ಸಾರಾಂಶ
ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಡಾ। ಯತೀಂದ್ರ ಹೇಳಿಲ್ಲ. ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ಅವರ ಹಾದಿಯಲ್ಲಿ ಸತೀಶ್ ಹೋಗುತ್ತಾರೆ ಎಂದಷ್ಟೇ ಹೇಳಿದ್ದಾರೆ. ಯತೀಂದ್ರ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ’ ಎಂದು ಡಾ। ಜಿ.ಪರಮೇಶ್ವರ್ ಸೇರಿ ಹಲವು ಸಚಿವರು ಸಮರ್ಥನೆ ನೀಡಿದ್ದಾರೆ.
ಬೆಂಗಳೂರು : ‘ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಡಾ। ಯತೀಂದ್ರ ಹೇಳಿಲ್ಲ. ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ಅವರ ಹಾದಿಯಲ್ಲಿ ಸತೀಶ್ ಹೋಗುತ್ತಾರೆ ಎಂದಷ್ಟೇ ಹೇಳಿದ್ದಾರೆ. ಯತೀಂದ್ರ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ’ ಎಂದು ಡಾ। ಜಿ.ಪರಮೇಶ್ವರ್ ಸೇರಿ ಹಲವು ಸಚಿವರು ಸಮರ್ಥನೆ ನೀಡಿದ್ದಾರೆ.
ನಮ್ಮ ತಂದೆ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಇಂತಹ ಸಮಯದಲ್ಲಿ ಪ್ರಗತಿಪರ ಚಿಂತನೆ ಉಳ್ಳವರಿಗೆ ಸೈದ್ಧಾಂತಿಕವಾಗಿ ಮಾರ್ಗದರ್ಶನ ನೀಡಲು, ಮುನ್ನಡೆಸಲು ಒಬ್ಬ ನಾಯಕನ ಅಗತ್ಯವಿದೆ. ಈ ಜವಾಬ್ದಾರಿ ತೆಗೆದುಕೊಳ್ಳಲು ಸತೀಶ್ ಜಾರಕಿಹೊಳಿ ಸಮರ್ಥರು ಎಂದಿದ್ದ ಯತೀಂದ್ರ ಹೇಳಿಕೆ ಬಗ್ಗೆ ತೀವ್ರ ಚರ್ಚೆಗಳು ಶುರುವಾಗಿವೆ.
ಈ ಬಗ್ಗೆ ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಈಶ್ವರ್ ಖಂಡ್ರೆ ಸೇರಿ ಹಲವರು ಪ್ರತಿಕ್ರಿಯೆ ನೀಡಿದ್ದು, ಯತೀಂದ್ರ ಹೇಳಿಕೆ ಕುರಿತು ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ಅವರ ದಾರಿಯಲ್ಲೇ ಸತೀಶ್ ಹೋಗುತ್ತಾರೆ ಎಂದು ಯತೀಂದ್ರ ಹೇಳಿದ್ದು, ಇದರಲ್ಲಿ ತಪ್ಪೇನಿದೆ? ಸತೀಶ್ ಜಾರಕಿಹೊಳಿ ಅವರು ಈ ಹಿಂದೆ ಅಹಿಂದ ಚಳವಳಿಯಲ್ಲಿದ್ದರು. ಅವರಿಗೆ ಆ ಬದ್ಧತೆ ಇದೆ ಎಂದು ಯತೀಂದ್ರ ಅವರು ಹೇಳಿರಬಹುದು. ಮುಖ್ಯಮಂತ್ರಿ ಹುದ್ದೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಹೇಳಿಕೆ ನೀಡಿಲ್ಲ. ಇದಕ್ಕೆ ಪ್ರತ್ಯೇಕ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.
ಸಿಎಂ ಧ್ವನಿ ಎಂದು ಬಿಂಬಿಸುವುದು ಸಲ್ಲ-ಖಂಡ್ರೆ:
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ವಿಧಾನಪರಿಷತ್ ಸದಸ್ಯ ಯತೀಂದ್ರ ಅವರ ಮಾತುಗಳನ್ನು ಮುಖ್ಯಮಂತ್ರಿಗಳ ಧ್ವನಿ ಎಂದು ಬಿಂಬಿಸುವುದು ಸರಿಯಲ್ಲ. ಯತೀಂದ್ರ ಅವರು ಈಗಾಗಲೇ ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಹೀಗಾಗಿ ನಾವೇನೂ ವ್ಯಾಖ್ಯಾನಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿಗಳ ಕುರ್ಚಿ ಖಾಲಿ ಇಲ್ಲ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ. ಈ ಬಗ್ಗೆ ಚರ್ಚೆಯೇ ಅಪ್ರಸ್ತುತ. ಪಕ್ಷ 2028ರಲ್ಲೂ ಮರಳಿ ಅಧಿಕಾರಕ್ಕೆ ಬರಲಿದ್ದು, ಆಗ ಪಕ್ಷದ ವರಿಷ್ಠರು, ಸೂಕ್ತ ಸಂದರ್ಭದಲ್ಲಿ, ಎಲ್ಲ ಜಾತಿ, ಸಮುದಾಯದವರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಯತೀಂದ್ರ ಹೇಳಿಕೆಯಲ್ಲಿ
ತಪ್ಪೇನಿದೆ?: ಪ್ರಿಯಾಂಕ್
ಸತೀಶ್ ಜಾರಕಿಹೊಳಿ ಸೈದ್ಧಾಂತಿಕವಾಗಿ ಮೂಢನಂಬಿಕೆ ನಿವಾರಿಸಲು ಸಂಘಟನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಸಂವಿಧಾನದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪರ ಇದ್ದಾರೆ. ಈ ಕುರಿತು ಯತೀಂದ್ರ ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಸೈದ್ಧಾಂತಿಕವಾಗಿ ವಾರಸುದಾರರು ಇರಬೇಕಲ್ಲವೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಯಾರೂ ಸನ್ಯಾಸಿಗಳಲ್ಲ: ಎಂಬಿಪಾ
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ, ಪರಮೇಶ್ವರ್, ರಾಮಲಿಂಗಾರೆಡ್ಡಿ ಸೇರಿ ಹಲವರು ಸಮರ್ಥರಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಪ್ರಮುಖ ನಾಯಕರು. ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಯಿದೆ. ಆದರೆ, ನಮ್ಮಲ್ಲಿ ಈಗ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಹಲವು ಪ್ರಬಲರಿದ್ದಾರೆ. ಇಲ್ಲಿ ಯಾರೂ ಸನ್ಯಾಸಿಗಳಲ್ಲ. ಡಿ.ಕೆ ಶಿವಕುಮಾರ್, ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ ಎಲ್ಲರೂ ಸಮರ್ಥರೇ. ಇನ್ನು ಸಿದ್ದರಾಮಯ್ಯ ಅವರದ್ದು ಕೊನೆಯ ಚುನಾವಣೆ ಆದರೂ ಅವರ ನಾಯಕತ್ವ ಮುಂದೆಯೂ ಬೇಕು ಎಂದರು.
)

;Resize=(128,128))
;Resize=(128,128))
;Resize=(128,128))