ಸಾರಾಂಶ
ಮಾಗಡಿ: ತಾಲೂಕಿನ ಸಾಂಸ್ಕೃತಿಕ ವಿಶ್ವವಿದ್ಯಾಲಯ ಪ್ರಾರಂಭವಾದ ಬಳಿಕ ವಿವಿಯಲ್ಲಿ ಸಂತ ಶಿವಯೋಗಿ ಸಿದ್ದರಾಮೇಶ್ವರರ ಅಧ್ಯಯನ ಪೀಠ ಸ್ಥಾಪಿಸಿ ಸಂತರಿಗೆ ಗೌರವ ಸಲ್ಲಿಸಬೇಕು ಎಂದು ತಾಲೂಕು ಭೋವಿ ಸಮಾಜದ ಅಧ್ಯಕ್ಷ ಬಿ.ಟಿ.ವೆಂಕಟೇಶ್ ಒತ್ತಾಯಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಭೋವಿ ಸಂಘ ಆಯೋಜಿಸಿದ್ದ ಸಂತ ಶಿವಯೋಗಿ ಸಿದ್ದರಾಮೇಶ್ವರರ 852ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಭೋವಿ ಸಮಾಜದವರು ದಡ್ಡರಲ್ಲ, ಅವರೂ ಸಮಾಜದಲ್ಲಿ ಗುಡಿ, ಗೋಪುರ, ಕೆರೆಕಟ್ಟೆಗಳನ್ನು ನಿರ್ಮಿಸಿ ತಮ್ಮದೇ ಆದ ಸೇವೆ ಸಲ್ಲಿಸಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸಮಾನತೆಯ ಸಮಾಜಕ್ಕೆ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ ಎಂದರು.ಸಿದ್ದರಾಮೇಶ್ವರರರು ಕಪಿಲ ಸಿದ್ದ ಮಲ್ಲಿಕಾರ್ಜುನ ಎಂದೂ ಕರೆಯಲ್ಪಡುವ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ನಿಜವಾಗಿಯೂ ಲಿಂಗಾಯತ ಬೋಧನೆ ಮತ್ತು ತತ್ವಶಾಸ್ತ್ರದ ಬೆಳವಣಿಗೆಯಲ್ಲಿ ಗಮನಾರ್ಹ ವ್ಯಕ್ತಿಯಾಗಿದ್ದರು. ಶಿವಯೋಗಿ ಸಿದ್ದರಾಮೇಶ್ವರರು ಪ್ರಬುದ್ಧ ಲೇಖಕರು ಮಾತ್ರವಲ್ಲದೆ ತಮ್ಮ ಕಾಲದಲ್ಲಿ ಪ್ರಗತಿಪರ ಆದರ್ಶಗಳನ್ನು ಪ್ರತಿಪಾದಿಸಿದ ಸಮಾಜ ಸುಧಾರಕರೂ ಆಗಿದ್ದರು. ಆವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಆಳವಡಿಸಿಕೊಂಡು ಸಮಾಜದ ಮುನ್ನೆಡೆಗೆ ಶಕ್ತಿ ಮೀರಿ ಶ್ರಮಿಸೋಣ ಎಂದು ಹೇಳಿದರು.
ತಹಸೀಲ್ದಾರ್ ಶರತ್ ಕುಮಾರ್ ಮಾತನಾಡಿ, ಲಿಂಗಾಯತ ಸಮುದಾಯ ಮತ್ತು ಅದರಾಚೆಗೆ ಶಾಶ್ವತವಾದ ಪ್ರಭಾವ ಬೀರಿವೆ. ಅವರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪ. ಸರ್ಕಾರ ಭೋವಿ ಸಮುದಾಯದವರಿಗೆ ಸವಲತ್ತುಗಳನ್ನು ಕಾಲಕಾಲಕ್ಕೆ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.ಭೋವಿ ಸಮಾಜದ ಶಂಕರ್ ಮಾತನಾಡಿ, ಸಿದ್ಧರಾಮೇಶ್ವರರ ಗಮನಾರ್ಹ ಪರಂಪರೆಯೆಂದರೆ ವಚನಗಳ ರಚನೆ, ಅವು ಕಾವ್ಯ ಶ್ಲೋಕಗಳ ರೂಪದಲ್ಲಿ ಪವಿತ್ರ ಬೋಧನೆಗಳಾಗಿವೆ. ಅವರು ತಮ್ಮ ಜೀವಿತಾವಧಿಯಲ್ಲಿ 68,000ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆನ್ನಲಾಗಿದೆ. ಇದು ಅವರ ಆಳವಾದ ಆಧ್ಯಾತ್ಮಿಕ ಒಳನೋಟಗಳು ಮತ್ತು ಭಕ್ತಿಯನ್ನು ಪ್ರತಿಬಿಂಬಿಸುತ್ತದೆ. ಆದರೆ, ಸುಮಾರು 1,992 ವಚನಗಳ ಅವರ ಕೃತಿಯ ಒಂದು ಭಾಗ ಮಾತ್ರ ಇಂದು ನಮಗೆ ಲಭ್ಯವಾಗಿದೆ. ವಚನಗಳ ರಕ್ಷಣೆಗೆ ಅಧ್ಯಯನ ಪೀಠ ಅನಿವಾರ್ಯವಾಗಿದೆ ಎಂದರು.
