ಪೆರ್ಡೂರು: ಪ್ರತಿ ಊರಿನಲ್ಲೂ ದೇವಾಲಯಗಳ‍ು ಅಭಿವೃದ್ಧಿಯಾಗಬೇಕು. ಊರವರು ತಮ್ಮೂರಿನ ದೇವಾಲಯಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಇಂತಹ ಕಾರ್ಯ ದೇವರ ಅನುಗ್ರಹಕ್ಕೆ ಪಾತ್ರರಾಗುವುದಕ್ಕೆ ಒಂದು ವಿಶೇಷ ಅವಕಾಶ ಎಂದು ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.ಬುಧವಾರ ಇಲ್ಲಿನ ಶ್ರೀ ಆನಂತಪದ್ಮನಾಭ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಲಯ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅನಂತಪದ್ಮನಾಭ ಸೃಷ್ಟಿಯನ್ನು ಪಾಲನೆ ಮಾಡುವ ದೇವರು, ಆತನ ದೇವಾಲಯದ ಉದ್ಧಾರ ನಡೆಸುವುದು ಆತನಿಗಾಗಿ ಅಲ್ಲ, ಭಕ್ತರ ಉದ್ಧಾರಕ್ಕಾಗಿ ನಡೆಯಬೇಕು. ಜೀರ್ಣಗೊಂಡ ದೇವಸ್ಥಾನಗಳನ್ನು ಉದ್ಧಾರಗೊಳಿಸಿದರೆ ಹತ್ತುಪಟ್ಟು ಫಲ ಸಿಗುತ್ತದೆ ಎಂದು ಶ್ರೀಗಳು ಹೇಳಿದರು.

ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಸೇವಾ ಕಚೇರಿ ಉದ್ಘಾಟಿಸಿದರು, ಮಾಜಿ ಸಚಿವ ವಿನಯಕುಮಾರ್ ಸೊರಕೆ ಯೋಜಿತ ದೇವಾಲಯದ ಮಾದರಿ ಅನಾವರಣಗೊಳಿಸಿದರು, ಮಾಜಿ ಶಾಸಕ ಲಾಲಾಜಿ ಮೆಂಡನ್ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು, ಬೆಂಗಳೂರು ತುಳುಕೂಟದ ಅಧ್ಯಕ್ಷ ದಿನೇಶ್ ಹೆಗ್ಡೆ ಯೋಜಿತ ದೇವಾಲಯದ 3ಡಿ ಚಿತ್ರಣವನ್ನು ಬಿಡುಗಡೆ ಮಾಡಿದರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪಿ. ಕೃಷ್ಣ ಅಡಿಗ ಅವರು ಕಂಪ್ಯೂಟರ್ ವಿಭಾಗಕ್ಕೆ ಚಾಲನೆ ನೀಡಿದರು, ಸಮಿತಿಯ ಅಧ್ಯಕ್ಷ ಶಾಂತಾರಾಮ ಸೂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರದ ತಂತ್ರಿ ಕೆ. ಜಿ. ವಿಠಲ ತಂತ್ರಿ ಕೊರಂಗ್ರಪಾಡಿ, ಕೆ.ಪಿ. ಕುಮಾರುಗುರು ತಂತ್ರಿ, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್., ಅರ್ಚಕ ಶ್ರೀಧರ ಅಡಿಗ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸಂತೋಶ್ ಕುಮಾರ್ ಪಕ್ಕಾಲು ನಿರೂಪಿಸಿದರು.