ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಭಾಮೈದ ಹಾಗೂ ಬೆಳಗಾವಿ ವಲಯದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯಲ್ಲಿ ₹13.30 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿ ಪತ್ತೆಯಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ : ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಭಾಮೈದ ಹಾಗೂ ಬೆಳಗಾವಿ ವಲಯದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯಲ್ಲಿ ₹13.30 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿ ಪತ್ತೆಯಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ, ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಒಟ್ಟು 14 ಸ್ಥಳಗಳಲ್ಲಿ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಶೋಧದ ವೇಳೆ ₹5.50 ಕೋಟಿ ನಗದು, ₹7.80 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ₹3.30 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ನಗದು ಲೆಕ್ಕಪತ್ರಗಳು, ಆಸ್ತಿ ದಾಖಲೆಗಳು, ಬೇನಾಮಿ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವ್ಯವಸ್ಥಿತ ಭ್ರಷ್ಟಾಚಾರ
ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಹಿರಿಯ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. ಅಬಕಾರಿ ಪರವಾನಗಿಗಳನ್ನು ಮಂಜೂರು ಮಾಡುವುದು ಹಾಗೂ ನವೀಕರಣ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಲಂಚ ಪಡೆದಿರುವ ಆರೋಪಗಳು ತನಿಖೆಯಲ್ಲಿ ಪ್ರಮುಖವಾಗಿ ಹೊರಹೊಮ್ಮಿವೆ. ಬೇನಾಮಿ ವ್ಯವಹಾರಗಳ ಮೂಲಕ ಕುಟುಂಬ ಸದಸ್ಯರು ಹಾಗೂ ಆಪ್ತರ ಹೆಸರಿನಲ್ಲಿ ಆಸ್ತಿ ಮತ್ತು ವಿವಿಧ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವುದು ಹಾಗೂ ಹಣ ವರ್ಗಾವಣೆ ನಡೆಸಿರುವ ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ತಿಳಿಸಿದೆ.
ಡೈರಿ ಇಡಿ ಅಧಿಕಾರಿಗಳ ವಶ
ಶೋಧ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿ ಜಗದೀಶ ನಾಯಕ, ಕೆ.ಎಂ. ತಮ್ಮಣ್ಣ, ವೈ.ಡಿ. ಮಂಜುನಾಥ ಹಾಗೂ ಅವರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದೆ. ವಿವಿಧ ಮದ್ಯದಂಗಡಿಗಳಿಂದ ಪ್ರತಿ ತಿಂಗಳು ಲಂಚದ ರೂಪದಲ್ಲಿ ಹಣ ಸಂಗ್ರಹಿಸಲಾಗುತ್ತಿತ್ತು ಎಂಬ ಉಲ್ಲೇಖವಿರುವ ಡೈರಿಯೊಂದನ್ನೂ ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಲಂಚದ ಮೂಲಕ ಸಂಗ್ರಹಿಸಲಾದ ಹಣವನ್ನು ವೈಯಕ್ತಿಕ ಬಳಕೆ, ಆಸ್ತಿ ಖರೀದಿ ಹಾಗೂ ವಿವಿಧ ವ್ಯವಹಾರಿಕ ಹೂಡಿಕೆಗಳಿಗೆ ಬಳಸಿರುವ ಪ್ರಾಥಮಿಕ ಸುಳಿವುಗಳು ದೊರೆತಿವೆ ಎಂದು ಇಡಿ ಹೇಳಿದೆ.ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ನಡೆದ ಈ ಕಾರ್ಯಾಚರಣೆ ರಾಜ್ಯದ ಆಡಳಿತ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
