ಟಿ.ಮರಿಯಪ್ಪರಂತಹ ಆದರ್ಶ ರಾಜಕಾರಣಿಗಳು ಇಂದು ಅಗತ್ಯ: ಎಚ್.ಎಂ.ರೇವಣ್ಣ

| Published : Oct 25 2024, 12:49 AM IST

ಸಾರಾಂಶ

ಇಂದಿನ ರಾಜಕಾರಣಿಗಳು ಸ್ವಾರ್ಥ ಮನೋಭಾವದವರು, ಕುಟುಂಬದ ಹಿತಕ್ಕಾಗಿ ರಾಜಕಾರಣ ಮಾಡುವವರು. ಮೊದಲು ಎಂಎಎಲ್‌ಎ ಆಗಿ ನಂತರ ಮಂತ್ರಿ ಖಾತೆಗೆ ಜಗಳವಾಡುತ್ತಾರೆ. ಮಂತ್ರಿ ಖಾತೆಯಿಂದ ಬರುವ ಆದಾಯವನ್ನು ಗುರಿಯಾಗಿಸಿಕೊಳ್ಳುವರೇ ವಿನಃ ಸಮಾಜ ಮತ್ತು ಜನರ ಹಿತವನ್ನು ಮರೆತೇಬಿಡುತ್ತಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜಕಾರಣಿಗಳ ಬಗ್ಗೆ ಜನಮಾನಸದಲ್ಲಿ ಅಸಹ್ಯಕರ ಮನೋಭಾವ ಮೂಡಿರುವ ಇಂದಿನ ದಿನಗಳಲ್ಲಿ ಟಿ.ಮರಿಯಪ್ಪ ಅವರಂತಹ ಆದರ್ಶಪ್ರಾಯ ರಾಜಕಾರಣಿಗಳು ಪ್ರಸ್ತುತ ದಿನಗಳಲ್ಲಿ ಅಗತ್ಯವಾಗಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಕರ್ನಾಟಕ ಸಂಘದಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಮೈಸೂರು ಚಲೋ ಅಥವಾ ಅರಮನೆ ಚಲೋ ಹಾಗೂ ಟಿ.ಮರಿಯಪ್ಪ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ರಾಜಕಾರಣಿಗಳು ಸ್ವಾರ್ಥ ಮನೋಭಾವದವರು, ಕುಟುಂಬದ ಹಿತಕ್ಕಾಗಿ ರಾಜಕಾರಣ ಮಾಡುವವರು. ಮೊದಲು ಎಂಎಎಲ್‌ಎ ಆಗಿ ನಂತರ ಮಂತ್ರಿ ಖಾತೆಗೆ ಜಗಳವಾಡುತ್ತಾರೆ. ಮಂತ್ರಿ ಖಾತೆಯಿಂದ ಬರುವ ಆದಾಯವನ್ನು ಗುರಿಯಾಗಿಸಿಕೊಳ್ಳುವರೇ ವಿನಃ ಸಮಾಜ ಮತ್ತು ಜನರ ಹಿತವನ್ನು ಮರೆತೇಬಿಡುತ್ತಾರೆ ಎಂದು ವಿಷಾದಿಸಿದರು.

ಟಿ.ಮರಿಯಪ್ಪ, ಕೆ.ವಿ.ಶಂಕರಗೌಡ, ಎಚ್.ಕೆ.ವೀರಣ್ಣಗೌಡ, ಸಾಹುಕಾರ್ ಚನ್ನಯ್ಯ ಸೇರಿದಂತೆ ಹಲವಾರು ರಾಜಕಾರಣಿಗಳು ಜನಪರವಾದ ಕೆಲಸಕ್ಕೆ ರಾಜಕಾರಣವನ್ನು ಮೀಸಲಿಟ್ಟಿದ್ದರು. ಎಂದಿಗೂ ಕುಟುಂಬದವರ ಬೆಳವಣಿಗೆಗೆ ಅಧಿಕಾರ ನಡೆಸಲಿಲ್ಲ, ರಾಜಕೀಯಕ್ಕೆ ಕರೆತರಲೂ ಇಲ್ಲ. ಆದರೆ, ಈಗಿನ ರಾಜಕಾರಣಿಗಳು ತಮ್ಮ ಹೆಂಡತಿ, ಮಗ, ಮಗಳು, ಮೊಮ್ಮಗ, ಅಳಿಯ ಎಲ್ಲರನ್ನೂ ರಾಜಕೀಯಕ್ಕೆ ಕರೆತಂದು ರಾಜಕಾರಣವನ್ನು ಕಲುಷಿತಗೊಳಿಸಿದ್ದಾರೆ. ಸೇವಾ ಮನೋಭಾವ ಎನ್ನುವುದು ರಾಜಕಾರಣದಲ್ಲಿ ಮರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು..