ತಾಪಂ ಮಾಜಿ ಸದಸ್ಯ ಸಿ.ಜಯರಾಂ ಮಾತನಾಡಿ, ಸಿದ್ದರಾಮೇಶ್ವರರು ಪ್ರಬುದ್ಧ ಲೇಖಕರು ಮಾತ್ರವಲ್ಲದೆ ತಮ್ಮ ಕಾಲದಲ್ಲಿ ಪ್ರಗತಿಪರ ಆದರ್ಶಗಳನ್ನು ಪ್ರತಿಪಾದಿಸಿದ ಸಮಾಜ ಸುಧಾರಕರೂ ಆಗಿದ್ದರು. ಅವರು ದೈಹಿಕ ಶ್ರಮದ ಪ್ರಾಮುಖ್ಯತೆ ಒತ್ತಿಹೇಳಿದರು, ಆಧ್ಯಾತ್ಮಿಕ ಅಭ್ಯಾಸದ ಸಾಧನವಾಗಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು. ಹೆಚ್ಚುವರಿಯಾಗಿ ಅವರು ಸಮುದಾಯದ ಕಾರ್ಮಿಕರ ಪರಿಕಲ್ಪನೆಯನ್ನು ಉತ್ತೇಜಿಸಿದರು. ಸಮಾಜದ ಸುಧಾರಣೆಗಾಗಿ ಸಾಮೂಹಿಕ ಪ್ರಯತ್ನದ ಮಹತ್ವ ಒತ್ತಿ ಹೇಳಿದರು.ಸಂಸ್ಕೃತ ಪಂಡಿತ ಕಣ್ಣೂರು ರಾಜಣ್ಣ, ಗ್ರೇಡ್-2 ತಹಸೀಲ್ದಾರ್ ಪ್ರಭಾಕರ್ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ನಾಗರಾಜು, ತಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ, ಹೂಜಿಗಲ್ ರಾಜಣ್ಣ, ಹನುಮಾಪುರ, ಕುಮಾರಸ್ವಾಮಿ, ಶಂಕರ್ ನಾರಾಯಣ, ಗುಣಶೇಖರ್, ಗ್ರಾಪಂ ಸದಸ್ಯ ಚಿಕ್ಕಣ್ಣ, ಶಿವಲಿಂಗಯ್ಯ, ಚಂದೂರಾಯನಹಳ್ಳಿ ಶಿವರಾಮೇಗೌಡ, ಆರ್‌ಟಿಒ ಇಲಾಖೆಯ ಗಂಗಣ್ಣ, ವೆಂಕಟೇಶ್, ತಿರುಮಲೆ ಪಾಂಡು, ಸಿಡಿಗನಹಳ್ಳಿ ವೆಂಕಟೇಶ್, ಶಂಕರ್, ಗಾರೆ ಗಿರೀಶ್ ಇತರರು ಭಾಗವಹಿಸಿದ್ದರು.
17ಮಾಗಡಿ2 :ಮಾಗಡಿಯಲ್ಲಿ ತಾಲೂಕು ಆಡಳಿತ ಮತ್ತು ಭೋವಿ ಸಂಘ ಆಯೋಜಿಸಿದ್ದ ಸಂತ ಶಿವಯೋಗಿ ಸಿದ್ದರಾಮೇಶ್ವರರ 852ನೇ ಜಯಂತ್ಯುತ್ಸವದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ತಹಸೀಲ್ದಾರ್ ಶರತ್‌ಕುಮಾರ್ ಹಾಗೂ ಭೋವಿ ಸಂಘದ ಅಧ್ಯಕ್ಷ ಬಿ.ಟಿ.ವೆಂಕಟೇಶ್ ಮತ್ತು ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.