ಡ್ರಗ್ಸ್ ಕೇಸ್‌ನಲ್ಲಿ ಕಾಂಗ್ರೆಸ್ ಮುಖಂಡ ಶಾಮನೂರು ವೇದಮೂರ್ತಿ ಬಂಧನವಾಗಿದ್ದು, ತಲೆಮರೆಸಿಕೊಂಡ ಉಳಿದ ಮೂವರನ್ನೂ ಬಂಧಿಸಬೇಕು. ಇಲ್ಲದಿದ್ದರೆ ಆ ಮೂವರ ಹೆಸರನ್ನು ನಾವು ಬಹಿರಂಗಪಡಿಸಿ, ಕಠಿಣ ಕ್ರಮಕ್ಕೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಜಿಲ್ಲಾ ಪೊಲೀಸ್ ಇಲಾಖೆಗೆ ಎಚ್ಚರಿಸಿದ್ದಾರೆ.
- ತಲೆಮರೆಸಿಕೊಂಡವರ ಮೂವರ ಶೀಘ್ರ ಬಂಧಿಸದಿದ್ದರೆ, ನಾವೇ ಹೆಸರು ಬಹಿರಂತಪಡಿಸಿ ಹೋರಾಟ: ಯಶವಂತ ರಾವ್ ಎಚ್ಚರಿಕೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಡ್ರಗ್ಸ್ ಕೇಸ್‌ನಲ್ಲಿ ಕಾಂಗ್ರೆಸ್ ಮುಖಂಡ ಶಾಮನೂರು ವೇದಮೂರ್ತಿ ಬಂಧನವಾಗಿದ್ದು, ತಲೆಮರೆಸಿಕೊಂಡ ಉಳಿದ ಮೂವರನ್ನೂ ಬಂಧಿಸಬೇಕು. ಇಲ್ಲದಿದ್ದರೆ ಆ ಮೂವರ ಹೆಸರನ್ನು ನಾವು ಬಹಿರಂಗಪಡಿಸಿ, ಕಠಿಣ ಕ್ರಮಕ್ಕೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಜಿಲ್ಲಾ ಪೊಲೀಸ್ ಇಲಾಖೆಗೆ ಎಚ್ಚರಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಕೇಸ್‌ನಲ್ಲಿ ಡಿ.22ರಂದು ಮಧ್ಯಾಹ್ನ ಕಾಂಗ್ರೆಸ್‌ನ ಶಾಮನೂರು ವೇದಮೂರ್ತಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ. ಬಂಧಿತನ ವಿರುದ್ಧ ಸಣ್ಣಪುಟ್ಟ ಕೇಸ್ ಹಾಕುವಂತೆ, ಬಿಡುವಂತೆ ಒತ್ತಡ ಬಂದರೂ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಕಿವಿಗೊಡದೇ ಕೇಸ್ ಜಡಿದಿರುವ ಕ್ರಮ ಸ್ವಾಗತಿಸುತ್ತೇವೆ. ಅದೇ ರೀತಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಪಟಾಲಂ ಈಗ ಮಾತಾಡಲಿ:
ಪ್ರತಿಸಲ ನಮ್ಮ ಮೇಲೆ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಬಿಜೆಪಿಯವರ ಮೇಲೆ ಕಾಂಗ್ರೆಸ್ ಪಟಾಲಂ ಮಿಥ್ಯಾರೋಪ, ಗುರುತರ ಆರೋಪ ಮಾಡುತ್ತಿತ್ತು. ಆದರೆ, ಯಾವುದೇ ಆರೋಪಕ್ಕೂ ಸಾಕ್ಷ್ಯ, ದಾಖಲೆ ನೀಡುತ್ತಿರಲಿಲ್ಲ. ನಮ್ಮ ಮೇಲೆ ಯಾವುದೇ ಒಂದೇ ಒಂದು ಕೇಸ್ ಇದ್ದರೆ ಎಫ್ಐಆರ್ ಸಮೇತ ತೋರಿಸಲಿ. ಇದೀಗ ಅದೇ ಕಾಂಗ್ರೆಸ್ ಪಕ್ಷದ ಶಾಮನೂರು ವೇದ ಡ್ರಗ್ಸ್ ಕೇಸ್‌ನಲ್ಲಿ ₹1 ಲಕ್ಷ ನಗದು, ₹10 ಲಕ್ಷ ಮೌಲ್ಯದ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿರುವ ಬಗ್ಗೆಯೂ ಕಾಂಗ್ರೆಸ್ ಪಟಾಲಂ ಮಾತನಾಡಲಿ ಎಂದು ಕುಟುಕಿದರು.