ಸಾಸರವಾಡದಲ್ಲಿ ನೆಫಿಲಾ ಜಾತಿಗೆ ಸೇರಿದ ದೈತ್ಯ ಜೇಡ ಪತ್ತೆ!

| Published : Nov 24 2025, 02:45 AM IST

ಸಾಸರವಾಡದಲ್ಲಿ ನೆಫಿಲಾ ಜಾತಿಗೆ ಸೇರಿದ ದೈತ್ಯ ಜೇಡ ಪತ್ತೆ!
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯ ಜಾತಿಯ ಜೇಡಗಳು 3ರಿಂದ 5 ಮಿಮೀ ಇರುತ್ತವೆ. ಆದರೆ ನೆಫಿಲಾ ಜಾತಿಗೆ ಸೇರಿದ ಹೆಣ್ಣು ಜೇಡಗಳು ಸುಮಾರು 3 ಇಂಚು ಗಾತ್ರ ಹೊಂದಿರುತ್ತವೆ. ಆದರೆ ಗಂಡು ಜೇಡಗಳು ತೀರ ಚಿಕ್ಕದಾಗಿರುತ್ತವೆ. ಅಂದರೆ ಸುಮಾರು 5 ಮಿಮೀದಿಂದ 1 ಸೆಂಮೀ ವರೆಗೆ ಗಾತ್ರ ಹೊಂದಿರುತ್ತವೆ. ಇವು ಹೆಚ್ಚಾಗಿ ಹೆಣ್ಣು ಜೇಡದ ಬಲೆಯ ಮೇಲೆ ವಾಸಿಸುತ್ತವೆ.

ಮಹೇಶ ಛಬ್ಬಿ

ಗದಗ: ಅರೆನಿಡೇ ವರ್ಗದ ನೆಫಿಲಾ ಜಾತಿಗೆ ಸೇರಿದ ದೈತ್ಯ ಜೇಡ ಶಿರಹಟ್ಟಿ ತಾಲೂಕಿನ ಸಾಸರವಾಡ ವ್ಯಾಪ್ತಿಯ ಅರಣ್ಯದಲ್ಲಿ ಪತ್ತೆಯಾಗಿದ್ದು, ಪರಿಸರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

ಇದು ಜೈಂಟ್ ವುಡ್ ಸ್ಪೈಡರ್(Giant Wood Spider) ಅಥವಾ ಗೋಲ್ಡನ್ ಆರ್ಬ್- ವೀವಿಂಗ್ ಸ್ಪೈಡರ್(Golden Orb-Weaving Spider) ಎಂಬುದು ನೆಫಿಲಾ(Nephila) ಕುಲಕ್ಕೆ ಸೇರಿದ ದೊಡ್ಡ ಗಾತ್ರದ ಜೇಡ. ಈ ಜೇಡಗಳು ತಮ್ಮ ಬೃಹತ್ ಗಾತ್ರ, ಬಲವಾದ, ಹಳದಿ ಬಣ್ಣದ ಹೊಳೆಯುವ ಬಲೆಗಳಿಗೆ(ವೆಬ್‌) ಹೆಸರುವಾಸಿಯಾಗಿವೆ.

ಪ್ರಮುಖ ಲಕ್ಷಣಗಳು: ಸಾಮಾನ್ಯ ಜಾತಿಯ ಜೇಡಗಳು 3ರಿಂದ 5 ಮಿಮೀ ಇರುತ್ತವೆ. ಆದರೆ ನೆಫಿಲಾ ಜಾತಿಗೆ ಸೇರಿದ ಹೆಣ್ಣು ಜೇಡಗಳು ಸುಮಾರು 3 ಇಂಚು ಗಾತ್ರ ಹೊಂದಿರುತ್ತವೆ. ಆದರೆ ಗಂಡು ಜೇಡಗಳು ತೀರ ಚಿಕ್ಕದಾಗಿರುತ್ತವೆ. ಅಂದರೆ ಸುಮಾರು 5 ಮಿಮೀದಿಂದ 1 ಸೆಂಮೀ ವರೆಗೆ ಗಾತ್ರ ಹೊಂದಿರುತ್ತವೆ. ಇವು ಹೆಚ್ಚಾಗಿ ಹೆಣ್ಣು ಜೇಡದ ಬಲೆಯ ಮೇಲೆ ವಾಸಿಸುತ್ತವೆ.

