ಸಾರಾಂಶ
ನವಲಗುಂದ:
ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸುವ ಜತೆಗೆ ಪರಿಹಾರ ನೀಡಿ ಅವರ ಸಂಕಷ್ಟ ನಿವಾರಿಸುವ ಬದಲು ಕಣ್ಣುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಇದೇ ವೇಳೆ ಶೀಘ್ರ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.ಈ ವೇಳೆ ಮಾತನಾಡಿದ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಹಿಂಗಾರು ಮಳೆ ನಿರಂತರವಾಗಿ ಸುರಿದ ಪರಿಣಾಮ ಮುಂಗಾರು ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಮನೆಗಳಿಗೆ ನೀರು ನುಗ್ಗಿ ಸಾವಿರಾರು ಮನೆಗಳು ಧರೆಗುರುಳಿವೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿರುವ ಜನರ ನೆರವಿಗೆ ಬರಬೇಕಾದ ಸರ್ಕಾರ, ತನಗೆ ಸಂಬಂಧವೇ ಇಲ್ಲವೆಂದು ವರ್ತಿಸುತ್ತಿದೆ ಎಂದು ಕಿಡಿಕಾರಿದರು.ಶಾಸಕರು ನಾಪತ್ತೆ:
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರ ಜತೆಗಿದ್ದು ಅವರಿಗೆ ಧೈರ್ಯ ತುಂಬಿ ಪರಿಹಾರ ಕಲ್ಪಿಸಬೇಕಾಗಿದ್ದ ಸ್ಥಳೀಯ ಶಾಸಕರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ ಮುನೇನಕೊಪ್ಪ, ಸ್ಥಳೀಯ ಆಡಳಿತವೂ ಜನರಿಗೆ ಸ್ಪಂದಿಸದೆ ಗಾಢನಿದ್ರೆಗೆ ಜಾರಿದೆ ಎಂದು ದೂರಿದರು.ಮನವಿಗೆ ಸ್ಪಂದಿಸಿ:
ಪ್ರವಾಹ ಪರಿಸ್ಥಿತಿ ಉಂಟಾಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದರೂ ಸ್ಥಳೀಯ ಆಡಳಿತವಾಗಲಿ, ಸರ್ಕಾರವಾಗಲಿ ಸಂತ್ರಸ್ತರಿಗೆ ಸ್ಪಂದಿಸಿಲ್ಲ. ಹೀಗಾಗಿ ನಾವು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸಲು ಮುಂದಾಗಿದ್ದೇವೆ. ಈ ಮನವಿಗೆ ಸ್ಪಂದಿಸಿ ಸೂಕ್ತ ಪರಿಹಾರ ಕ್ರಮಕೈಗೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಬಿಜೆಪಿ ತಾಲೂಕಾಧ್ಯಕ್ಷ ಗಂಗಪ್ಪ ಮಾತನಾಡಿ, ಪ್ರತಿ ಹೆಕ್ಟೇರ್ ಬೆಳೆಹಾನಿಗೆ ₹ 50 ಸಾವಿರ ಪರಿಹಾರ, ಮನೆ ಹಾನಿಯಾದವರಿಗೆ ಎ,ಬಿ,ಸಿ ಮಾದರಿಂದ ₹ 10 ಲಕ್ಷ, ₹ 5 ಲಕ್ಷ, ₹ 3 ಲಕ್ಷ ಪರಿಹಾರ ನೀಡಬೇಕು. ಈಗಾಗಲೇ ಬೆಳೆ ವಿಮೆ ತುಂಬಿರುವ ರೈತರಿಗೆ ಸಂಪೂರ್ಣ ವಿಮಾ ಪರಿಹಾರ ಕೊಡುವುದು, ಕಳೆದ ವರ್ಷ ತಾಂತ್ರಿಕ ಕಾರಣದಿಂದ ಬಾಕಿ ಉಳಿದಿರುವ ರೈತರ ಬೆಳೆ ಪರಿಹಾರವನ್ನು ಅವರ ಖಾತೆಗೆ ಜಮಾ ಮಾಡುವುದು, ಹನಸಿ ಗ್ರಾಮದಲ್ಲಿ ಮನೆ ಕುಸಿತದಿಂದ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಪಾದಯಾತ್ರೆ:ಇದಕ್ಕೂ ಮುಂಚೆ ರೈತ ಹೋರಾಟ ಭವನದಿಂದ ಆರಂಭವಾದ ಪ್ರತಿಭಟನೆಯು ಲಿಂಗರಾಜ ಸರ್ಕಲ್ ವೃತ್ತದ ಬಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿತು. ಬಳಿಕ ಗಾಂಧಿ ಸರ್ಕಲ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ತಲುಪಿತು. ಈ ವೇಳೆ ಹನಸಿ ಗ್ರಾಮದಲ್ಲಿ ಮನೆ ಕುಸಿತದಿಂದ ಸಾಪನ್ನಪ್ಪಿದ ಮಹಿಳೆಗೆ ₹ 25 ಪರಿಹಾರ ನೀಡಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕೆ ದೌಡಾಯಿಸಿದ ತಹಸೀಲ್ದಾರ್ ಜಿಲ್ಲಾಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದರ. ಆಗ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮೃತ ಮಹಿಳೆ ಕುಟುಂಬಕ್ಕೆ ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ಈ ವೇಳೆ ಅಣ್ಣಪ್ಪ ಬಾಗಿ, ಎ.ಬಿ. ಹಿರೇಮಠ, ಎಸ್.ಬಿ. ದಾನಪ್ಪಗೌಡರ, ರೋಹಿತ ಮಟ್ಟಿಹಳ್ಳಿ, ಸಿದ್ದಲಿಂಗಪ್ಪ ಮದ್ನೂರ, ಬಸವರಾಜ ಆಕಳದ, ಬಸವರಾಜ ಬೆಣ್ಣಿ, ಗುರುಸಿದ್ದಪ್ಪ ಮೆಣಸಿನಕಾಯಿ, ಮಾಂತೇಶ ಕಲಾಲ, ಸುಭಾಸ ಮಂಗಳಿ, ದುರಗಪ್ಪ, ಮಲ್ಲಿಕಾರ್ಜುನ ಸಂಕನಗೌಡ್ರ, ಸಿದ್ದನಗೌಡ ಪಾಟೀಲ, ಸಿದ್ದಣ್ಣ ಕಿಟಗೇರಿ, ದೇವರಾಜ ಕರೆಪ್ಪನವರ, ವಿನಾಯಕ ದಾಡಿಭಾವಿ, ಷಣ್ಮುಖ ಗುರಿಕಾರ, ಬಸವರಾಜ ಕಾತರಕಿ, ಸಂತೋಷ ನಾವಳ್ಳಿ, ಆನಂದ ಜಕನ್ನಗೌಡರ, ಜಯಪ್ರಕಾಶ ಬದಾಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.