ಕನ್ನಡಪ್ರಭ ವಾರ್ತೆ ಹಾಸನ

ನಗರದ ಅಪೂರ್ವ ಬಿಲ್ಡಿಂಗ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್‌ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಸ್ಕೌಟ್ ಅಂಡ್ ಗೈಡ್ಸ್ ಭವನದ ಪಕ್ಕದಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ನಡೆದ ಪ್ರತಿಭಟನೆಗೆ ಅಧಿಕಾರಿಗಳು ಸ್ಪಂದಿಸಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.ಎಐಡಿಎಸ್‌ಓ ಜಿಲ್ಲಾಧ್ಯಕ್ಷೆ ಚೈತ್ರಾ ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ವಿದ್ಯಾರ್ಥಿನಿಲಯದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಯರಿಗೆ ಕಿಟಕಿ ಪರದೆ, ಚಪ್ಪಲಿ ಸ್ಟ್ಯಾಂಡ್, ಮ್ಯಾಟ್, ಮಸ್ಕಿಟೊ ಕಾಯಿಲ್, ಬೆಡ್ ಹಾಗೂ ಕಾಟ್ ಸೇರಿದಂತೆ ಕನಿಷ್ಠ ಅಗತ್ಯ ಸೌಲಭ್ಯಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.ಸಮರ್ಪಕ ಫ್ಯಾನ್ ವ್ಯವಸ್ಥೆ ಇಲ್ಲದಿರುವುದರ ಜೊತೆಗೆ ಕಿಟಕಿಗಳಿಗೆ ಪರದೆಗಳಿಲ್ಲ. ಇದರಿಂದ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಗೌಪ್ಯತೆಯ ಸಮಸ್ಯೆಯೂ ಎದುರಾಗಿದೆ. ಬಟ್ಟೆ ಬದಲಾಯಿಸುವ ಸಂದರ್ಭದಲ್ಲಿಯೂ ಬೆಡ್‌ಶೀಟ್‌ಗಳನ್ನು ಪರದೆಯಂತೆ ಬಳಸಬೇಕಾದ ಮುಜುಗರದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಸೊಳ್ಳೆಗಳ ಕಾಟ ಹಾಗೂ ಉಸಿರುಗಟ್ಟುವ ವಾತಾವರಣದಿಂದ ವಿದ್ಯಾರ್ಥಿನಿಯರ ಆರೋಗ್ಯ, ಶಿಕ್ಷಣ ಮತ್ತು ಮಾನಸಿಕ ನೆಮ್ಮದಿಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಈ ಸಮಸ್ಯೆಗಳ ಕುರಿತು ವಿದ್ಯಾರ್ಥಿನಿಯರು ಹಾಸ್ಟೆಲ್ ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ಶಾಶ್ವತ ಪರಿಹಾರ ದೊರೆತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ವಿದ್ಯಾರ್ಥಿನಿಯರು ಎಐಡಿಎಸ್‌ಓ ನೇತೃತ್ವದಲ್ಲಿ ಹೋರಾಟ ನಡೆಸಬೇಕಾಯಿತು ಎಂದು ತಿಳಿಸಿದರು.ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯರ ಮನವಿ ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದರು. ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯ ಬಳಿಕ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳನ್ನು ನಿಗದಿತ ಅವಧಿಯಲ್ಲಿ ಈಡೇರಿಸುವುದಾಗಿ ಭರವಸೆ ನೀಡಲಾಯಿತು. ಒಂದು ವಾರದೊಳಗೆ ಕಿಟಕಿ ಪರದೆ, ಸ್ಲಿಪ್ಪರ್ ಸ್ಟ್ಯಾಂಡ್, ಮ್ಯಾಟ್ ಹಾಗೂ ಸೊಳ್ಳೆ ಕಾಯಿಲ್‌ಗಳನ್ನು ವಿದ್ಯಾರ್ಥಿನಿಲಯಕ್ಕೆ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದರು. ೧೧೦ ಪಿಯು ವಿದ್ಯಾರ್ಥಿನಿಯರು ಇರುವ ವಿದ್ಯಾರ್ಥಿನಿಲಯದಲ್ಲಿ ೧೫ ದಿನಗಳೊಳಗೆ ಪ್ರತಿಯೊಬ್ಬ ವಿದ್ಯಾರ್ಥಿನಿಗೂ ಬೆಡ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟ ಮತ್ತು ಒತ್ತಡಕ್ಕೆ ಸ್ಪಂದಿಸಿ ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿರುವುದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಎಐಡಿಎಸ್‌ಓ ಹೇಳಿದೆ. ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ, ಸುರಕ್ಷತೆ ಹಾಗೂ ಗೌಪ್ಯತೆಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಖಾತರಿಪಡಿಸಬೇಕು. ಅಧಿಕಾರಿಗಳು ನೀಡಿರುವ ಭರವಸೆಗಳನ್ನು ನಿಗದಿತ ಅವಧಿಯೊಳಗೆ ಜಾರಿಗೊಳಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.ನಿಗದಿತ ಅವಧಿಯಲ್ಲಿ ಬೇಡಿಕೆಗಳು ಈಡೇರದಿದ್ದರೆ ಎಐಡಿಎಸ್‌ಓ ಹಾಗೂ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರ ಹೋರಾಟ ಸಮಿತಿ ವತಿಯಿಂದ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.ಪ್ರತಿಭಟನೆಯಲ್ಲಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಉಪಾಧ್ಯಕ್ಷ ಅಭಿಷೇಕ್ ಸೇರಿದಂತೆ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.