ಕನ್ನಡಪ್ರಭ ವಾರ್ತೆ ಕೊಪ್ಪಳ:
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿನಿಯರಿಗಾಗಿ ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿಗಳು ಆರಂಭಿಸಿರುವ ವಸತಿಸಹಿತ ಉಚಿತ ಪಿಯು ಕಾಲೇಜು ‘ಶ್ರೀ ಗವಿಸಿದ್ಧೇಶ್ವರ ಗುರುಕುಲ’ ಮಠಾಧೀಶರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಭಾನುವಾರ ಲೋಕಾರ್ಪಣೆಗೊಂಡಿದೆ.ಈ ಕಾಲೇಜು ಗವಿಸಿದ್ಧೇಶ್ವರ ಸ್ವಾಮೀಜಿಗಳ ಕನಸಿನ ಕೂಸು. ಕೊಪ್ಪಳದಿಂದ 11 ಕಿ.ಮೀ. ದೂರದಲ್ಲಿದೆ. ವೀರಶೈವ ಲಿಂಗಾಯತ ಮಠಗಳಲ್ಲಿ ಇದುವರೆಗೂ ವಿದ್ಯಾರ್ಥಿಗಳಿಗಾಗಿ ಪ್ರಸಾದ ನಿಲಯ ದೊಡ್ಡ ಸಂಖ್ಯೆಯಲ್ಲಿ ಇವೆ. ಆದರೆ ಮಹಿಳೆಯರ ಶಿಕ್ಷಣಕ್ಕಾಗಿ ವಸತಿಸಹಿತ ಪಿಯು ಕಾಲೇಜು ಪ್ರಾರಂಭಿಸಿದ್ದು ಇದೇ ಮೊದಲು ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಮಾರು 48 ಎಕರೆ ವಿಸ್ತಾರವಾದ ಕ್ಯಾಂಪಸ್‌ನಲ್ಲಿ ₹60 ಕೋಟಿ ವೆಚ್ಚದಲ್ಲಿ ತಲೆಎತ್ತಿರುವ ಹೈಟೆಕ್ ವಸತಿ ಕಾಲೇಜು ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತಲೂ ಕಡಿಮೆ ಇಲ್ಲ ಎನ್ನುವಂತಿದೆ.ವಿದ್ಯಾರ್ಥಿನಿಯರಿಗೆ ಇಲ್ಲಿ ಪಿಯು ವಿಜ್ಞಾನ, ಕಲಾ ವಿಭಾಗ ಇದ್ದು, ಜತೆಗೆ ಸಿಇಟಿ, ನೀಟ್, ಜೆಇಇ ಸೇರಿದಂತೆ ಹಲವಾರು ವೃತ್ತಿ ತರಬೇತಿ ಕೋರ್ಸ್‌ಗಳಿಗೆ ಉಚಿತ ಕೋಚಿಂಗ್ ಸಹ ಲಭ್ಯವಿರುತ್ತದೆ. ಕಾಲೇಜು, ತರಬೇತಿ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಆದರೆ, ವಿದ್ಯಾರ್ಥಿನಿಯರು ಊಟದ ವೆಚ್ಚ ಭರಿಸಬೇಕಾಗುತ್ತದೆ. 600 ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶ ಇರುತ್ತದೆ.
ವಿದ್ಯಾಕಾಶಿಯಾಗಲಿ:
ಸಂಸದ ಬಸವರಾಜ ಬೊಮ್ಮಾಯಿ ಗುರುಕುಲ ಲೋಕಾರ್ಪಣೆ ಮಾಡಿ ಮಾತನಾಡಿ, ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಕೈಗೊಳ್ಳುತ್ತಿರುವ ಶೈಕ್ಷಣಿಕ ಕ್ರಾಂತಿಯಿಂದ ಕೊಪ್ಪಳ ವಿದ್ಯಾಕಾಶಿಯಾಗಲಿದೆ ಎಂದು ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು. ಮಕ್ಕಳ ಎದೆಯಲ್ಲಿ ಅಕ್ಷರದ ಹಣತೆ:ಪೂಜಿಸುವ ದೇವರ ಗುಡಿಯಲ್ಲಿನ ದೀಪ ಹಚ್ಚುವುದಕ್ಕಿಂತ ದೀಪವೇ ಇಲ್ಲದ ಗುಡಿಸಲಲ್ಲಿನ ಮಕ್ಕಳ ಎದೆಯಲ್ಲಿ ಅಕ್ಷರದ ಹಣತೆ ಹಚ್ಚುವುದು ಗವಿಮಠ ಶ್ರೀಗಳ ಪರಂಪರೆ ಮತ್ತು ಸಂಕಲ್ಪವಾಗಿದೆ. ಎಲ್ಲರ ಕಳಕಳಿ ಮತ್ತು ಕೊಡುಗೈ ದಾನಿಗಳಿಂದ ಇಂಥದ್ದೊಂದು ದೊಡ್ಡ ಶಿಕ್ಷಣ ಸಂಸ್ಥೆ ಹೆಣ್ಣುಮಕ್ಕಳಿಗಾಗಿ ತಲೆ ಎತ್ತಿದೆ.
- ಗವಿಸಿದ್ಧೇಶ್ವರ ಸ್ವಾಮೀಜಿ