ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಹಬ್ಬಗಳನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಬೇಕು. ಶಾಂತಿಯುತವಾಗಿ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಆಚರಿಸಿ. ಸರ್ಕಾರದ ನಿರ್ದೇಶನದಂತೆ ಹಬ್ಬಗಳು ಪ್ರತಿಯೊಂದು ಧಾರ್ಮಿಕ ಭಾವನೆ ಗೌರವಿಸುವಂತಿರಬೇಕು ಎಂದು ಡಿವೈಎಸ್ಪಿ ಜಾವೀದ್ ಇನಾಮದಾರ ಹೇಳಿದರು.ನಗರದ ಜೀವ್ಹೆಶ್ವರ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ಯಾದಗಿರಿ ಹಾಗೂ ಶಹಾಪುರ ಪೊಲೀಸ್ ಠಾಣೆಯಿಂದ ಇತ್ತೀಚೆಗೆ ನಡೆದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ಶಾಂತಿ ಸಭೆಯಲ್ಲಿ ಮಾತನಾಡಿ, ಜಾತಿ, ಧರ್ಮಕ್ಕೆ ಧಕ್ಕೆ ತರುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು. ಹಬ್ಬ ಆಚರಣೆ ನೆಪದಲ್ಲಿ ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಎಂ.ಪಾಟೀಲ್ ಮಾತನಾಡಿ, ಗಣೇಶ ಮೂರ್ತಿಗಳ ವಿಸರ್ಜನೆಗೆ ಸಣ್ಣ ಪುಟ್ಟ ಮಕ್ಕಳು ಮೆರವಣಿಗೆ ಹೋಗದಂತೆ ಪೋಷಕರು ಗಮನಹರಿಸಿ ಹಾಗೂ ಮೂರ್ತಿಗಳ ವಿಸರ್ಜನೆ ನಮ್ಮ ಇಲಾಖೆ ಬೇಕಾದ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಉಮಕಾಂತ ಹಳ್ಳೆ ಮಾತನಾಡಿ, ಸರ್ಕಾರ ಸೂಚಿಸಿದ ನಿಯಮ ಪಾಲಿಸುವುದು ಕಡ್ಡಾಯ. ತಪ್ಪಿದ್ದಲ್ಲಿ ಕ್ರಮ ಜರುಗಿಸಲಾಗುವುದು. ನಿಗದಿತ ಸಮಯದಲ್ಲಿ ಪ್ರತಿಷ್ಠಾಪಿಸಿ ಗಣೇಶ ಮೂರ್ತಿ ವಿಸರ್ಜಿಸಬೇಕು ಎಂದರು.ಪಿಎಸ್ಐ ಸೋಮಲಿಂಗಪ್ಪ, ಮಾಜಿ ಸೈನಿಕ ಎಸ್.ಎಂ. ಜಾನಿ, ಪುರಸಭೆ ಮಾಜಿ ಅಧ್ಯಕ್ಷ ಸಣ್ಣ ನಿಂಗಪ್ಪ ನಾಯ್ಕೋಡಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುಂಡಪ್ಪ ತುಂಬಿಗಿ, ಅಡಿವೆಪ್ಪ ಜಾಕಾ, ಪೀಪಲ್ಸ್ ಫೌಂಡೇಶನ್ ಅಧ್ಯಕ್ಷ ಸೈಯದ್ ಇಸಾಕ್ ಹುಸೇನ್ ಖಾಲಿದ್, ದಲಿತ ಮುಖಂಡರಾದ ಶಿವಕುಮಾರ್ ತಳವಾರ್, ಶಿವಪುತ್ರ ಜವಳಿ, ವಿಜಯಕುಮಾರ್ ಎದುರುಮನಿ, ಮಹಾದೇವ ದಿಗ್ಗಿ, ಅಶೋಕ್ ಹೊಸಮನಿ, ಮುಸ್ಲಿಂ ಸಮುದಾಯದ ಮುಖಂಡರಾದ ಸೈಯ ಖಾದ್ರಿ, ಲಾಲ ಅಹ್ಮದ್ ಖುರೇಶಿ, ಮುಸ್ತಫಾ ದರ್ಬನ್, ಮಹಾದೇವಪ್ಪ ಸಾಲಿಮನಿ, ಶ್ರೀರಾಮ ಸೇನೆಯ ತಾಲೂಕಾಧ್ಯಕ್ಷ ಶಿವಕುಮಾರ್ ಶಿರವಾಳ ಇತರರಿದ್ದರು.
ಸಿಂಗಲ್ ವಿಂಡೋ ಸಿಸ್ಟಮ್:ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆಗೆ ಅನುಮತಿ ನೀಡಲು ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗುವದು. ಇಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹಬ್ಬ ಆಚರಣೆಗೆ ಪರವಾನಿಗೆ ಪಡೆಯಬೇಕು. ಸಾರ್ವಜನಿಕರು ಒಂದೊಂದು ಅನುಮತಿ ಪಡೆಯಲು ಒಂದೊಂದು ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಏಕ ಕಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ಡಿವೈಎಸ್ಪಿ ಜಾವೀದ್ ಇನಾಮದಾರ್ ತಿಳಿಸಿದರು.