ಕಳಪೆ ಕಾಮಗಾರಿ ಗಮನಕ್ಕೆ ತಂದರೆ ಕ್ರಮ: ಬಸವಂತಪ್ಪ

| Published : Jul 24 2024, 12:16 AM IST

ಸಾರಾಂಶ

ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಿ ಎರಡು ತಿಂಗಳೂ ಕಳೆದಿಲ್ಲ. ಉದ್ಘಾಟನೆ ಪೂರ್ವದಲ್ಲಿಯೇ ಕಳಪೆ ಕಾಮಗಾರಿಯಿಂದ ಕಟ್ಟಡಗಳು ಸೋರುತ್ತಿವೆ. ನೀವು ನಿರ್ಮಿಸಿರುವ ಕಟ್ಟಡ ಐದು ವರ್ಷವೂ ಬಾಳಿಕೆ ಬಾರದಂತಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

- ಹೂವಿನಮಡು, ಗಿಡ್ಡೆನಹಳ್ಳಿ ಅಂಗನವಾಡಿ ಕೇಂದ್ರಗಳ ಕಟ್ಟಡ ಉದ್ಘಾಟನೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಿ ಎರಡು ತಿಂಗಳೂ ಕಳೆದಿಲ್ಲ. ಉದ್ಘಾಟನೆ ಪೂರ್ವದಲ್ಲಿಯೇ ಕಳಪೆ ಕಾಮಗಾರಿಯಿಂದ ಕಟ್ಟಡಗಳು ಸೋರುತ್ತಿವೆ. ನೀವು ನಿರ್ಮಿಸಿರುವ ಕಟ್ಟಡ ಐದು ವರ್ಷವೂ ಬಾಳಿಕೆ ಬಾರದಂತಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೂವಿನಮಡು, ಕಂದಗಲ್ಲು ಗ್ರಾಪಂ ವ್ಯಾಪ್ತಿಯ ಗಿಡ್ಡೆನಹಳ್ಳಿಯಲ್ಲಿ ತಲಾ ₹17 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಪೂರ್ವದಲ್ಲಿ ಭಾನುವಾರ ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದರು. ಬಳಿಕ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ₹17 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಲಾಗಿದೆ. ಅಡುಗೆ ಕೊಠಡಿ, ದಾಸ್ತಾನು ಕೊಠಡಿ ಕಳಪೆಯಾಗಿವೆ. ಸರಿಯಾಗಿ ಪ್ಲಾಸ್ಟಿಂಗ್ ಮಾಡಿಲ್ಲ. ಮಳೆಗೆ ಸೋರುತ್ತಿವೆ. ಕಿಟಿಕಿಗಳ ಗುಣಮಟ್ಟ ಸರಿಯಿಲ್ಲ, ಸುಣ್ಣಬಣ್ಣ ಸರಿಯಾಗಿ ಬಳಿದಿಲ್ಲ, ಕಟ್ಟಡದಿಂದ ನೀರು ತೊಟ್ಟಿಕುತ್ತಿವೆ. ಇಲ್ಲಿ ಕಲಿಯುವ ಮಕ್ಕಳ ಭವಿಷ್ಯದ ಕತೆ ಏನು ಎಂದು ಕಿಡಿಕಾರಿದರು.

ದೂರವಾಣಿ ಮೂಲಕ ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರನ್ನು ಸಂಪರ್ಕಿಸಿದ ಶಾಸಕರು, ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಕಟ್ಟಡಗಳು ಐದು ವರ್ಷವೂ ಬಾಳಿಕೆ ಬರುವುದಿಲ್ಲ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಸರ್ಕಾರ ಅಂಗನವಾಡಿ ಕೇಂದ್ರಗಳ ಕಟ್ಟಡವಾಗಲಿ ಅಥವಾ ಯಾವುದೇ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲಿ. ಅದು ಜನರು ತೆರಿಗೆ ಕಟ್ಟಿದ ಹಣದಿಂದ ನಿರ್ಮಿಸಲಾಗುತ್ತದೆ. ಗುಣಮಟ್ಟದ ಕಟ್ಟಡ ನಿರ್ಮಿಸುತ್ತಿದ್ದಾರೆಯೇ ಎಂಬುದನ್ನು ಗ್ರಾಮಸ್ಥರು ಪರಿಶೀಲಿಸಬೇಕು. ಒಂದುವೇಳೆ ಕಳಪೆ ಕಾಮಗಾರಿ ಕಂಡುಬಂದರೆ ಕೂಡಲೇ ಗಮನಕ್ಕೆ ತಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಸಿಡಿಪಿಒ ಅಭಿಕುಮಾರ್, ತಾಪಂ ಇಒ ರಾಮ್‌ಭೋವಿ, ಪಿಡಿಒ ವನಿತಾ, ಪಿಎಸ್‌ಐ ಸಂಜೀವ್‌ಕುಮಾರ್, ದಾನಿ ಡಾ.ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯ ಅಂಜಿನಪ್ಪ, ಸುರೇಶ್, ಅಂಜಿನಪ್ಪ ಡಾ.ಪುಷ್ಪ ಮಲ್ಲಿಕಾರ್ಜುನ್, ಇಂದ್ರಮ್ಮ, ಮಾಲಾ ರವಿ, ವಿಜಯ್‌ಕುಮಾರ್ ಇನ್ನಿತರರಿದ್ದರು.

- - - -22ಕೆಡಿವಿಜಿ45ಃ:

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೂವಿನಮಡು, ಗಿಡ್ಡೆನಹಳ್ಳಿಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ನೂತನ ಅಂಗನವಾಡಿ ಕೇಂದ್ರ ಕಟ್ಟಡಗಳ ಉದ್ಘಾಟಿಸಿ ಮಾತನಾಡಿದರು.