ಸಾರಾಂಶ
ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಉಪ ಪಂಗಡಗಳು ಒಂದಾದರೆ ಶೇ. 17ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ನಾವು ಹೊಂದುತ್ತೇವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಮೈಸೂರು : ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಉಪ ಪಂಗಡಗಳು ಒಂದಾದರೆ ಶೇ. 17ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ನಾವು ಹೊಂದುತ್ತೇವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಇಂಟರ್ನ್ಯಾಷನ್ ಲಿಂಗಾಯತ ಯೂತ್ಫೋರಂ ವತಿಯಿಂದ ಆಯೋಜಿಸಿದ್ದ ಗ್ಲೋಬಲ್ ಬಿಜಿಸಿಸ್ ಸ್ಕಾನ್ಕ್ಲೇವ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೀಸಲಾತಿಗಾಗಿ ನಾವು ಉಪ ಪಂಗಡಗಳಾಗಿ ವಿಂಗಡಣೆ ಆಗುತ್ತಿದ್ದೇವೆ. ಈಗ ಮತ್ತೆ ಜಾತಿಗಣತಿ ಸಮೀಕ್ಷೆ ನಡೆಸಿದರೆ ಶೇ. 1ರಷ್ಟು ಕಡಿಮೆ ಆಗುತ್ತದೆಯೇ ಹೊರತು ಹೆಚ್ಚಾಗುವುದಿಲ್ಲ. ಎಲ್ಲಾ ಉಪ ಪಂಗಡ ಒಂದಾದರೆ ಶೇ. 17ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ನಾವು ಹೊಂದುತ್ತೇವೆ ಎಂದರು.
ಜಾತಿಗಣತಿ ವರದಿಯ ಬಗ್ಗೆ ಚರ್ಚೆ ಆಗುತ್ತಿದೆ. ನಾನು ಜಾತಿಗಣತಿ ವರದಿಯ ಕುರಿತಾಗಿ ನನ್ನ ನಿಲುವು ಹೇಳಿದ್ದೇನೆ. ಯಾವುದೇ ಸಮಾಜಕ್ಕೆ ಅನ್ಯಾಯವಾಗಬಾರದು. ವೀರಶೈವ - ಲಿಂಗಾಯತ ಉಪ ಪಂಗಡಗಳನ್ನು ಒಂದು ಮಾಡಬೇಕೆಂಬ ಕಾರಣಕ್ಕಾಗಿ 1902ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾವನ್ನು ಪ್ರಾರಂಭಿಸಲಾಯಿತು. ಆದರೆ, ಈವರೆಗೂ ಉಪ ಪಂಗಡಗಳನ್ನು ಒಂದುಗೂಡಿಸಬೇಕು ಎನ್ನುವ ಪ್ರಯತ್ನ ಸಫಲವಾಗಿಲ್ಲ ಎಂದರು.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಒಂದಾಗಬೇಕು. ಇತಿಹಾಸ ತಿಳಿಸುವ ಕೆಲಸ ಮಾಡಬೇಕು. ಈ ಕಾರಣಕ್ಕಾಗಿಯೇ ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಸಿಗಬೇಕು. ಇದರಿಂದಾಗಿ ಎಲ್ಲಾ ಉಪ ಪಂಗಡಗಳಿಗೆ ಅನುಕೂಲವಾಗುತ್ತದೆ ಎನ್ನುವ ಚಿಂತನೆ ನನ್ನದು. ಈಗ ಅದರ ಗೋಜಿಗೆ ಮತ್ತೆ ಹೋಗುವುದಿಲ್ಲ. ಲಿಂಗಾಯತ ಧರ್ಮ ಸ್ಥಾಪನೆ ಮಾಡುವಾಗ ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಅವರು ಬೇಸರಿಸಿದರು.
ಆರಂಭದಿಂದಲೂ ವೀರಶೈವ ಲಿಂಗಾಯತ ಉಪ ಪಂಗಡಗಳು ಹರಿದು ಹಂಚಿ ಹೋಗಿದ್ದೇವೆ. ಜಾತಿಗಣತಿ ವರದಿಯ ಬಗ್ಗೆ ಮತ್ತೊಮ್ಮೆ ಸಮೀಕ್ಷೆ ಮಾಡಿದರೂ ಶೇ. 1ರಷ್ಟು ಕಡಿಮೆಯಾಗುತ್ತೇವೆಯೇ ಹೊರತು ಹೆಚ್ಚಾಗಲ್ಲ. ಏಕೆಂದರೆ ನಾವೆಲ್ಲರೂ ವೀರಶೈವ ಲಿಂಗಾಯತ ಎನ್ನುವುದನ್ನು ಬರೆಸದೆ ಹಿಂದೂ ಗಾಣಿಗ ಸಮಾಜ, ಹಿಂದೂ ಸಾದರು, ಹಿಂದೂ ಬಣಜಿಗ, ಹಿಂದೂ ರೆಡ್ಡಿ ಅಂತ ಬರೆಯಿಸಿದ್ದಾರೆ. ಹಿಂದುಳಿದ ವರ್ಗಗಳ ಮೀಸಲಾತಿಗಾಗಿ ನಾವು ಉಪ ಪಂಗಡಗಳನ್ನು ಜಾತಿಗಣತಿಯಲ್ಲಿ ನಮೂದು ಮಾಡುತ್ತಿರುವುದರಿಂದ ಜಾತಿಗಣತಿ ಸಮೀಕ್ಷೆಯಲ್ಲಿ ಬೇರೆ ಬೇರೆಯಾಗಿ ಗುರುತಿಸಲಾಗುತ್ತಿದೆ ಎಂದು ಅವರು ಹೇಳಿದರು.
