ಕುಶಾಲನಗರ: ಡಿ. 25ರಿಂದ ಮೂರು ದಿನಗಳ ಕಾಲ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷರಾದ ಬಿ ಆರ್ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಕುಶಾಲನಗರ ಕನ್ನಿಕಾ ಇಂಟರ್ನ್ಯಾಷನಲ್ ಆವರಣದ ಸಭಾಂಗಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಾಗಾರದಲ್ಲಿ ಯುವ ಪೀಳಿಗೆಯನ್ನು ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಗಳಾಗಿ ತಯಾರಿಸುವ ಸಂಬಂಧ ಗುಣಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು. ವಿಶ್ವದ ಪ್ರತಿಷ್ಠಿತ ಪ್ರೇರಣಾರ್ಥಕ ಸ್ಪೂರ್ತಿದಾಯಕ ಭಾಷಣಕಾರದಿಂದ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ತಿಳಿಸಿದರುದಕ್ಷಿಣ ಭಾರತದ ಬಹುತೇಕ ಐದು ರಾಜ್ಯಗಳ ಸಮುದಾಯದ ಗಣ್ಯರು ಪ್ರತಿನಿಧಿಗಳು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಸಚಿವರು, ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದರು.ಅಂದಾಜು 15 ಕೋಟಿ ವೆಚ್ಚದಲ್ಲಿ ಈ ಸಮಾವೇಶ ಮೂರು ದಿನಗಳ ಕಾಲ ನಡೆಯಲಿದ್ದು ಸುಮಾರು 1.5 ಲಕ್ಷ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್ ಪಿ ರವಿಶಂಕರ್ ಮತ್ತು ಗೌರವಾಧ್ಯಕ್ಷ ಟಿ ಜಿ ಭರತ್ ಅವರ ನೇತೃತ್ವದಲ್ಲಿ ಪೂರ್ವ ಸಿದ್ಧತೆ ನಡೆಯುತ್ತಿದೆ ಎಂದರು.
ಸಮಾವೇಶದ ಹಿನ್ನೆಲೆಯಲ್ಲಿ 23ರಂದು ಬೆಳಗ್ಗೆ 10.30 ಕ್ಕೆ ಗ್ಲೋಬಲ್ ಆರ್ಯವೈಶ್ಯ ಸಮಾವೇಶದ ಸಂಕಲ್ಪ ಯಾತ್ರೆಯನ್ನು ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಕುಶಾಲನಗರ ಡಿ ವೈ ಎಸ್ ಪಿ ಚಂದ್ರಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದರು. ಗೋಷ್ಠಿಯಲ್ಲಿ ಬಿತ್ತಿ ಪತ್ರ ಬಿಡುಗಡೆ ಮಾಡಿದರು. ಕೊಡಗು ಜಿಲ್ಲಾ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಪಿ ಎಸ್ ಪ್ರಶಾಂತ್, ಕನ್ನಿಕಾ ಪರಮೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಅಮೃತ್ ರಾಜ್, ವಾಸವಿ ಸಮಾಜದ ನಿರ್ದೇಶಕ ಕೆ.ಜೆ. ಸತೀಶ್ ಇದ್ದರು.