ಸಾರಾಂಶ
- ಲೋಕಸಭಾ ಕ್ಷೇತ್ರ ಕೈ ತಪ್ಪಲು ರೇಣುಕಾಚಾರ್ಯ ಕುತಂತ್ರ ಕಾರಣ: ವೀರೇಶ ಹನಗವಾಡಿ ಆರೋಪ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕುತಂತ್ರ ಮಾಡಿದ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಇಡೀ ಲಗಾನ್ ಟೀಂ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಸಮ್ಮುಖ ತಾವು ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಮೋಸ ಮಾಡಿಲ್ಲವೆಂದು ಗಂಟೆ ಹೊಡೆದು, ಆಣೆ ಪ್ರಮಾಣ ಮಾಡಿ ಹೇಳಲಿ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಸವಾಲು ಹಾಕಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣರಾದ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಸ್ವಘೋಷಿತ ಇಡೀ ಲಗಾನ್ ಟೀಮ್ ಅನ್ನು ಬಿಜೆಪಿಯಿಂದ ಹೊರಹಾಕುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದರು.
ಪ್ರಚಾರಪ್ರಿಯ ರೇಣುಕಾಚಾರ್ಯ:ಕುಂಬಳಕಾಯಿ ಕಳ್ಳ ಅಂದ್ರೆ ರೇಣುಕಾಚಾರ್ಯ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುವುದೇಕೆ? ನಮಗೆ ಹುಷಾರ್ ಅಂತೆಲ್ಲಾ ಹೇಳುವ ರೇಣುಕಾಚಾರ್ಯ ತಾವೇ ಮಾಡಿದ ಕುತಂತ್ರ ಮುಚ್ಚಿಹಾಕಲು ಸಾಧ್ಯವಿಲ್ಲ. ಪ್ರಚಾರದ ಹುಚ್ಚಿನ, ಟಿಆರ್‌ಪಿ ರಾಜಕಾರಣಿ, ಮೊಣಕಾಲುದ್ದದ ನೀರಿನಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿ ಪ್ರಚಾರ ಪಡೆದಿದ್ದ ಪ್ರಚಾರಪ್ರಿಯ ರೇಣುಕಾಚಾರ್ಯ. ಅವರು ತಮ್ಮ ಮಾತಿನ ಮೇಲೆ ಹಿಡಿತ ಹೊಂದಿರಲಿ ಎಂದು ಗುಡುಗಿದರು.
ರವೀಂದ್ರನಾಥರ ಬಳಸಿ ಬಿಜೆಪಿ ಸೋಲಿಸಿದರು:ಸಿಎಂ ಆಗಿದ್ದ ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿಜೆಪಿ ನಾಯಕರಾದ ಬಿ.ಎಲ್.ಸಂತೋಷ, ಕೆ.ಎಸ್. ಈಶ್ವರಪ್ಪ ಹೀಗೆ ಎಲ್ಲರಿಗೂ ನೀವು ಬ್ಲಾಕ್ ಮೇಲ್ ಮಾಡಿ, ಹೆದರಿಸಿ, ಬೆದರಿಸಿ ಏನೆಲ್ಲ ಮಾಡಿದ್ದಾರೆಂಬುದು ಗೊತ್ತಿದೆ. ಗೋವಾ, ಮುಂಬೈ ಅಂತೆಲ್ಲಾ ರೆಸಾರ್ಟ್‌ಗೆ ಶಾಸಕರನ್ನು ಕರೆದೊಯ್ದು ಬ್ಲಾಕ್ ಮೇಲ್ ಮಾಡಿದ್ದನ್ನು ಜನತೆ ಇನ್ನೂ ಮರೆತಿಲ್ಲ. ಇಂತಹ ಅವಕಾಶವಾದಿ ರಾಜಕಾರಣ ಹಿಂದೆಲ್ಲಾ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ಗೂ ಟೀಕಿಸಿಕೊಂಡೇ ಬಂದವರು. ಈಗ ಅದೇ ರವೀಂದ್ರನಾಥರನ್ನು ಬಳಸಿಕೊಂಡು, ಬಿಜೆಪಿ ಸೋಲಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆ ಸೋಲಿಗೆ ತಾವು ಮಾಡಿದ ಕುತಂತ್ರ ಮುಚ್ಚಿ ಹಾಕಲು ಈಗ ರೇಣುಕಾಚಾರ್ಯ ಮತ್ತು ತಂಡ ಭದ್ರಾ ನೀರಿನ ಹೋರಾಟಕ್ಕೆ ಮುಂದಾಗಿದೆ. ಇದಕ್ಕೆಲ್ಲಾ ಜನರು ಮರುಳಾಗುವುದಿಲ್ಲ. ರೇಣುಕಾಚಾರ್ಯ ಏನೆಂಬುದು ಜನರಿಗೂ ಮನದಟ್ಟಾಗಿದೆ. ಬಿಜೆಪಿ ಸೋಲಿಗೆ ಲಗಾನ್ ತಂಡವೇ ನೇರ ಕಾರಣವಾಗಿದೆ ಎಂದು ವೀರೇಶ ತಿಳಿಸಿದರು.ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿ.ಎಸ್.ಜಗದೀಶ, ಟಿ.ಶ್ರೀನಿವಾಸ ದಾಸಕರಿಯಪ್ಪ, ಕೊಂಡಜ್ಜಿ ಜಯಪ್ರಕಾಶ, ಎ.ಬಿ.ಹನುಮಂತಪ್ಪ ಅರಕೆರೆ, ಕೆ.ಬಿ.ಚನ್ನಪ್ಪ, ದೇವರಾಜ, ರವಿಕುಮಾರ, ಚನ್ನೇಶ, ರಾಜು ನೀಲಗುಂದ ಇತರರು ಇದ್ದರು.
