂದು ಈ ಗರುಡ ಪದ್ಧತಿಯ ಶಿರಚ್ಛೇದನ ಸ್ಮಾರಕ ಶಿಲ್ಪ ಪತ್ತೆಯಿಂದ ತಿಳಿಯಬಹುದಾಗಿದೆ. ಹಳೇಬೀಡು ಮತ್ತು ಆರಗದ ಸ್ತಂಬಗಳನ್ನು ಗಮನಿಸಿದಾಗ ಒಟ್ಟಾರೆಯಾಗಿ ಗರುಡ ಪದ್ಧತಿಯಲ್ಲಿ ಇದೇ ರೀತಿಯ ಸ್ತಂಬಗಳನ್ನು ಸ್ಥಾಪಿಸಿದ್ದಿರಬೇಕು ಎಂಬುದನ್ನು ಊಹಿಸ ಬಹುದಾಗಿದೆ ಎಂದು ಸ್ಮಾರಕ ಶಿಲ್ಪದ ಬಗ್ಗೆ ಡಾ.ದೇವರಾಜಸ್ವಾಮಿ, ಡಾ.ಜಗದೀಶ. ಟಿ.ಎಂ.ಕೇಶವ ಡಾ.ಗಂಗಾಬಿಕೆ ಗೋವರ್ಧನ, ರಮೇಶ ಹಿರೇಜಂಬೂರು, ಶಶಿಧರ ಹಾಗೂ ಮೋಹನ್‌ ಮಾಹಿತಿ ನೀಡಿದ್ದಾರೆ ಎಂದು ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆ‌ರ್.ಶೇಜೇಶ್ವರ ತಿಳಿಸಿದ್ದಾರೆ.