ಬಸವಪ್ಪನಿಂದ ಗ್ರಾಮದ ಹಿರಿಮೆ ಹೆಚ್ಚಾಗಿದೆ: ಶಾಸಕ ಕೆ.ಎಂ.ಉದಯ್ ಅಭಿಪ್ರಾಯ

| Published : Jan 18 2025, 12:50 AM IST

ಸಾರಾಂಶ

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೇ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ದುಡಿಯಿರಿ. ದೇಗುಲಕ್ಕೆ ವಿವಿಧ ಭಾಗದಿಂದ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಅಭಿವೃದ್ಧಿಗೆ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಾರ್ಕಹಳ್ಳಿ ಶ್ರೀಬಸವೇಶ್ವರ ಸ್ವಾಮಿಯ ಬಸವಪ್ಪನಿಂದ ಗ್ರಾಮದ ಹಿರಿಮೆ ಹೆಚ್ಚಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಅಭಿಪ್ರಾಯಪಟ್ಟರು.

ಗ್ರಾಮದಲ್ಲಿ ಕದಲೂರು ಉದಯ್ ಅಭಿಮಾನಿ ಬಳಗ ಮತ್ತು ಗ್ರಾಮಸ್ಥರ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶ್ರೀ ಕ್ಷೇತ್ರದ ಮಹಾತ್ಮೆ ರಾಜ್ಯದೆಲ್ಲೆಡೆ ಪಸರಿಸಿದೆ. ಅದ್ಭುತ ಪುಣ್ಯ ಕ್ಷೇತ್ರವಾಗಿ ಹೊರ ಹೊಮ್ಮಿದೆ ಎಂದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೇ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ದುಡಿಯಿರಿ. ದೇಗುಲಕ್ಕೆ ವಿವಿಧ ಭಾಗದಿಂದ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಅಭಿವೃದ್ಧಿಗೆ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.

ದೇವಾಲಯ ವಿಚಾರದಲ್ಲಿ ಇರುವ ಸಣ್ಣ- ಪುಟ್ಟ ಗೊಂದಲಗಳನ್ನು ಬದಿಗೊತ್ತಿ ಶ್ರೀ ಬಸವೇಶ್ವರರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಆಚರಿಸೋಣ. ಎಲ್ಲರೂ ಒಗ್ಗಟಾಗಿ ನಿಂತು ತಮ್ಮ ಗ್ರಾಮದ ಹಬ್ಬಕ್ಕೆ ಮೆರಗು ನೀಡಲು ಚಿಂತಿಸೋಣ ಎಂದರು.

ನೀರಾವರಿ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುತ್ತೇನೆ. ಕೊನೆ ಭಾಗದ ರೈತರ ಸಮಸ್ಯೆ ತಿಳಿದಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ನಾಲಾ ಆಧುನೀಕರಣಗೊಳಿಸಿ ಕೊನೆ ಭಾಗಕ್ಕೆ ಸರಾಗವಾಗಿ ನೀರು ಹರಿಯಲು ಸಾಧ್ಯವಾಗುತ್ತದೆ. ಈ ಕುರಿತು ನೀರಾವರಿ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ಗ್ರಾಮಸ್ಥರಿಂದ ಶಾಸಕ ಉದಯ್ ಅವರನ್ನು ಅಭಿನಂದಿಸಲಾಯಿತು. ಜಿಪಂ ಮಾಜಿ ಸದಸ್ಯ ಎ.ಎಸ್. ರಾಜೀವ್, ಮುಖಂಡರಾದ ಹರೀಶ್ ಬಾಬು, ಮಿಣಕೇಗೌಡ, ನಾಡಗೌಡ ತಮ್ಮಣ್ಣ, ದೇವೇಗೌಡ, ಅಂಗಡಿ ತಮ್ಮಯ್ಯ, ಪ್ರಕಾಶ್, ಕೆ.ಎಸ್. ಮಾದೇಗೌಡ, ಯುವ ಮುಖಂಡರಾದ ಸಚಿನ್, ನಂದೀಶ್, ಪ್ರದೀಪ್, ಕರಡಕೆರೆ ಮನು, ಅಣ್ಣೂರು ರಾಘವೇಂದ್ರ ಸೇರಿದಂತೆ ಮತ್ತಿತರಿದ್ದರು.