ಜುಟ್ಟನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಸೇರಿದ ಸ್ವತ್ತನ್ನು ಪಂಚಾಯಿತಿಗೆ ಬರೆದುಕೊಂಡಿದ್ದಾರೆ, ಅಧ್ಯಕ್ಷರನ್ನು ಮುಂದೆ ಬಿಟ್ಟು ದೌರ್ಜನ್ಯ ಮಾಡಿಸುತ್ತಾರೆ.
ವಕೀಲ ಮುನಿಕೃಷ್ಣ ನೇತೃತ್ವದಲ್ಲಿ ಬೆಟ್ಟೇನಹಳ್ಳಿ, ಜುಟ್ಟನಹಳ್ಳಿ ಕುಟುಂಬಗಳ ಧರಣಿ
ದೇವನಹಳ್ಳಿ: ತಾಲೂಕಿನ ಜಾಲಿಗೆ ಗ್ರಾಪಂನ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ನಿರತರಾಗಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಪಾದಿಸಿ ಬೆಟ್ಟೇನಹಳ್ಳಿ ಹಾಗೂ ಜುಟ್ಟನಹಳ್ಳಿಯ ಎರಡು ಕುಟುಂಬಗಳು ವಕೀಲರಾದ ಮುನಿಕೃಷ್ಣ ಸಹಕಾರದೊಂದಿಗೆ ಗ್ರಾಪಂ ಕಚೇರಿ ಮುಂದೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹಾಗೂ ಗಾಂಧೀಜಿ ಭಾವಚಿತ್ರ ಹಿಡಿದು ಪ್ರತಿಭಟನಾ ಧರಣಿ ನಡೆಸಿದರು.ಈ ಬಗ್ಗೆ ವಕೀಲ ಮುನಿಕೃಷ್ಣಪ್ಪ ಮಾತನಾಡಿ, ಈ ಗ್ರಾಪಂನ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮಾಡಿರುವ ಅಕ್ರಮ ಖಾತೆ, ವ್ಯಾಪಕ ಭ್ರಷ್ಟಾಚಾರ ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ, ಜುಟ್ಟನಹಳ್ಳಿ ಗ್ರಾಮದಲ್ಲಿ ಪೌತಿ ಖಾತೆಗೆ ಅರ್ಜಿ ಕೊಟ್ಟರೆ ಇವರೇ ಕುಮ್ಮಕ್ಕು ನೀಡಿ ಅದಕ್ಕೆ ಗಲಾಟೆ ಮಾಡಿಸುತ್ತಾರೆ. ಬೆಟ್ಟೇನಹಳ್ಳಿ ಗ್ರಾಮದಲ್ಲಿ ಜಯಮ್ಮ ಎಂಬುವರ ಪರವಾಗಿ ನ್ಯಾಯಾಲಯ ಆದೇಶ ಇದ್ದರೂ ಅವರಿಗೆ ಮನೆ ಕಟ್ಟಲು ತೊಂದರೆ ನೀಡುತ್ತಿದ್ದಾರೆ. ಇವರು ಸುಳ್ಳು ದಾಖಲೆ ಸೃಷ್ಟಿಸುವ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ, ಇಲ್ಲಿನ ಕೆಲ ಚುನಾಯಿತ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಇವರ ಭ್ರಷ್ಟಾಚಾರ ಮಿತಿ ಮೀರಿದೆ, ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡಿಸುತ್ತಾರೆ. ಹಾಗಾಗಿ ಇಂತಹ ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡುವ ತನಕ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು.ಜುಟ್ಟನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಸೇರಿದ ಸ್ವತ್ತನ್ನು ಪಂಚಾಯಿತಿಗೆ ಬರೆದುಕೊಂಡಿದ್ದಾರೆ, ಅಧ್ಯಕ್ಷರನ್ನು ಮುಂದೆ ಬಿಟ್ಟು ದೌರ್ಜನ್ಯ ಮಾಡಿಸುತ್ತಾರೆ, ಸಿಂಗ್ರಹಳ್ಳಿಯಲ್ಲಿಯೂ ಇಂತಹ ಹಲವು ಅಕ್ರಮ ಖಾತೆಗಳಾಗಿವೆ. ಇದಕ್ಕೆಲ್ಲ ಕಡಿವಾಣ ಹಾಕಿ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು, ಮೇಲಧಿಕಾರಿಗಳು ಇದರ ಪರಿಶೀಲನೆ ಮಾಡಿ ನಮಗೆ ನ್ಯಾಯ ಕೊಡಿಸದೆ ಹೋದರೆ ನಮ್ಮ ಧರಣಿ ಅನಿರ್ಧಿಷ್ಟಾವಧಿಗೆ ಮುಂದುವರಿಯಲಿದೆ ಎಂದರು.
ಜುಟ್ಟನಹಳ್ಳಿ ನಾಗೇಶ್, ಸುನಂದಮ್ಮ , ಶ್ರೀನಿವಾಸ್ ಬೆಟ್ಟೇನಹಳ್ಳಿ ಜಯಮ್ಮ ಮತ್ತಿತರರು ಇದ್ದರು.