- - -ಬಾಕ್ಸ್ರವೀಂದ್ರನಾಥ್ ಮಂತ್ರಿಗಿರಿಗೆ ಏಕೆ ಪಟ್ಟು ಹಿಡೀಲಿಲ್ಲ?
- ನಿನ್ನಂತಹ ಕುನ್ನಿಗೆ ಹೆದರುವುದಿಲ್ಲ ಎಂದು ಯಶವಂತ ರಾವ್ ವಾಗ್ದಾಳಿ ಕನ್ನಡಪ್ರಭ ವಾರ್ತೆ, ದಾವಣಗೆರೆಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ, ಭಾರೀ ನಾಯಕರು, ಭಾರೀ ಪೈಲ್ವಾನರಿದ್ದರೂ ಜಗಳೂರು, ಹರಿಹರ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಆಗಿದೆಯೆಂದು ಟೀಕಿಸಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಚುನಾವಣೆಗೆ ಮುನ್ನ ತಮ್ಮ ನಡವಳಿಕೆ ಹೇಗಿತ್ತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ತಾಕೀತು ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿದ ಮಹಾನ್ ನಾಯಕರ ಮನೆಯಲ್ಲಿ ಚುನಾವಣೆಯ ಮುನ್ನಾ ದಿನ ಕಾಂಗ್ರೆಸ್ ಅಭ್ಯರ್ಥಿ ಬಂದು ಕೂಡುತ್ತಾರೆಂದರೆ ಏನರ್ಥ? ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ನಿವಾಸಕ್ಕೆ ನೀವು ಹೋದಾಗ ಸಚಿವರು, ತಮ್ಮ ಪಕ್ಷಕ್ಕೆ ಬಲ ಬಂದಿತೆಂದರು. ಆಗ ಜೋರಾಗಿ ಬಾಯಿ ತೆಗೆದಿದ್ದಿಯಲ್ಲ ಯಾಕಪ್ಪಾ? ಅಂದೇ ಸಚಿವ ಎಸ್‌ಎಸ್‌ಎಂ ಹೇಳಿಕೆಗೆ ಆಕ್ಷೇಪಿಸಬೇಕಿತ್ತಲ್ಲವೇ ಎಂದರು.ಬಿಜೆಪಿ ಸರ್ಕಾರದಲ್ಲಿ 6 ಸಚಿವರ ಸ್ಥಾನ ಖಾಲಿ ಇದ್ದವು ಅಂದಿದ್ದೆಯಲ್ಲಾ, ಆಗ ಇದೇ ಎಸ್.ಎ .ರವೀಂದ್ರನಾಥ ಹಿರಿಯರು, ಅಂತಹವರನ್ನೇ ಸಚಿವರಾಗಿ ಮಾಡಿ ಅಂತಾ ಯಾಕೆ ಹೇಳಲಿಲ್ಲ? ನೀವೆಲ್ಲಾ ಇವತ್ತು ರವೀಂದ್ರನಾಥ ಮನೆ ಎಡತಾಕುತ್ತಿರುವವರು, ಅವತ್ತೇ ಯಾಕೆ ರವೀಂದ್ರನಾಥರನ್ನು ಸಚಿವರಾಗಿ ಮಾಡಲು ಪಟ್ಟುಹಿಡಿಯಲಿಲ್ಲ? ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮೋಸ ಮಾಡಿಲ್ಲ, ಕುತಂತ್ರ ಮಾಡಿಲ್ಲವೆಂದು ನೀನಷ್ಟೇ ಅಲ್ಲ, ನಿನ್ನ ಇಡೀ ಲಗಾನ್ ಟೀಂ ಸಮೇತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿ, ಗಂಟೆ ಹೊಡೆದು ಹೇಳು ನೋಡೋಣ ಎಂದು ರೇಣುಕಾಚಾರ್ಯಗೆ ಪಂಥಾಹ್ವಾನ ನೀಡಿದರು.
