ಸಾರ್ವಜನಿಕ ಸ್ಥಳಗಳಲ್ಲಿ, ಕಲಾ ಭವನ, ಶಾಲೆ-ಕಾಲೇಜು, ಆಸ್ಪತ್ರೆಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ವಿಕಲಚೇತನರಿಗೆ ನೆರವಾಗುವಂತೆ ರ್‍ಯಾಂಪ್ ಇರಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ವಿವಿಧ ಇಲಾಖೆಗಳ ಮೂಲಕ ಸರ್ಕಾರದ ಸವಲತ್ತುಗಳನ್ನು ನೀಡುವಾಗ ವಿಕಲಚೇತನರಿಗೆ ಮೊದಲ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಕಲಚೇತನರ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಶೇಕಡ 5ರಷ್ಟು ಅನುದಾನ ಮೀಸಲಿಟ್ಟು ಅವರ ಬೆಳವಣಿಗೆಗೆ ಪೂರಕವಾಗಿ ಸದ್ಬಳಕೆಗೆ ಮಾಡುವಂತೆ ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ, ಕಲಾ ಭವನ, ಶಾಲೆ-ಕಾಲೇಜು, ಆಸ್ಪತ್ರೆಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ವಿಕಲಚೇತನರಿಗೆ ನೆರವಾಗುವಂತೆ ರ್‍ಯಾಂಪ್ ಇರಬೇಕು ಎಂದರು.

ಎಲ್ಲಾ ಸರ್ಕಾರಿ ಆಸ್ಪತ್ರೆಗಳ ನಾಮಫಲಕದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಅವರ ಹೆಸರು ಮೊಬೈಲ್ ನಂಬರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಅಳವಡಿಸಲು ಸೂಚಿಸಿದರಲ್ಲದೆ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಕಲಚೇತನರ ಗ್ರಾಮ ಸಭೆ ನಡೆಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸಮಾಜದಲ್ಲಿ ವಿಕಲಚೇತನರನ್ನು ಕಡೆಗಣಿಸದೆ ಸಮಾನತೆಯಿಂದ ನೋಡಬೇಕು. ಅವರ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಅವರಿಗೆ ಅಗತ್ಯವಿರುವ ಸಾಧನ ಸಲಕರಣೆಗಳು, ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ನಂತರ ಯಾರ ಮೇಲೂ ಅವಲಂಬಿತರಾಗದಂತೆ ಸ್ವಯಂ ಉದ್ಯೋಗವನ್ನು ಪಡೆದುಕೊಳ್ಳಲು ಕೌಶಲ್ಯ ತರಬೇತಿಗಳನ್ನು ನೀಡುವ ಮೂಲಕ ಉದ್ಯೋಗದಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡಬೇಕು ಎಂದು ತಿಳಿಸಿದರು.

ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ವಿಶೇಷ ಚೇತರಿಗಾಗಿಯೇ ಉದ್ಯೋಗ ಮೇಳ ಆಯೋಜಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಕಲಚೇತರ ತಂದೆ ಅಥವಾ ತಾಯಿ ಸರ್ಕಾರಿ ನೌಕರಿಯಲ್ಲಿದ್ದು, ನಿವೃತ್ತ ಹೊಂದಿದ್ದಲ್ಲಿ ಅವರ ಮಕ್ಕಳಿಗೆ ಪಿಂಚಣಿ ನೀಡುವ ಸೌಲಭ್ಯವಿರುತ್ತದೆ. ಇದರ ಕುರಿತು ಹೆಚ್ಚಿನ ಪ್ರಚಾರ ನೀಡಬೇಕು. ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ವಿಕಲಚೇತರಿಗೆ ಆದ್ಯತೆ ಮೇರೆಗೆ ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸೂಚಿಸಿದರಲ್ಲದೆ, ಉಚಿತ ಕಾನೂನು ನೆರವು ಒದಗಿಸಲು ಕ್ರಮವಹಿಸಬೇಕು ಎಂದರು.

ಪ್ರತಿ ಮಾಹೆ ವಿಕಲ ಚೇತರ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರಲ್ಲದೆ, ವಿಕಲಚೇತರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅಗತ್ಯ ಕ್ರೀಡಾ ಪರಿಕರಗಳನ್ನು ಕಡ್ಡಾಯವಾಗಿ ಒದಗಿಸುವಂತೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ಕುಮಾರ್, ಹಿಮ್ಸ್‌ನ ಮಾನಸಿಕ ವಿಭಾಗದ ಮುಖ್ಯಸ್ಥರಾದ ಡಾ. ಸಂತೋಷ್, ಹಿರಿಯ ವಕೀಲರಾದ ಚಂದ್ರಶೇಖರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮಾ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

********-