ಒಂದು ರಸ್ತೆಯಲ್ಲಿ ಧೂಳಿನ ರಾಶಿ ಇನ್ನೊಂದು ಮಾರ್ಗದಲ್ಲಿ ಕಸದ ರಾಶಿ, ಹೀಗೆ ಎಲ್ಲೆಡೆ ಸಮಸ್ಯೆಗಳು ರಾರಾಜಿಸುತ್ತಿದ್ದು, ಇದನ್ನು ಸರಿಪಡಿಸುವ ಗೋಜಿಗೆ ಗ್ರಾಪಂಗೆ ಮುಂದಾಗಿಲ್ಲ.

ಗೋಕರ್ಣ: ಸೊಕ್ಕು ಇದ್ದವರಿಗೆ ಯಾಣ, ರೊಕ್ಕ ಇದ್ದವರಿಗೆ ಗೋಕರ್ಣ ಎಂದು ಪ್ರಚಲಿತದಲ್ಲಿರುವ ಗಾದೆ ಮಾತು ಇಲ್ಲಿನ ಸ್ಥಳೀಯ ಆಡಳಿತಕ್ಕೆ ಅನ್ವಯವಾಗುತ್ತಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಒಂದು ರಸ್ತೆಯಲ್ಲಿ ಧೂಳಿನ ರಾಶಿ ಇನ್ನೊಂದು ಮಾರ್ಗದಲ್ಲಿ ಕಸದ ರಾಶಿ, ಹೀಗೆ ಎಲ್ಲೆಡೆ ಸಮಸ್ಯೆಗಳು ರಾರಾಜಿಸುತ್ತಿದ್ದು, ಇದನ್ನು ಸರಿಪಡಿಸುವ ಗೋಜಿಗೆ ಹೋಗದ ಗ್ರಾಮ ಪಂಚಾಯಿತಿ ಕೇವಲ ತಮಗೆ ಆದಾಯ ಬರುವ ಕೆಲಸ ಮಾಡುತ್ತಿದ್ದು, ಜನಸಾಮಾನ್ಯರ ಕೆಲಸವನ್ನು ನಿರ್ಲಕ್ಷಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

ಏನಾಗುತ್ತಿದೆ?

ಇ-ಸ್ವತ್ತು ಮತ್ತಿತರ ಕೆಲಸ ಕಾರ್ಯಗಳಿಗೆ ಇಂತಿಷ್ಟು ಎಂದು ಹಣ ನಿಗದಿಗೊಳಿಸಿದ್ದಾರೆ ಎನ್ನಲಾಗಿದ್ದು, ಕಾಂಚಾಣ ಕೈಗಿಟ್ಟರೆ ಮಾತ್ರ ಕೆಲಸವಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಯಾವುದಾದರೂ ಸಮಸ್ಯೆ, ತೊಂದರೆ ಕುರಿತು ಅರ್ಜಿ ನೀಡಿದರೆ, ಆ ಅರ್ಜಿದಾರನ ವಿರುದ್ಧವೇ ಪ್ರತಿ ದೂರು ನೀಡಿ ಅವನನ್ನು ಹೆದರಿಸುವ ವ್ಯವಸ್ಥಿತ ಕಾರ್ಯ ಆಗುತ್ತಿದೆ ಎಂದು ಇಲ್ಲಿನ ಕೆಲವರು ಹೇಳುತ್ತಾರೆ.

ಹಳೆ ಮನೆಯ ದುರಸ್ತಿ ಅಥವಾ ಚಾವಣಿ ನಿರ್ಮಾಣ ಮಾಡುವವರನ್ನು ಗುರುತಿಸಿ ಅಂಥವರಿಗೆ ನೋಟಿಸ್ ನೀಡಿ, ನೀವು ಅಕ್ರಮ ಕಟ್ಟಡ ಕಟ್ಟುತ್ತಿದ್ದೀರಿ, ತೆರವುಗೊಳಿಸಿ ಎಂದು ಸೂಚಿಸಲಾಗುತ್ತಿದೆ. ಆದರೆ, ವಾಸ್ತವಾಗಿ ಅಕ್ರಮ ಕಟ್ಟಡ ನಿರ್ಮಾಣ ಮಾಡುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ.

