ಬಾಲ್ಯ ವಿವಾಹ ದೇಶಕ್ಕೆ ಅಂಟಿದ ಪಿಡುಗು

| Published : Aug 09 2025, 12:01 AM IST

ಸಾರಾಂಶ

ಮೂಢನಂಬಿಕೆ, ಅನಕ್ಷರತೆ, ಬಡತನ, ಬಾಲ್ಯ ವಿವಾಹದ ದುಷ್ಪರಿಣಾಮದ ಬಗ್ಗೆ ಅರಿವು ಇಲ್ಲದೆ ಇರುವುದರಿಂದ ಬಾಲ್ಯ ವಿವಾಹ ನಡೆಯುತ್ತವೆ. ಇದು ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಕೊಪ್ಪಳ:

ಬಾಲ್ಯವಿವಾಹ ದೇಶಕ್ಕೆ ಅಂಟಿದ ದೊಡ್ಡ ಪಿಡುಗಾಗಿದ್ದು ಇದನ್ನು ತಡೆಗಟ್ಟಿ ಮಕ್ಕಳು ಬೆಳೆಯಲು ಅವಕಾಶ ನೀಡಬೇಕೆಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದರು.

ಗಂಗಾವತಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಕಾರಟಗಿ ಸಿಎಂಎನ್ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ಬಾಲ್ಯವಿವಾಹ ನಿಷೇಧ ಹಾಗೂ ಹದಿ-ಹರೆಯದವರ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೂಢನಂಬಿಕೆ, ಅನಕ್ಷರತೆ, ಬಡತನ, ಬಾಲ್ಯ ವಿವಾಹದ ದುಷ್ಪರಿಣಾಮದ ಬಗ್ಗೆ ಅರಿವು ಇಲ್ಲದೆ ಇರುವುದರಿಂದ ಬಾಲ್ಯ ವಿವಾಹ ನಡೆಯುತ್ತವೆ. ಇದು ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯ ವಿವಾಹದಿಂದ ಇಬ್ಬರಿಗೂ ವಯಸ್ಸಿಗೆ ಮೀರಿದ ಜವಾಬ್ದಾರಿ ನೀಡದಂತೆ ಆಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿ ಆಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಜೀವಕ್ಕೆ ತೊಂದರೆ ಉಂಟಾಗಲಿದೆ. ಎಚ್‌ಐವಿ, ಏರ್ಡ್‌ನಂತಹ ರೋಗಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಮಾಡುವ ಗುರಿ ಹೊಂದಿದ್ದು ವಿದ್ಯಾರ್ಥಿಗಳು ನಾಯಕತ್ವ ವಹಿಸಿಕೊಂಡು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಾವಿತ್ರಿ ಮಾತನಾಡಿ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ಕುಷ್ಟರೋಗ, ಡೆಂಘೀ, ಚಿಕನ್‌ಗುನ್ಯಾ, ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗ ನಿಯಂತ್ರಣ ಕುರಿತು ಮತ್ತು ಆರ್‌ಕೆಎಸ್‌ಕೆ ಆಪ್ತಸಮಾಲೋಚಕಿ ಶಿಲ್ಪಾ ಅವರು ಸ್ನೇಹ ಕ್ಲಿನಿಕ್ ಸೇವೆಗಳ ಕುರಿತು ಮಾಹಿತಿ ನೀಡಿದರು.ಪ್ರಾಂಶುಪಾಲ ರಮೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.