ಟಿ.ಮರಿಯಪ್ಪನವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಮೈಸೂರು ಮಹಾರಾಜರು ಅವರಿಗೆ ಮನೆಯೊಂದನ್ನು ನೀಡುವುದಾಗಿ ತಿಳಿಸಿದ್ದರು. ಅದಕ್ಕೆ ಅವರು ನಾನು ಗಾಂಧಿವಾದಿ. ನೀವು ಕೊಡುವ ಮನೆ ನನಗೆ ಬೇಕಾಗಿಲ್ಲ. ಇಂದು ಸೈಟ್‌ಗಾಗಿ ಕಿತ್ತಾಡುವ ರಾಜಕಾರಣಿಗಳಿದ್ದಾರೆ. ಟಿ.ಮರಿಯಪ್ಪನವರು ನೆಹರುರವರ ಸಮಾಜವಾದ, ಲೋಹಿಯಾವಾದವನ್ನು ಒಪ್ಪಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದನ್ನು ನೋಡಿದರೆ ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದು ಅರ್ಥವಾಗುತ್ತದೆ ಎಂದರು.

ಸಮಾಜದ ಹಿತವನ್ನೇ ಗುರಿಯಾಗಿಸಿಕೊಂಡಿದ್ದ ಟಿ.ಮರಿಯಪ್ಪನವರು ಬೆಳಗ್ಗೆಯಿಂದ ಸಂಜೆಯವರೆಗೆ ಸರ್ಕಾರದ ಕೆಲಸ ಮಾಡಿ ಸಂಜೆ ೫ ಗಂಟೆಯ ನಂತರ ಜನರನ್ನು ಭೇಟಿಯಾಗಿ ಅವರ ಅವಶ್ಯಕತೆಗಳನ್ನು ಪೂರೈಸುವ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಡೆ ಕಾರ್ಯೋನ್ಮುಖರಾಗುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಯಾವ ರಾಜಕಾರಣಿಯಲ್ಲಿ ಇಂತಹದೊಂದು ಕಾರ್ಯದಕ್ಷತೆ, ಕರ್ತವ್ಯಬದ್ಧತೆಯನ್ನು ಕಾಣಲು ಸಾಧ್ಯ. ಹಿಂದೆಲ್ಲಾ ತತ್ವ-ಸಿದ್ಧಾಂತದ ಮೇಲೆ ರಾಜಕಾರಣ ನಡೆಯುತ್ತಿತ್ತು. ಈಗ ಸಮಾಜಕ್ಕಾಗಿ ರಾಜಕಾರಣ ನಡೆಸುವಂತಾಗಿದೆ ಎಂದರು.

ಟಿ.ಮರಿಯಪ್ಪ, ಕೆ.ವಿ.ಶಂಕರಗೌಡರು ಮಾಡಿರುವ ಕೆಲಸಗಳು, ಅವರ ಜೀವನ ಚರಿತ್ರೆಯನ್ನು ಇಂದಿನ ಯುವಜನಾಂಗಕ್ಕೆ ತಿಳಿಸಿಕೊಡಬೇಕಿದೆ. ರಾಜಕಾರಣಿಗಳಿಗೆ ಆ ಗುಣ ಬರದೇ ಹೋದರೂ ಮುಂದಿನ ಪೀಳಿಗೆಯಾದರೂ ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ರೂಢಿಸಿಕೊಂಡು ಸಮಾಜದ ಬೆಳವಣಿಗೆಗೆ, ಸಮಾಜದ ಉದ್ಧಾರಕ್ಕೆ ಶ್ರಮಿಸುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಟಿ.ಮರಿಯಪ್ಪ ರವರ ಸುಪುತ್ರ ಟಿ.ಎಂ.ರಾಜಕುಮಾರ್, ತಗ್ಗಹಳ್ಳಿ ವೆಂಕಟೇಶ್, ಹುಲ್ಕೆರೆ ಮಹದೇವ, ಕುರುಬರ ಸಂಘದ ದೊಡ್ಡಯ್ಯ ಇತರರಿದ್ದರು.