ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸರಕಾರಿ ನೌಕರರು ವಯೋ ನಿವೃತ್ತಿ ನಂತರ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ಸಮಾಜದ ಋಣ ತೀರಿಸಿದಂತಾಗುತ್ತದೆ ಎಂದು ನಿವೃತ್ತಿ ಆಯುಕ್ತರು ಹಾಗೂ ದಲಿತ ಚಲವಾದಿ ಮಹಾಸಭಾದ ಅಧ್ಯಕ್ಷ ಡಾ.ಪಿ.ಚಂದ್ರಪ್ಪ ತಿಳಿಸಿದ್ದಾರೆ. ನಗರದ ಶಿರಡಿ ಸಾಯಿಬಾಬಾ ನಗರದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಸರಕಾರಿ ಸೇವೆಯಿಂದ ನಿವೃತ್ತರಾದ ಸರಕಾರಿ ಅಭಿಯೋಜಕರಾಗಿದ್ದ ಎಸ್.ರಾಜಣ್ಣ, ಇಂಜಿನಿಯರ್ ನರಸಿಂಹಮೂರ್ತಿ, ಬ್ಯಾಂಕ್ ನೌಕರರಾದ ಹನುಮಂತರಾಯಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯಾವುದೇ ವೃತ್ತಿ ಇರಲಿ, ಪ್ರವೃತ್ತಿಯಿರಲಿ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಜನಮನ್ನಣೆ ಗಳಿಸಲು ಸಾಧ್ಯ. ಯಾವುದೇ ಎಡರು ತೊಡರು ಬಂದರೂ ಜಾಣ್ಮೆಯಿಂದ, ಧೈರ್ಯದಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದರು.ಸರಕಾರಿ ಅಭಿಯೋಜಕರಾಗಿದ್ದ ಎಸ್.ರಾಜಣ್ಣ ಜಕ್ಕೇನಹಳ್ಳಿ ಅವರು, ಸರಕಾರಿ ವಕೀಲರಾಗಿ, ಕಲಾವಿದರಾಗಿ, ಸಮುದಾಯದ ಸಂಘಟಕರಾಗಿ ಬಹುಮುಖ ವ್ಯಕ್ತಿತ್ವ ಹೊಂದಿದವರು.ನೊಂದವರು, ಬಡವರು, ಶೋಷಿತರಿಗೆ ನ್ಯಾಯ ಕೊಡಿಸುವಲ್ಲಿ ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಕಲಾವಿದರಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು. ಇವರ ಕಲಾ ಸೇವೆಗೆ ಬೆಳ್ಳಿಕಿರೀಟದಂತಹ ಪ್ರಶಸ್ತಿ ಲಭಿಸಿರುವುದು ಅವರ ಕಲಾಸೇವೆಗೆ ಸಂದ ಗೌರವ.ಹಾಗೆಯೇ ಇಂಜಿನಿಯರ್ ನರಸಿಂಹಮೂರ್ತಿ ಮತ್ತು ಬ್ಯಾಂಕ್ ಉದ್ಯೋಗಿ ಹನುಮಂತರಾಯಪ್ಪ ಅವರುಗಳು ಸಮಾಜದ ಬಗ್ಗೆ ಕಾಳಜಿ ಹೊಂದಿದ್ದು, ಅವರ ಸೇವೆ ಸಮಾಜಕ್ಕೆ ದೊರೆಯುವಂತಾಗಬೇಕು ಎಂದು ಡಾ.ಪಿ.ಚಂದ್ರಪ್ಪ ನುಡಿದರು.ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ನಿವೃತ್ತ ಮುಖ್ಯ ಇಂಜಿನಿಯರ್ ಆದಿ ನಾರಾಯಣ್ ಮಾತನಾಡಿ,ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾನೂನು ತಜ್ಞರಾದ ಕಾರಣದಿಂದಲೇ ಅವರಿಗೆ ಈ ದೇಶದ ಕರಡು ಸಮಿತಿಯ ಅಧ್ಯಕ್ಷ ಸ್ಥಾನ ದೊರೆತಿದ್ದು, ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಿಗೆ ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಹಾಗೆಯೇ ಸರಕಾರಿ ವೃತ್ತಿನಿಂದ ನಿವೃತ್ತರಾಗಿರುವ ಎಸ್.ರಾಜಣ್ಣನವರು ವಕೀಲರಾಗಿ ತಮ್ಮ ವೃತ್ತಿ ಜೀವನ ಮುಂದುವರೆಸುವ ಮೂಲಕ ನೊಂದವರಿಗೆ ನ್ಯಾಯ ದೊರಕಿಸಲಿ ಎಂದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತಿ ಸರಕಾರಿ ಅಭಿಯೋಜಕ ಎಸ್.ರಾಜಣ್ಣ ಜಕ್ಕೇನಹಳ್ಳಿ, ಸರಕಾರಿ ನೌಕರಿಗೆ ಸೇರಿದ ದಿನದಿಂದಲೂ ಸರಕಾರದ ನೀತಿ ನಿಯಮಗಳಿಗೆ ಬದ್ದರಾಗಿ ಕಾರ್ಯನಿರ್ವಹಿಸಿ, ಕಾನೂನಿನ ಚೌಕಟ್ಟಿನಲ್ಲಿಯೇ ನೊಂದವರಿಗೆ ನ್ಯಾಯ ಒದಗಿಸುವ ಗುರುತರ ಕೆಲಸ ಮಾಡಿದ್ದೇನೆ.ಸಮಾಜದ ಋಣ ನಮ್ಮ ಮೇಲಿದೆ. ಮುಂದಿನ ಜೀವನವನ್ನು ಸಮುದಾಯದ ಸಂಘಟನೆಗೆ ಬಳಸುವ ಮೂಲಕ ತನ್ನ ಕೈಲಾದ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಹಿರಿಯರಾದ ಪುಟ್ಟಬೋರಯ್ಯ,ಎಲ್.ಐ.ಸಿ.ಯ ಆನಂದಮೂರ್ತಿ,ನಿವೃತ್ತ ಉಪವಿಭಾಗಾಧಿಕಾರಿ ದಾಸಪ್ಪ,ಪತ್ರಕರ್ತರಾದ ಹೆಚ್.ಎಸ್.ಪರಮೇಶ್, ಛಲವಾದಿ ಮಹಾಸಭಾ ಪದಾಧಿಕಾರಿಗಳಾದ ಲಕ್ಷ್ಮಿನರಸಿಂಹಯ್ಯ, ಮಂಜುಳ, ಸಿದ್ದನಂಜಯ್ಯ,ರಾಜಯ್ಯ ಮುಖಂಡರಾದ ವಸಂತ್‌ಕುಮಾರ್, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.