ವರಸೆ ಬದಲು

ಇಲ್ಲಿನ ಸಂಗಮ ನಾಲಾದ ಸೇತುವೆಯನ್ನು ಆಕ್ರಮಿಸಿ ಅಂಗಡಿ ಮುಂಗಟ್ಟು ಮುಂದೆ ತಂದಿರುವುದನ್ನು ಸ್ವತಃ ಶಾಸಕ ದಿನಕರ ಶೆಟ್ಟಿ ವೀಕ್ಷಿಸಿ ವಾಹನ ಸಂಚಾರಕ್ಕೆ ತೊಡಕಾಗುತ್ತಿರುವುದನ್ನು ಅರಿತು ತೆರವುಗೊಳಿಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಆರು ತಿಂಗಳ ಕಳೆದರೂ ಯಾವುದೇ ಕ್ರಮವಾಗಿಲ್ಲ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಚಾರಿಸಿದರೆ ರಸ್ತೆ ಆಕ್ರಮಿಸಿದ ಅಂಗಡಿ-ಮುಂಗಟ್ಟುಗಳನ್ನು ರಸ್ತೆಗೆ ಸಂಬಂಧಿಸಿದ ಆಯಾ ಇಲಾಖೆಯವರು ತೆರವು ಮಾಡಬೇಕು, ಆ ಕೆಲಸ ಗ್ರಾಮ ಪಂಚಾಯಿತಿದ್ದಲ್ಲ ಎಂದಿದ್ದಾರೆ. ಹಾಗಾದರೆ ಶಾಸಕರು ಸೂಚಿಸಿದ ದಿನವೇ ಅವರಿಗೆ ತಿಳಿಸಿದರೆ ಅವರು ಆಯಾ ಇಲಾಖೆಗೆ ಹೇಳುತ್ತಿದ್ದರಲ್ಲವೇ ಎಂದು ಪ್ರಶ್ನಿಸಿದಾಗ ತಮ್ಮ ಮಾತಿನ ವರಸೆ ಬದಲಿಸಿದ್ದಾರೆ.

ಎಲ್ಲ "ಮಾಮೂಲಿ "

ಪ್ರವಾಸಿ ತಾಣದಲ್ಲಿ ಎಲ್ಲವೂ ಮಾಮೂಲಿಯಲ್ಲಿ ನಡೆಯುತ್ತಿದ್ದು, ಇದರಂತೆ ಹೊರ ಜಿಲ್ಲೆಗಳಿಂದ ಬಂದು ವಹಿವಾಟು ನಡೆಸುವ ಅಂಗಡಿಕಾರರ ವಹಿವಾಟು ''''ಮಾಮೂಲಿ''''ಗೆ ಒಳಪಟ್ಟಂತೆ ತೋರುತ್ತಿದೆ. ಒಟ್ಟಾರೆ ಜನಸಾಮಾನ್ಯ ಮಾತ್ರ ಅಗತ್ಯ ಕೆಲಸ ಕಾರ್ಯಗಳಿಗೆ ಹೈರಾಣಾಗಿದ್ದರೆ, ಪ್ರವಾಸಿಗರು ಮೂಲಭೂತ ಸೌಕರ್ಯವಿಲ್ಲದೆ ಪರದಾಡುವುದು ಮುಂದುವರಿದಿದೆ.

ರಸ್ತೆಯನ್ನು ಆಕ್ರಮಿಸಿರುವ ಅಂಗಡಿ-ಮುಂಗಟ್ಟುಗಳನ್ನು ರಸ್ತೆ ನಿರ್ವಹಣೆ ಮಾಡುವ ಆಯಾ ಇಲಾಖೆಯೇ ಮಾಡಬೇಕಿದ್ದು, ಪಂಚಾಯಿತಿ ಸಹಕಾರ ನೀಡುತ್ತದೆ. ಅಕ್ರಮ ಕಟ್ಟಡ ಹಾಗೂ ನಿಯಮಮೀರಿ ನಡೆಯುತ್ತಿರುವ ಕೆಲಸಗಳಿಗೆ ನಾವು ಕ್ರಮ ತೆಗೆದುಕೊಳ್ಳುವು ಕುರಿತು ನೋಟಿಸ್ ನೀಡಿದ್ದೇವೆ. ಮುಖ್ಯ ಕಡಲತೀರದಲ್ಲಿ ತಲೆ ಎತ್ತಿರುವ ಕಟ್ಟಡದ ಜಾಗ ಗ್ರಾಮ ಪಂಚಾಯಿತಿಯದ್ದಾಗಿದ್ದು, ಗ್ರಾಪಂನಿಂದ ನೇರವಾಗಿ ಕಟ್ಟಡ ತೆರವುಗೊಳಿಸಲು ಅವಕಾಶವಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೋಕರ್ಣ ಪಿಡಿಒ ವಿ.ಎ. ಪಟಗಾರ ತಿಳಿಸಿದ್ದಾರೆ.