ಒಂದು ವೇಳೆ ನಾವು ಒಂದೇ ಅಂಶವನ್ನು ಬರೆಯಿಸಿದರೆ ಶೇ. 17ರಷ್ಟು ಅಲ್ಲ, ಶೇ. 30ರಷ್ಟು ಜನಸಂಖ್ಯೆಯನ್ನು ಹೊಂದಿರುತ್ತೇವೆ. ಉಪ ಪಂಗಡಗಳಿಗೆ ಮೀಸಲಾತಿ ಸಿಗಬೇಕು ಎನ್ನುವ ಕಾರಣಕ್ಕಾಗಿ ನಾವು ಹಿಂದುಳಿದ ವರ್ಗ 2ಎಗೆ ಸೇರಿಸುವಂತೆ ಹೇಳಲಾಗುತ್ತಿದೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ನಾವು ಮುಂದೆ ಬರಬೇಕು. ಪಂಚಪೀಠಗಳ ಗುರುಗಳ ನೇತೃತ್ವದಲ್ಲಿ ಒಂದಾಗಬೇಕು. ಈ ಸಮಾಜ ಶಕ್ತಿಯಾಗಿ ಉಳಿಯಬೇಕು ಎಂದರು.
ಸಮುದಾಯಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ನಾವು ಸಮುದಾಯದ ಬಲ ಹೆಚ್ಚು ಮಾಡಬೇಕು. ಪಕ್ಷ, ಪಂಗಡ ವಿಚಾರ ಬಿಟ್ಟು ಸಮಾಜದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ವೀರಶೈವ ಸಮಾಜವು ಇಂದು ಬಸವಣ್ಣನವರ ತತ್ತ್ವವನ್ನು ಅನುಸರಿಸಿಕೊಂಡು ಬಂದಿದೆ. ವೀರಶೈವ ಲಿಂಗಾಯತ ಸಮುದಾಯದ ಯುವಕ, ಯುವತಿಯರಿಗೆ ಮಾರ್ಗದರ್ಶನ, ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.
ಉತ್ತರ ಮತ್ತು ದಕ್ಷಿಣ ಕರ್ನಾಟಕದ ಬಾಂಧವ್ಯ ಹೆಚ್ಚಬೇಕು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮುಂಬೈ ಕರ್ನಾಟಕದ ಜನರಲ್ಲಿ ಲಿಂಕ್ ಕೈ ತಪ್ಪಿರುವುದನ್ನು ಒಂದುಗೂಡಿಸಬೇಕು. ಅದಕ್ಕಾಗಿಯೇ ದಕ್ಷಿಣಭಾಗದಲ್ಲಿ ಏನೇ ನಡೆದರೂ ನಾನು ಬರುತ್ತೇನೆ. ಪರಸ್ಪರ ಬೆರೆಯುವ ಕೆಲಸ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜಕ್ಕೆ ಭವ್ಯ ಇತಿಹಾಸವಿದೆ. ಒಳ ಪಂಗಡಗಳು ಹೋಗಬೇಕು ಎನ್ನುವ ಬಯಕೆ ಹೊಂದಿದ್ದರೂ ಮತ್ತೆ ಮತ್ತೆ ಒಳಪಂಗಡಗಳು ಬೇರೂರುವ ವಾತಾವರಣ ಕಾಣುತ್ತಿದ್ದೇವೆ. ಜಾತೀಯತೆ ಹೋಗಬೇಕು ಎನ್ನುವ ಆಶಯದಿಂದ ಇಷ್ಟಲಿಂಗ ಕೊಟ್ಟಿದ್ದೇ ಹೊರತು ಧಾರ್ಮಿಕ ಸಂಕೇತವಾಗಿ ಕೊಡಲಿಲ್ಲ ಎಂದರು.
ಮಧ್ಯಮ ವರ್ಗದ ಜನರು ಉದ್ಯಮ ಸ್ಥಾಪಿಸಬೇಕು. ಸಮಸ್ಯೆಗಳನ್ನು ಪರಿಹಾರ ಮಾಡಿ ಮತ್ತು ಪರಸ್ಪರ ಸಂಬಂಧ ಜಾಲವನ್ನು ಒದಗಿಸಬೇಕು. ಬೃಹತ್ ಆಗಿ ಬೆಳೆಯಬೇಕು. ಸಣ್ಣ ಉದ್ಯಮಿಯೊಬ್ಬರು ಹೇಳಿದ ಮಾತಿನಂತೆ ಮೀಸಲಾತಿಗೆ ಭಿಕ್ಷೆ ಪಾತ್ರೆ ಹಿಡಿಯದಂತೆ ಸ್ವತಂತ್ರವಾಗಿ ಬೆಳೆಯಬೇಕು ಎಂಬ ಮಾತನ್ನು ಒಪ್ಪಬೇಕು. ನಾವು ದುಡಿಯುವ ಜತೆಗೆ ಮತ್ತೊಬ್ಬರಿಗೂ ಉದ್ಯೋಗ ಕೊಡುವಂತೆ ಆಗಬೇಕು ಎಂದು ಸಲಹೆ ನೀಡಿದರು.