ರಾಘವೇಂದ್ರ ಶೆಟ್ಟಿ ಅಭಿಮತ ।ಆಹಾರ ಸುರಕ್ಷತೆ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಸೇವಿಸುವ ಆಹಾರಗಳಲ್ಲಿ ಕಲಬೆರಿಕೆಯ ಅಂಶ ಪತ್ತೆಯಾಗಿದ್ದು, ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತದೆ. ಸಾರ್ವಜನಿಕರು ಆಹಾರ ಖರೀದಿಸುವ ಸಂದರ್ಭದಲ್ಲಿ ಗುಣಮಟ್ಟ ಹಾಗೂ ಇನ್ನಿತರ ಅಂಶಗಳ ಬಗ್ಗೆ ಗಮನನೀಡಬೇಕಲ್ಲದೆ, ಉತ್ತಮ ಆರೋಗ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಆಹಾರ ಸುರಕ್ಷತೆ, ಗುಣಮಟ್ಟ ಹಾಗೂ ಕಲಬೆರಿಕೆ ಮುಖ್ಯಸ್ಥ ರಾಘವೇಂದ್ರಶೆಟ್ಟಿ ತಿಳಿಸಿದರು.

ಬುಧವಾರ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ, ಆಹಾರ ಸುರಕ್ಷತೆ ತರಬೇತಿ ಹಾಗೂ ಪ್ರಮಾಣಪತ್ರ ಕೇಂದ್ರ ಇವರು ಶಿವಮೊಗ್ಗ ಹಾಲು ಒಕ್ಕೂಟ ವ್ಯಾಪ್ತಿಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಿಬ್ಬಂದಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಆಹಾರ ಸೇವನೆಯಿಂದ ಮಾತ್ರ ಆರೋಗ್ಯ ಸುಧಾರಣೆ ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಹಕಾರ ಸಂಘದ ಸಿಬ್ಬಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಇಂದು ವಿಶೇಷ ತರಬೇತಿಯನ್ನು ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ದಿನನಿತ್ಯ ತಾನು ಸೇವಿಸುವ ಆಹಾರ ಬಗ್ಗೆ ಜಾಗೃತನಾಗಿರಬೇಕಿದೆ. ಗುಣಮಟ್ಟವಿಲ್ಲದ ಆಹಾರ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ದಕ್ಕೆ ಉಂಟಾಗುತ್ತದೆಯಲ್ಲದೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಗಾರ ಏರ್ಪಡಿಸಿ ನಿಮ್ಮೆಲ್ಲರನ್ನೂ ಜಾಗೃತಗೊಳಿಸಿದ್ದು ನೀವುಗಳು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸಾರ್ವಜನಿಕರನ್ನೂ ಜಾಗೃತಗೊಳಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಪ್ರೀತಿ, ಸಂತೋಷ್, ಆರೋಗ್ಯ ನಿರೀಕ್ಷಕಿ ಗೀತಾಕುಮಾರಿ, ಹಾಲು ಒಕ್ಕೂಟದ ಉಪ ವಿಭಾಗಾಧಿಕಾರಿ ಎಂ.ಪುಟ್ಟರಾಜು, ಮಾರ್ಗವಿಸ್ತಾರಣಾಧಿಕಾರಿ ಎಸ್.ನಯಾಜ್‌ಬೇಗ್, ಎಸ್.ಜಿ.ಕೃಷ್ಣಕುಮಾರ್ ಮುಂತಾದವರು ಭಾಗವಹಿಸಿದ್ದರು.