ನಿನ್ನಂಥ ಬಹಳ ಜನರನ್ನು ನೋಡಿದ್ದೇವೆ. ಹಿಂದೆ ಬಿಜೆಪಿ ಬಾವುಟ ಕಟ್ಟುವುದಕ್ಕೂ ಬಿಡದಂತಹ ಪರಿಸ್ಥಿತಿಯಲ್ಲೇ ಪಕ್ಷವನ್ನು ಸಂಘಟನೆ ಮಾಡಿದವರು ನಾವು. ನಿನ್ನಂತಹ ಕುನ್ನಿಗೆ ಹೆದರುತ್ತೇವಾ ಎಂದು ಯಶವಂತ ರಾವ್ ಹರಿಹಾಯ್ದರು.- - - ಬಾಕ್ಸ್
* ಕಾಂಗ್ರೆಸ್ ಸೇರಲಿದ್ದ ರೇಣುಕಾಚಾರ್ಯ: ಹನುಮಂತಪ್ಪ ಆರೋಪದಾವಣಗೆರೆ: ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹೊನ್ನಾಳಿ ಕ್ಷೇತ್ರದಿಂದ 25 ಸಾವಿರ ಮತಗಳ ಲೀಡ್ ಕೊಡಿಸುವುದಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಮಿಟ್ ಆಗಿದ್ದು, ಚುನಾವಣೆಗೆ ಮುನ್ನವೇ ಕಾಂಗ್ರೆಸ್ಸಿಗೆ ಸೇರುವುದಕ್ಕೂ ಮುಂದಾಗಿದ್ದರು ಎಂದು ಹೊನ್ನಾಳಿ ಬಿಜೆಪಿ ಮುಖಂಡ ಎ.ಬಿ. ಹನುಮಂತಪ್ಪ ಅರಕೆರೆ ಆರೋಪಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೊನ್ನಾಳಿಗೆ ಬಂದಾಗ ಒಲ್ಲದ ಮನಸ್ಸಿನಿಂದಲೇ ರೇಣುಕಾಚಾರ್ಯರು ಪ್ರಚಾರಕ್ಕೆ ಬರುತ್ತಿದ್ದರು. ಕಾಂಗ್ರೆಸ್ಸಿನೊಂದಿಗೆ ರೇಣುಕಾಚಾರ್ಯ ಕಮಿಟ್ ಆದಂತೆ 25 ಸಾವಿರ ಮತಗಳ ಸಿಗಲಿಲ್ಲ. ಕೇವಲ 6,900 ಮತದ ಮುನ್ನಡೆ ಸಿಕ್ಕಿತು ಎಂದರು.ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಜಗಳೂರು ಕ್ಷೇತ್ರದಲ್ಲಿ ನಾನು, ಮಾಜಿ ಶಾಸಕ ಎಚ್.ಪಿ.ರಾಜೇಶ ಪ್ರಾಮಾಣಿಕವಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರ ಪರ ಕೆಲಸ ಮಾಡಿದ್ದೆವು. ಆದರೆ, ಕೆಲವರು ಒಳ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ನಮ್ಮೆಲ್ಲಾ ಕಾರ್ಯಕರ್ತರು ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಪ್ರತಿ ಸಲ ನಾವು ಬಿಜೆಪಿಗೆ ಲೀಡ್ ಕೊಡುತ್ತಿದ್ದೆವು. ಈ ಸಲದ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದರು.
- - -ಟಾಪ್ ಕೋಟ್ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎಚ್.ಬಿ. ಮಂಜಪ್ಪ ಸ್ಪರ್ಧೆ ಮಾಡಿದ್ದಾಗ 8500 ಮತಗಳ ಮುನ್ನಡೆ ಸಿಕ್ಕಿದ್ದನ್ನು ಬಿಟ್ಟರೆ ಯಾವಾಗಲೂ ಕಾಂಗ್ರೆಸ್ಸಿಗೆ ಲೀಡ್ ಕೊಟ್ಟಿದೆ. ನಾವು ಪೈಲ್ವಾನರು ನಿಜ. ಆದರೆ, ಯಾರ ಮೇಲೂ ದಬ್ಬಾಳಿಕೆಯನ್ನು ಮಾಡಿಲ್ಲ. ಬ್ಲಾಕ್ ಮೇಲ್ ಮಾಡಿಕೊಂಡೇ, ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿಕೊಂಡೇ ಬಂದಿದ್ದೀರಿ
- ಯಶವಂತ ರಾವ್ ಜಾಧವ್, ಮಾಜಿ ಅಧ್ಯಕ್ಷ, ದೂಡಾ- - - -20ಕೆಡಿವಿಜಿ3:
ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಎಸ್.ಎಂ. ವೀರೇಶ ಹನಗವಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.