ಸಾರಾಂಶ
ಮುಸ್ಲಿಂ ಯುವತಿ ಪ್ರೀತಿಸಿದ್ದ ಎನ್ನುವ ಕಾರಣಕ್ಕಾಗಿ ಸಾದಿಕ್ ಮತ್ತು ಆತನ ಗ್ಯಾಂಗ್ ನಡುರಸ್ತೆಯಲ್ಲಿಯೇ ಗವಿಸಿದ್ದಪ್ಪನನ್ನುಕೊಲೆ ಮಾಡಿದ್ದು ಈ ಪ್ರಕರಣ ಖಂಡಿಸಿ ಮತ್ತು ಕಠಿಣ ಶಿಕ್ಷೆಗೆ ಆಗ್ರಹಿಸಿ ಅಂದು ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ.
ಕೊಪ್ಪಳ:
ತ್ರಿಕೋನ ಪ್ರೇಮ ಪ್ರಕರಣದಲ್ಲಿ ಗವಿಸಿದ್ದಪ್ಪ ನಾಯಕ ಕೊಲೆಯಾಗಿರುವ ಘಟನೆ ಖಂಡಿಸಿ ಆ. 11ರಂದು ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗವಿಸಿದ್ದಪ್ಪನ ತಂದೆ ನಿಂಗಜ್ಜ ಹಾಗೂ ಕುಟುಂಬಸ್ಥರು ನಗರದಲ್ಲಿ ಕರಪತ್ರ ಹಂಚಿ ಮನವಿ ಮಾಡಿದರು.ಗುರುವಾರ ನಗರದ ಜವಹಾರ ರಸ್ತೆ ಸೇರಿದಂತೆ ಮಾರುಕಟ್ಟೆಯಲ್ಲಿ ಅಂಗಡಿ, ಮುಂಗಟ್ಟುಗಳಿಗೆ ಹಾಗೂ ದಾರಿಯುದ್ದಕ್ಕೂ ಕರಪತ್ರ ಹಂಚಿ ಮನವಿ ಸಲ್ಲಿಸಿದರು. ನನ್ನ ಮಗನ ಸ್ಥಿತಿ ಬೇರೆಯವರಿಗೆ ಬರಬಾರದು. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಇನ್ನೆಂದು ಇಂಥ ಘಟನೆ ನಡೆಯದಂತೆ ಸಂದೇಶ ಸಾರಲು ತಾವೆಲ್ಲ ಭಾಗವಹಿಸುವಂತೆ ಕೋರಿದರು.ಮುಸ್ಲಿಂ ಯುವತಿ ಪ್ರೀತಿಸಿದ್ದ ಎನ್ನುವ ಕಾರಣಕ್ಕಾಗಿ ಸಾದಿಕ್ ಮತ್ತು ಆತನ ಗ್ಯಾಂಗ್ ನಡುರಸ್ತೆಯಲ್ಲಿಯೇ ಕೊಲೆ ಮಾಡಿದ್ದು ಈ ಪ್ರಕರಣ ಖಂಡಿಸಿ ಮತ್ತು ಕಠಿಣ ಶಿಕ್ಷೆಗೆ ಆಗ್ರಹಿಸಿ ಅಂದು ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ.ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ:ಗವಿಸಿದ್ದಪ್ಪ ನಾಯಕ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಸೋಲಿಡಾರಿಟಿ ಯೂತ್ ಮೂಮ್‌ಮೆಂಟ್ ಜಿಲ್ಲಾ ಘಟಕದ ಪದಾಧಿಕಾರಿ ಆಗ್ರಹಿಸಿದ್ದಾರೆ.ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಅವರಿಗೆ ಮನವಿ ಸಲ್ಲಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇನ್ನೆಂದು ಇಂಥ ಘಟನೆ ಮರುಕಳಿಸದಂತೆ ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ.ಹತ್ಯೆ ಪ್ರಕರಣವು ತೀವ್ರ ಆತಂಕ ಸೃಷ್ಟಿಸಿದೆ. ಗವಿಸಿದ್ದಪ್ಪನನ್ನು ಪ್ರೀತಿ ವಿಷಯಕ್ಕೆ ಕೊಲೆ ಮಾಡಲಾಗಿದೆ ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದರೂ ಬೇರೆ-ಬೇರೆ ಆಯಾಮ ಪಡೆಯುತ್ತಿದೆ. ಈಗಾಗಲೇ ತಪ್ಪಿತಸ್ಥರು ಬಂಧಿತರಾಗಿದ್ದಾರೆ. ಈ ಘಟನೆಯು ಶಾಂತಿ, ಕಾನೂನು ಮತ್ತು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿದ ಪರಿಣಾಮ ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆ ಪ್ರಕಟವಾಗುವಂತೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ಕೋರಿಕೊಂಡಿದ್ದಾರೆ.ಶಾಲಾ-ಕಾಲೇಜು ಮತ್ತು ಯುವ ಸಮುದಾಯದಲ್ಲಿ ಶಾಂತಿ ಸಂದೇಶ ಹರಡುವ ಕೆಲಸ ಮಾಡಬೇಕು. ಆರೋಪಿಗಳು ಗಾಂಜಾ ಸೇವನೆ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ನಗರದಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಕ್ರಮಕೈಗೊಳ್ಳಬೇಕು. ಪ್ರಕರಣದಲ್ಲಿ ಜಾತಿಯ ಹಾಗೂ ಕೋಮು ದ್ವೇಷದ ಭಾವನೆ ಕೆರಳು ಅವಕಾಶ ನೀಡದಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.ಸಂಘಟನೆ ಜಿಲ್ಲಾಧ್ಯಕ್ಷ ಎಜಾಜ್ ಅಹ್ಮದ್ ಶರೀಫ್, ಗೌಸಾ ಪಾಷಾ ಪಟೇಲ್, ರೆಹಮದ ಹುಸೇನ್, ಮಹಮ್ಮದ್ ಯೂಸೂಫ್ ಇದ್ದರು.