ಕನ್ನಡಪ್ರಭ ವಾರ್ತೆ ಕೋಲಾರ
ಮಾಲೂರು ತಾಲೂಕಿನಲ್ಲಿ ನಡೆಯುತ್ತಿರುವ ಭೂ ಅಕ್ರಮಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಮಾಜಿ ಶಾಸಕ ಮಂಜುನಾಥ್ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಭಾವಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನುಗಳನ್ನು ಕಬಳಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಮಾಲೂರಿನಲ್ಲಿ ಶಾಲೆಗೆ ಸೇರಬೇಕಾದ ೫೧ ಎಕರೆ ಜಮೀನನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ದಾಖಲೆಗಳ ಸಮೇತ ದೂರು ನೀಡಿದರೂ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳದೆ ಮೌನ ವಹಿಸಿದೆ ಎಂದು ದೂರಿದ ಅವರು, ೧೬ ಎಕರೆ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಖಾಸಗಿಯವರಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿರುವ ಪ್ರಕರಣವನ್ನೂ ಅವರು ಬೆಳಕಿಗೆ ತಂದರು, ಅಧಿಕಾರಿಗಳೇ ಇಂತಹ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಂಜುನಾಥ್ ಗೌಡ ತಿಳಿಸಿದರು.ಅಕ್ರಮಗಳ ಬಗ್ಗೆ ಸ್ಪಷ್ಟ ದಾಖಲೆಗಳನ್ನು ಒದಗಿಸಿದ್ದರೂ, ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಸುಮೋಟೋ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ಎಂದು ಸಬೂಬು ಹೇಳುವ ಮೂಲಕ ಈ ಅಧಿಕಾರಿಗಳು ಅಕ್ರಮಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಲೂರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವ್ಯಂಗ್ಯವಾಡಿದ ಅವರು, ಅಭಿವೃದ್ಧಿ ಎಂದರೆ ಸರ್ಕಾರಿ ಜಮೀನುಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದೇ ಎಂದು ಪ್ರಶ್ನಿಸಿದರು. ಜಲ್ಲಿ ಕ್ರಷರ್‌ಗಳು ಮತ್ತು ಸರ್ಕಾರಿ ಗುತ್ತಿಗೆಗಳಲ್ಲೂ ಪ್ರಭಾವಿಗಳು ಬೋಗಸ್ ದಾಖಲೆ ಸೃಷ್ಟಿಸಿ ಲೂಟಿ ಮಾಡುತ್ತಿದ್ದಾರೆ. ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ತಮ್ಮ ವಿರುದ್ಧ ಕೇಳಿ ಬರುತ್ತಿರುವ ಬ್ಲ್ಯಾಕ್‌ಮೇಲರ್ ಎಂಬ ಆರೋಪಗಳಿಗೆ ತಿರುಗೇಟು ನೀಡಿದ ಮಂಜುನಾಥ್ ಗೌಡ, ತಾವು ದಾಖಲೆಗಳೊಂದಿಗೆ ಮಾತನಾಡುತ್ತಿರುವುದಾಗಿ ತಿಳಿಸಿದ ಅವರು, ಅಕ್ರಮಗಳ ಬಗ್ಗೆ ತಮ್ಮ ಬಳಿ ವಿಡಿಯೋ ಮತ್ತು ಸರ್ಟಿಫೈಡ್ ಕಾಪಿಗಳಿವೆ, ಆದರೆ ಇವು ನಾಳೆ ಕಣ್ಮರೆಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭ್ರಷ್ಟಾಚಾರದ ವಿರುದ್ಧದ ಹೋರಾಟ ಕೊನೆವರೆಗೂ ಮುಂದುವರಿಸುವುದಾಗಿ ಹೇಳಿದ ಅವರು, ಅಕ್ರಮದಲ್ಲಿ ಭಾಗಿಯಾದವರು ನಿಜವಾಗಿಯೂ ತಪ್ಪಿತಸ್ಥರಲ್ಲದಿದ್ದರೆ, ನೇರವಾಗಿ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.ಮಾಲೂರಿನಲ್ಲಿ ನಡೆಯುತ್ತಿರುವ ಈ ಭೂ ಹಗರಣಗಳು ಕೇವಲ ಒಂದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ, ಇದು ಸಾರ್ವಜನಿಕ ಆಸ್ತಿಯ ಲೂಟಿಯಾಗಿದೆ. ಈ ವಿಷಯವನ್ನು ಮುಚ್ಚಿ ಹಾಕದಂತೆ ಮತ್ತು ಸತ್ಯವನ್ನು ಹೊರತರುವಲ್ಲಿ ಮಾಧ್ಯಮಗಳು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, ಅಧಿಕಾರಿಗಳು ಕ್ರಮ ಕೈಗೊಳ್ಳುವವರೆಗೆ ತಾವು ತಹಸೀಲ್ದಾರ್ ಕಚೇರಿಯಲ್ಲೇ ಕುಳಿತು ಹೋರಾಟ ಮಾಡಲು ಸಿದ್ಧವಿರುವುದಾಗಿ ಅವರು ಎಚ್ಚರಿಸಿದರು.