ಉತ್ತಮ ಆರೋಗ್ಯವೇ ಸಕಲ ಭಾಗ್ಯ

| Published : Jan 18 2025, 12:50 AM IST

ಸಾರಾಂಶ

ದುಡ್ಡು ಕೊಟ್ಟರೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಆದರೆ ನೈಸರ್ಗಿಕವಾಗಿ ದೊರೆಯುವಂತಹ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ಮನುಷ್ಯರಾಗಿ ಹುಟ್ಟಿದ ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರಬೇಕು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮಿಗಳು ನುಡಿದರು.

- ಬಸವತತ್ವ ಸಮ್ಮೇಳನ, ಆರೋಗ್ಯ ಶಿಬಿರದಲ್ಲಿ ಪಾಂಡೋಮಟ್ಟಿ ಶ್ರೀ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ದುಡ್ಡು ಕೊಟ್ಟರೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಆದರೆ ನೈಸರ್ಗಿಕವಾಗಿ ದೊರೆಯುವಂತಹ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ಮನುಷ್ಯರಾಗಿ ಹುಟ್ಟಿದ ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರಬೇಕು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮಿಗಳು ನುಡಿದರು.

ಶುಕ್ರವಾರ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಜ.17ರಿಂದ 19ರವರೆಗೆ ನಡೆಯಲಿರುವ ಬಸವತತ್ವದ ಮಹಾಬೆಳಗಿನಲ್ಲಿ ಬೆಳಗಿದ ಲಿಂಗೈಕ್ಯ ಶ್ರೀ ಸಂಗಮನಾಥ ಸ್ವಾಮೀಜಿ 63ನೇ ವರ್ಷದ ಸ್ಮರಣೋತ್ಸವ, ಲಿಂಗೈಕ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳ 18ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನದ ನಿಮಿತ್ತ ಶುಕ್ರವಾರ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ನುರಿತ ವೈದ್ಯ-ಸಿಬ್ಬಂದಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಹೊಲ, ಮನೆ, ಗದ್ದೆ, ತೋಟ, ಅಧಿಕಾರ, ಹಣ, ಬೆಳ್ಳಿ, ಬಂಗಾರ ಇವುಗಳ ಸಂಪಾದನೆಯೇ ಭಾಗ್ಯವಲ್ಲ. ಆರೋಗ್ಯ ಭಾಗ್ಯವೇ ಪ್ರಮುಖವಾಗಿದೆ. ಹೃದಯ ಸಂಬಂಧಿ ಕಾಯಿಲೆ, ಕಿಡ್ನಿಯಂಥ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಅಗತ್ಯ ಎನಿಸಿದರೆ ಉಚಿತ ಶಸ್ತ್ರಚಿಕಿತ್ಸೆಯನ್ನೂ ಮಾಡಲಿದ್ದಾರೆ. ಇಂತಹ ಸಮಾಜಮುಖಿ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಆಸ್ಪತ್ರೆ ಸೇವಾ ಕಾರ್ಯ ಶ್ಲಾಘನೀಯ ಎಂದರು.

ಆರೋಗ್ಯ ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರು ಸೇವೆ ಪಡೆದುಕೊಂಡರು. ಶಿಬಿರದಲ್ಲಿ ನರರೋಗ, ಬೆನ್ನುನೋವು, ಕಿವಿ, ಮೂಗು, ಗಂಟಲು, ಮೂಳೆ ಮತ್ತು ಕೀಲು ರೋಗ, ಸ್ತ್ರೀ ಸೌಖ್ಯ ವಿಭಾಗ, ಬಿ.ಪಿ. ಮತ್ತು ಸಕ್ಕರೆ ಕಾಯಿಲೆ, ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ, ಇ.ಸಿ.ಜಿ. ಮಕ್ಕಳ ವಿಭಾಗ, ಸಾಮಾನ್ಯ ಶಸ್ತ್ರಚಿಕಿತ್ಸೆ ವಿಭಾಗಗಳ ತಜ್ಞ ವೈದ್ಯರಾದ ಡಾ.ಪ್ರಶಾಂತ್, ಡಾ.ಗಿರೀಶ್, ಡಾ.ಶ್ರವಣ್, ಡಾ.ತನು, ಡಾ.ಗ್ರಿಷ್ಮರೆಡ್ಡಿ, ಡಾ.ಸತೀಶ್ ಹಾಗೂ ಸಿಬ್ಬಂದಿ ಆರೋಗ್ಯ ಶಿಬಿರ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಎಂ.ಯು. ಚನ್ನಬಸಪ್ಪ, ಮುಗಳಿಹಳ್ಳಿ ಧನಂಜಯ, ಟಿ.ವಿ.ಚಂದ್ರಪ್ಪ, ಜಿ.ಎಸ್.ಶಿವಮೂರ್ತಿ, ಮದನ್ ಕುಮಾರ್ ಭಕ್ತರು ಹಾಜರಿದ್ದರು.

- - - -17ಕೆಸಿಎನ್‌ಜಿ1:

ಆರೋಗ್ಯ ತಪಾಸಣೆ ಶಿಬಿರಕ್ಕೆ ಪಾಂಡೋಮಟ್ಟಿ ಶ್ರೀ ಚಾಲನೆ ನೀಡಿದರು.