ಸಾರಾಂಶ
ಬಳ್ಳಾರಿ: ಜಿಲ್ಲೆಯಲ್ಲಿ ಅನಧಿಕೃತವಾಗಿ ತೆರೆದಿರುವ ಕೋಚಿಂಗ್ ಸೆಂಟರ್, ನಿಯಮಬಾಹಿರವಾಗಿ ಕಾರ್ಯನಿರ್ವಹಿಸುವ ವಸತಿ ಶಾಲೆಗಳಿಗೆ ನೋಟಿಸ್ ನೀಡುವಂತೆ ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಕ್ಕಳ ರಕ್ಷಣೆ ವ್ಯವಸ್ಥೆ ಕುರಿತು ವಿವಿಧ ಇಲಾಖೆಗಳ ಸಹ ಭಾಗೀದಾರರೊಂದಿಗೆ ಶನಿವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳ ಶಾಲಾ ಹಾಜರಾತಿ ಕಡ್ಡಾಯವಾಗಿ ನಿರ್ವಹಿಸಬೇಕು. ದೃಢೀಕರಣ ಮಾಡಿ ಇಟ್ಟುಕೊಳ್ಳಬೇಕು. ಶಾಲೆಗೆ ಸಂಚರಿಸುವ ಮಕ್ಕಳ ಸುರಕ್ಷತೆಗಾಗಿ ರಾಜ್ಯ ಸರ್ಕಾರವು ‘ಸ್ಕೂಲ್ ಕ್ಯಾಬ್’ ಎಂಬ ಸುತ್ತೋಲೆ ಹೊರಡಿಸಿದ್ದು, ಶಾಲೆಗೆ ಕರೆದೊಯ್ಯುವ ವಾಹನ ಚಾಲಕರ ವಾಹನ ನೋಂದಣಿ, ಇತರೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕಾಗಿ ಕರ್ನಾಟಕ ಮೋಟಾರು ವಾಹನ ಸಾರಿಗೆ ಕಾಯ್ದೆ 2012 ತಿದ್ದುಪಡಿ 2024 ರನ್ವಯ ಸಮಿತಿಯನ್ನು ರಚಿಸಲಾಗುತ್ತದೆ. ವಾಹನ ಚಾಲಕರು ಸಮಿತಿಯಲ್ಲಿ ಒಳಗೊಂಡಿರುತ್ತಾರೆ. ಈ ಕುರಿತು ಮಾಹಿತಿ ಒದಗಿಸುವ ಕಾರ್ಯ ಮಾಡಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 153 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅದರಲ್ಲಿ 110 ಮಕ್ಕಳನ್ನು ಗುರುತಿಸಿ ಪೋಷಕರ ಮನವೊಲಿಸಿ ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.ಜಿಲ್ಲಾವಾರು ಗರ್ಭಿಣಿಯರ ವಿವರ ದಾಖಲಿಸು ಆರ್‍ಸಿಎಚ್ ಪೋರ್ಟಲ್‍ನಲ್ಲಿ ಕೇವಲ ಆಧಾರ್‌ಕಾರ್ಡ್ ಮಾತ್ರ ಮಾನ್ಯತೆ ಅಲ್ಲ, ಬದಲಾಗಿ ಜನನ ಪ್ರಮಾಣಪತ್ರ, ಶಾಲಾ ದೃಢೀಕರಣ ಪ್ರಮಾಣಪತ್ರ ಪರಿಗಣಿಸಬೇಕು. ಪೋರ್ಟಲ್‍ನಲ್ಲಿ ಗರ್ಭಿಣಿಯರ ಮಾಹಿತಿ ನೋಂದಾಯಿಸುವಲ್ಲಿ ಎಲ್ಲ ದಾಖಲೆಗಳನ್ನು ಪರಿಗಣಿಸಬೇಕು. ತಪ್ಪಿಲ್ಲದಂತೆ ನಮೂದಿಸಬೇಕು. ಬಾಲ್ಯವಿವಾಹ ಕಂಡುಬಂದಲ್ಲಿ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳ ಪರಸ್ಪರ ಸಮನ್ವಯದೊಂದಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 76 ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, ಕಳೆದ ಮೂರು ತಿಂಗಳಲ್ಲಿ 74 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಅಲ್ಲಿನ ನ್ಯೂನತೆ ಪರಿಶೀಲಿಸಲಾಗುತ್ತಿದೆ. ಪ್ರತಿ ತಿಂಗಳಿಗೊಮ್ಮೆ ಜಿಲ್ಲಾ ಆರೋಗ್ಯ ಸಮನ್ವಯ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಸಭೆಗೆ ತಿಳಿಸಿದರು.ಸಮಾಜ ಕಲ್ಯಾಣ, ಎಸ್ಸಿ-ಎಸ್ಟಿ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯ ವಸತಿನಿಲಯಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಪೊಲೀಸ್ ಸಹಾಯವಾಣಿ ಸಂಖ್ಯೆ 112 ಪ್ರದರ್ಶಿಸಬೇಕು. ದೂರು ಪಟ್ಟಿಗೆ ಅಳವಡಿಸಬೇಕು. ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಬೇಕು. ಮಕ್ಕಳ ಹಕ್ಕುಗಳ ಸಭೆ ಹಾಗೂ ಸಂಸತ್ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರು, ಬಳ್ಳಾರಿ ನಗರ ಡಿವೈಎಸ್ಪಿ ನಂದಾರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಜಲಾಲಪ್ಪ ಉಪಸ್ಥಿತರಿದ್ದರು.