ಮೂರನೇ ದಿನವೂ ಜಾತ್ರೆಯಲ್ಲಿ ಜನಸಾಗರ

| Published : Jan 18 2025, 12:50 AM IST

ಸಾರಾಂಶ

ಮೂರೇ ದಿನದಲ್ಲಿ 5-6 ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ.

ಲಕ್ಷ ಲಕ್ಷ ಭಕ್ತರ ಪ್ರಸಾದ ಸ್ವೀಕಾರ

ಹಲವು ತರಹದ ಭಕ್ಷ್ಯ-ಭೋಜನ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಒಂದನೇ ದಿನ 130 ಕ್ವಿಂಟಲ್, ಎರಡನೇ ದಿನ 140 ಕ್ವಿಂಟಲ್, ಮೂರನೇ ದಿನ 70 ಕ್ವಿಂಟಲ್ ಅಕ್ಕಿ ಬಳಕೆಯಾಗಿದೆ.

ಇದು, 2025ರ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿನ ಮಹಾದಾಸೋಹದಲ್ಲಿ ಮೂರು ದಿನಗಳಲ್ಲಿ ಕೇವಲ ಅನ್ನದ ಲೆಕ್ಕಾಚಾರ. ಇದಲ್ಲದೆ ಹತ್ತಿಪ್ಪತ್ತು ಕೊಪ್ಪರಿಗೆ ಸಾಂಬರು, ಹತ್ತಾರು ಕೊಪ್ಪರಿಗೆ ಪಲ್ಯ. ಅಷ್ಟೇ ಯಾಕೆ 450 ಕ್ವಿಂಟಲ್ ಜಿಲೇಬಿ, 100 ಕ್ವಿಂಟಲ್ ಮಾದಲಿ, 25 ಕ್ವಿಂಟಲ್ ಮಿರ್ಚಿ ಭಜ್ಜಿ ಖರ್ಚಾಗಿದೆ.

ಇದರ ಲೆಕ್ಕಾಚಾರದಲ್ಲಿ ಮೂರೇ ದಿನದಲ್ಲಿ 5-6 ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ ಎನ್ನುತ್ತಾರೆ ದಾಸೋಹದ ಉಸ್ತುವಾರಿ ಪ್ರಕಾಶ ಚಿನಿವಾಲರ.

ಕಳೆದ ವರ್ಷಕ್ಕಿಂತಲೂ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಮಹಾದಾಸೋಹದಲ್ಲಿ ಪ್ರಸಾದ ಸ್ವೀಕಾರ ಮಾಡಿರುವವರ ಸಂಖ್ಯೆಯೂ ಅಧಿಕವಾಗಿದೆ. ಜಿಲೇಬಿ, ಮಾದಲಿ, ಮಿರ್ಚಿ ಭಜ್ಜಿ, ರೊಟ್ಟಿ, ಪಲ್ಯ, ಸಾಂಬಾರು, ಕೆಂಪು ಚಟ್ನಿ, ಶೇಂಗಾ ಪುಡಿ ಇದು ಮಹಾದಾಸೋಹದಲ್ಲಿರುವ ಪ್ರಸಾದದ ವೈವಿಧ್ಯತೆಗಳು. ಬಹುಶಃ ಮಠದಲ್ಲಿ ದಾಸೋಹದಲ್ಲಿ ನಡೆಯುತ್ತಿರುವ ದಾಸೋಹದಲ್ಲಿಯೇ ಇಷ್ಟೊಂದು ವಿವಿಧ ವಿಶೇಷತೆಗಳು ಇರುವುದು ಇಲ್ಲಿ ಮಾತ್ರ.

ಮಧ್ಯರಾತ್ರಿಯವರೆಗೂ ದಾಸೋಹ:

ಮಹಾದಾಸೋಹ ರಥೋತ್ಸವದ ದಿನ ಮತ್ತು ಮರುದಿನ ತಡರಾತ್ರಿ ಒಂದೂವರೆವರೆಗೂ ಪ್ರಸಾದ ವಿತರಣೆ ನಡೆದಿದೆ. ಕಾರ್ಯಕ್ರಮ ಪೂರ್ಣಗೊಂಡ ನಂತರವೂ ಬಂದ ಭಕ್ತರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಖುದ್ದು ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೇ ತಡರಾತ್ರಿ ವರೆಗೂ ಪ್ರಸಾದ ವಿತರಣೆ ಪರಿಶೀಲಿಸಿದ್ದಾರೆ. ತಡರಾತ್ರಿ ದಾಸೋಹದಲ್ಲಿ ಸುತ್ತಾಡಿ, ಎಲ್ಲ ಮಾಹಿತಿ ಪಡೆದಿದ್ದಾರೆ. ಅದಾದ ಬಳಿಕ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಬೆಳ್ಳಂಬೆಳಗ್ಗೆ ಜಾತ್ರೆಯಲ್ಲಿ ಸುತ್ತಾಡಿದ್ದಾರೆ. ಶೌಚಾಲಯಗಳ ಸ್ವಚ್ಛತೆ ಪರಿಶೀಲಿಸಿದ್ದಾರೆ. ಜಾತ್ರೆಯ ವಿವಿಧೆಡೆ ಸ್ವಚ್ಛತೆ ಪರಿಶೀಲಿಸಿ, ಖುದ್ದು ತಾವೂ ಸ್ವಚ್ಛ ಮಾಡುವ ಕಾರ್ಯ ಮಾಡಿದ್ದಾರೆ.

ಜನಸಾಗರ:

ಜಾತ್ರಾ ಮಹೋತ್ಸವದ ಮೂರನೇ ದಿನವೂ ಲಕ್ಷ ಲಕ್ಷ ಭಕ್ತರು ಆಗಮಿಸಿದ್ದರು. ರಥೋತ್ಸವದ ದಿನ 8-10 ಲಕ್ಷ ಭಕ್ತರು ಭಾಗವಹಿಸಿದ್ದರೆ ಮಾರನೇ ದಿನವೂ 5-6 ಲಕ್ಷ ಭಕ್ತರು ಜಾತ್ರೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತದೆ. ಹಾಗೆಯೇ ಮೂರನೇ ದಿನ 2-3 ಲಕ್ಷ ಭಕ್ತರು ಆಗಮಿಸಿ, ಕರ್ತೃ ಗದ್ದುಗೆ ದರ್ಶನ ಮಾಡಿದ್ದಾರೆ. ಒಂದೂವರೆ ಲಕ್ಷದಷ್ಟು ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ.

ಮೂರನೇ ದಿನವೂ ಎಲ್ಲಿ ನೋಡಿದರೂ ಜನವೋ ಜನ ಇರುವುದು ಕಂಡು ಬಂದಿತು. ಹಳ್ಳಿಯಿಂದ ಎತ್ತಿನ ಬಂಡಿಯಲ್ಲಿ ಬಂದವರು ಮಠದ ಆವರಣದಲ್ಲಿಯೇ ಠಿಕಾಣಿ ಹೂಡಿರುವುದು ಕಂಡು ಬಂದಿತು.