ಯೋಗದಿಂದ ರೋಗ ದೂರವಾಗುತ್ತದೆ. ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು.
ಆರೋಗ್ಯ ಭಾರತಿ ಯಲ್ಲಾಪುರ ಶಾಖೆ ವತಿಯಿಂದ ಯೋಗ ದಿನಾಚರಣೆ
ಕನ್ನಡಪ್ರಭ ವಾರ್ತೆ ಯಲ್ಲಾಪುರಯೋಗದಿಂದ ರೋಗ ದೂರವಾಗುತ್ತದೆ. ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಆರೋಗ್ಯ ಭಾರತಿ ಯಲ್ಲಾಪುರ ಶಾಖೆಯ ಸಹಕಾರ್ಯದರ್ಶಿ ಮಂಜುನಾಥ್ ಶೇಟ್ ಹೇಳಿದರು.
ಆರೋಗ್ಯ ಭಾರತಿ ಯಲ್ಲಾಪುರ ಶಾಖೆ ವತಿಯಿಂದ ಇಲ್ಲಿನ ಸಬಗೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಚಂದ್ರಕಲಾ ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿದರು.
ಆರೋಗ್ಯ ಭಾರತಿ ಸದಸ್ಯ ಗುರುಪಾದ ಹೆಗಡೆ ಮಾತನಾಡಿ, ಯೋಗದಿಂದ ಮಾನಸಿಕ ಒತ್ತಡ ದೂರ ಮಾಡಲು ಸಾಧ್ಯ ಎಂದರು.ಯಲ್ಲಾಪುರ ತಾಲೂಕು ಆರೋಗ್ಯ ಭಾರತಿ ಅಧ್ಯಕ್ಷ ಎಸ್.ಟಿ. ಭಟ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಉಮಾ ಯಲ್ಲಾಪುರಕರ್, ಚಂದ್ರಪ್ರಭಾ ಬೈಂದೂರು, ಶಿಕ್ಷಕಿ ಸರಸ್ವತಿ ಭಟ್ ಉಪಸ್ಥಿತರಿದ್ದರು.
ಮಕ್ಕಳಿಗೆ ಯೋಗ ತರಬೇತಿ ನೀಡಿದ ಪತಂಜಲಿ ಯೋಗ ಶಿಕ್ಷಕ ನಾಗೇಶ್ ರಾಯ್ಕರ್ ಅವರನ್ನು ಆರೋಗ್ಯಭಾರತಿ ವತಿಯಿಂದ ಸನ್ಮಾನಿಸಲಾಯಿತು. ಮಂಜುನಾಥ ಶೇಟ್ ಅವರು ಜಾಗೃತಿ ಗೀತೆ ಹಾಡಿದರು. ಯೋಗಾಭ್ಯಾಸ ಕುರಿತಂತೆ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮುಖ್ಯ ಶಿಕ್ಷಕಿ ಕುಸುಮಾ ನಾಯಕ ಸ್ವಾಗತಿಸಿದರು. ಆರೋಗ್ಯಭಾರತಿಯ ಕಾರ್ಯದರ್ಶಿ ಶ್ರೀಪಾದ ಹೆಗಡೆ ಧನ್ವಂತರಿ ಸ್ಥವನ ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಭಾರತಿ ನಾಯಕ ವಂದನಾರ್ಪಣೆ ಮಾಡಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಮಕ್ಕಳಿಂದ ಯೋಗ ಪ್ರದರ್ಶನ ನಡೆಯಿತು.