ಅತ್ಯಂತ ಗಟ್ಟಿಯಾದ ಬಲೆ: ಇವುಗಳ ಬಲೆಗಳು ದೊಡ್ಡದಾಗಿದ್ದು, ಚಿನ್ನದ ಹಳದಿ ಬಣ್ಣದಿಂದ ಕೂಡಿರುತ್ತವೆ. ಈ ರೇಷ್ಮೆಯು ಪ್ರಕೃತಿಯಲ್ಲಿ ತಿಳಿದಿರುವ ಹಾಗೆ ಅತ್ಯಂತ ಗಟ್ಟಿಯಾದ ನೈಸರ್ಗಿಕ ನಾರುಗಳಲ್ಲಿ ಒಂದಾಗಿದ್ದು, ಬಲೆಗಳು ಕೆಲವೊಮ್ಮೆ ಎರಡು ಮೀಟರ್‌ಗಳಷ್ಟು ಉದ್ದಕ್ಕೂ ಹರಡಿಕೊಂಡಿರುತ್ತವೆ.ವಾಸಸ್ಥಾನ: ನೆಫಿಲಾ ಜಾತಿಗೆ ಸೇರಿದ ದೈತ್ಯ ಜೇಡಗಳು ಪೂರ್ವ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ. ಹಾಗೆಯೇ ಓಷಿಯಾನಿಯಾದಲ್ಲಿ ಕಂಡು ಬರುತ್ತವೆ. ಭಾರತದ ಕಾಡುಗಳಲ್ಲಿ, ವಿಶೇಷವಾಗಿ ಪಶ್ಚಿಮ ಘಟ್ಟಗಳಲ್ಲಿ ಮತ್ತು ಮಧ್ಯ ಭಾರತದ ಅರಣ್ಯಗಳಲ್ಲಿ ಇವು ಸಾಮಾನ್ಯ. ಈ ಜಾತಿಯ ಜೇಡಗಳು ಪಶ್ಚಿಮ ಘಟ್ಟದ ದಟ್ಟ ಅರಣ್ಯಗಳಲ್ಲಿ ಸಾಮಾನ್ಯ. ಉತ್ತರ ಕರ್ನಾಟಕದ ಶುಷ್ಕ ಅರಣ್ಯದಲ್ಲಿ ಪತ್ತೆಯಾಗಿರುವುದು ಇದೇ ಮೊದಲು ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕರು.ತಮ್ಮ ಗಾತ್ರ ಮತ್ತು ನೋಟಕ್ಕೆ ವಿರುದ್ಧವಾಗಿ, ಜೈಂಟ್ ವುಡ್ ಸ್ಪೈಡರ್‌ಗಳು ಸಾಮಾನ್ಯವಾಗಿ ಮನುಷ್ಯರಿಗೆ ಹಾನಿಕಾರಕವಲ್ಲ. ಅವುಗಳ ವಿಷವು ಕೀಟಗಳನ್ನು ಹಿಡಿಯಲು ಬಳಸಲ್ಪಟ್ಟರೂ ಮಾನವರಿಗೆ ಗಂಭೀರ ಹಾನಿಯನ್ನುಂಟು ಮಾಡುವುದಿಲ್ಲ. ಇವು ಮುಖ್ಯವಾಗಿ ಕೀಟಗಳನ್ನು ತಿನ್ನುತ್ತವೆ. ಆದರೆ ಅವುಗಳ ಬಲವಾದ ಬಲೆಯಲ್ಲಿ ಸಿಕ್ಕಿಬಿದ್ದ ಸಣ್ಣ ಹಕ್ಕಿಗಳು ಅಥವಾ ಇತರೆ ಪ್ರಾಣಿಗಳನ್ನು ಸಹ ಬೇಟೆಯಾಡುತ್ತವೆ.

ಪೌಷ್ಟಿಕ ಚಕ್ರ: ತಮ್ಮ ತ್ಯಾಜ್ಯ ಉತ್ಪನ್ನಗಳ ಮೂಲಕ (ಮಲ ವಿಸರ್ಜನೆ ಮತ್ತು ಬೇಟೆಯ ಅವಶೇಷಗಳು), ಜೇಡಗಳು ಸಾವಯವ ವಸ್ತುಗಳ ವಿಭಜನೆಗೆ ಮತ್ತು ಸಾರಜನಕದಂತಹ ಪೋಷಕಾಂಶಗಳ ಸೈಕ್ಲಿಂಗ್‌ಗೆ ಮತ್ತು ಮಣ್ಣಿನ ರಕ್ಷಣೆಗೆ ಸಹಾಯಕವಾಗುವುದರ ಜತೆಗೆ ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸಿ, ಕೀಟಗಳ ನಿಯಂತ್ರಣ ಮಾಡುತ್ತವೆ.ಜೇಡ ಪತ್ತೆ ಹಚ್ಚಿದ ತಂಡ: ಈ ವಿಶಿಷ್ಟ ಜೇಡವನ್ನು ಜೀವವೈವಿಧ್ಯ ಸಂಶೋಧಕರಾದ ಮಂಜುನಾಥ ಎಸ್. ನಾಯಕ, ಸಂಗಮೇಶ್ ಕಡಗದ, ಶರಣು ಗೌಡರ ಅವರು ಪತ್ತೆ ಮಾಡಿದ್ದಾರೆ.

ಜೀವವೈವಿಧ್ಯತೆಯ ಸೂಚಕ: ಜೇಡ ಜನಸಂಖ್ಯೆಯ ಉಪಸ್ಥಿತಿ ಮತ್ತು ವೈವಿಧ್ಯತೆಯು ಪರಿಸರ ಬದಲಾವಣೆಗಳಿಗೆ ಸೂಕ್ಷ್ಮವಾಗಿರುತ್ತದೆ. ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ಒಟ್ಟಾರೆ ಜೀವವೈವಿಧ್ಯತೆಯ ಸೂಚಕಗಳಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ತಿಳಿಸಿದರು.