ಸಾರಾಂಶ
ಬೆಂಗಳೂರು : ಆಳಂದ ಮತಗಳವು ಯತ್ನ ಬಯಲಾದ ಬೆನ್ನಲ್ಲೇ ಅದೇ ಜಿಲ್ಲೆಯ ಮತ್ತೆರಡು ವಿಧಾನಸಭಾ ಕ್ಷೇತ್ರಗಳಲ್ಲೂ ಮತ ಅಳಿಸಿ ಹಾಕುವ ಪ್ರಯತ್ನ ನಡೆದಿತ್ತು ಎಂಬ ಅನುಮಾನ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯಲ್ಲಿ ವ್ಯಕ್ತವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಮತ ಕಳವು ಯತ್ನ ಶಂಕೆ ಮೂಡಿದ್ದು, ಇದಕ್ಕೆ ಕೆಲ ದಾಖಲೆಗಳು ಆಳಂದ ಪ್ರಕರಣದ ತನಿಖೆ ವೇಳೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಹುರಿಯಾಳುಗಳು ಗೆಲುವು ಸಾಧಿಸಿದ್ದರು.
ಇತ್ತೀಚೆಗೆ ಆಳಂದ ಕ್ಷೇತ್ರದ ಮತಗಳವು ಯತ್ನ ಸಂಬಂಧ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ ಕೆಲವರ ಮನೆಗಳ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಾಲ್ ಸೆಂಟರ್ ಸಿಬ್ಬಂದಿ ಮನೆಯಲ್ಲಿ ಶೋಧನೆ ವೇಳೆ ಪತ್ತೆಯಾದ ದಾಖಲೆಗಳನ್ನು ಪರಿಶೀಲಿಸಿದಾಗ ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳ ಮತದಾರರ ಕುರಿತು ಮಾಹಿತಿ ಸಿಕ್ಕಿದೆ. ಈ ಎರಡು ಕ್ಷೇತ್ರಗಳ ಮತದಾರರ ಪಟ್ಟಿ ಹಾಗೂ ನಿರ್ದಿಷ್ಟ ಪಕ್ಷಕ್ಕೆ ಬೀಳುವ ಮತತಗಳು ಎಂದು ಊಹಿಸಿದ್ದ ಮತದಾರರ ವಿವರ ಕೂಡ ಇದೆ ಎಂದು ಮೂಲಗಳು ತಿಳಿಸಿವೆ.
ದೂರು ದಾಖಲಾಗಿಲ್ಲ-ತನಿಖೆ ಇಲ್ಲ:
ಅಂದು ಚುನಾವಣೆ ವೇಳೆ ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಮತ ಕಳವು ಯತ್ನ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಈ ಬಗ್ಗೆ ಆ ಕ್ಷೇತ್ರದ ಚುನಾವಣಾಧಿಕಾರಿಗಳು ದೂರು ನೀಡದೆ ತನಿಖೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಆ ಎರಡು ಕ್ಷೇತ್ರಗಳ ಬಗ್ಗೆ ಹೆಚ್ಚಿನ ತನಿಖೆಗೆ ಎಸ್‌ಐಟಿ ಮುಂದಾಗಿಲ್ಲ ಎಂದು ತಿಳಿದು ಬಂದಿದೆ.
ಅಲ್ಪಸಂಖ್ಯಾತರ ಮತಗಳಿಗೆ ಕನ್ನ : ಈ ಎರಡು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತಗಳಿಗೆ ಕನ್ನ ಹಾಕುವ ಯತ್ನ ನಡೆದಿತ್ತು ಎನ್ನಲಾಗಿದೆ. ಕಲಬುರಗಿ ಉತ್ತರದಲ್ಲಿ ಅಲ್ಪಸಂಖ್ಯಾತರ ಮತಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿವೆ. ಅದೇ ರೀತಿ ದಕ್ಷಿಣದಲ್ಲಿ ಫಲಿತಾಂಶ ಬದಲಾಯಿಸುವ ಮಟ್ಟಿಗೆ ಆ ಸಮುದಾಯದ ಮತಗಳು ನಿರ್ಣಾಯಕವಾಗಲಿವೆ. ಹೀಗಾಗಿ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲು ಅದೇ ಸಮುದಾಯದವರನ್ನು ಕೆಲವರು ಗುರಾಣಿಯಾಗಿ ಬಳಸಿದ್ದಾರೆ ಎನ್ನಲಾಗಿದೆ.
)
;Resize=(128,128))
;Resize=(128,128))
;Resize=(128,128))