ಎಸ್‌ಎಸ್‌ಎಂ ರಾಜಿನಾಮೆ ನೀಡಲಿ:
ನಮ್ಮ ಮೇಲೆ ಎಲ್ಲಿಲ್ಲದ ಆರೋಪ ಮಾಡದ್ದ ಸಚಿವ ಎಸ್.ಎಸ್ .ಮಲ್ಲಿಕಾರ್ಜುನ ತಮ್ಮದೇ ಬೆಂಬಲಿಗ ಡ್ರಗ್ಸ್ ಕೇಸ್‌ನಲ್ಲಿ ಬಂಧಿತನಾದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಲ್ಲಿಕಾರ್ಜುನ ಅವರ ಬಲಗೈ ಭಂಟನೆಂದೇ ಶಾಮನೂರು ವೇದ ಗುರುತಿಸಿಕೊಂಡಿದ್ದು, 1997ರ ಉಪ ಚುನಾವಣೆ ವೇಳೆ ಹಳೆ ಎಂಇಎಸ್ ಶಾಲೆಯಲ್ಲಿ ಕಳ್ಳ ಮತದಾನ ಮಾಡುತ್ತಿದ್ದಂತಹ ವೇಳೆ ನಾವೇ ತಡೆದು, ಬುದ್ಧಿ ಹೇಳಿದ್ದೆವು. ಅಲ್ಲದೇ, ಅದೇ ವೇದನಿಗೆ ಅಂದು ನಾನು ಹೊಡೆದಿದ್ದೇನೆ. ರೌಡಿಸಂ, ಕಳ್ಳದಂಧೆಕೋರರು, ಅನ್ನಭಾಗ್ಯ ಅಕ್ಕಿ ಕಾಳಸಂತೆಕೋರರು, ಇಸ್ಪೀಟ್ ಆಡಿಸೋರಿಗೆ ಕಾಂಗ್ರೆಸ್ ಸಚಿವರೇ ಆಶ್ರಯದಾತ ಎಂದು ಆರೋಪಿಸಿದರು.ಓದುವ ಮಕ್ಕಳಿಗೆ, ವಿದ್ಯಾರ್ಥಿ, ಯುವಜನರಿಗೆ ಮಾದಕ ವಸ್ತುಗಳಾದ ಗಾಂಜಾ, ಡ್ರಗ್ಸ್ ಪೂರೈಸುವ ಜಾಲದ ಹಿಂದೆ ಯಾರೆಲ್ಲಾ ಇದ್ದಾರೆ, ದಂಧೆಯ ಆಳ, ಅಗಲ ಏನೆಂಬ ಬಗ್ಗೆ ಎಸ್‌ಪಿ ಅವರು ಸಮಗ್ರ ತನಿಖೆ ಕೈಗೊಳ್ಳಬೇಕು. ಶಾಬನೂರಿನ ಅಗರ್ಭ ಶ್ರೀಮಂತ ಎಂದು ಬೀಗುತ್ತಿದ್ದ ವೇದ ಇದೇ ರೀತಿ ಡ್ರಗ್ಸ್ ದಂಧೆಯಿಂದಲೇ ಶ್ರೀಮಂತ ಆಗಿರಬೇಕು. ಯಾವುದೇ ಕಾರಣಕ್ಕೂ ವೇದ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಎಸ್‌ಪಿ ಗಮನಹರಿಸಲಿ ಎಂದು ಅವರು ತಿಳಿಸಿದರು.
ಎಸ್‌ಪಿಗೆ ಪೋನ್‌ನಲ್ಲಿ ಒತ್ತಡ ತನಿಖೆಯಾಗಬೇಕು:2 ತಿಂಗಳ ಹಿಂದೆಯೇ ಸಣ್ಣದಾಗಿ ಡ್ರಗ್ಸ್ ಪ್ರಕರಣ ಬಯಲಿಗೆ ಬಂದರೂ, ತಕ್ಷಣವೇ ಮುಚ್ಚಿ ಹೋಗಿತ್ತು. ಯಾವುದೇ ಕಾರಣಕ್ಕೂ ಈಗ ಬಂಧಿತನಾದ ಶಾಮನೂರು ವೇದನ ಮೇಲೆ ಕಾಯ್ದೆಗಳ ಸಂಖ್ಯೆ ಕಡಿಮೆ ಆಗಬಾರದು. ಇಂತಹವರು ಕಾಯಂ ಆಗಿ ಜೈಲು ಪಾಲಾಗಬೇಕು. ಅನಾರೋಗ್ಯ ಸಮಸ್ಯೆಯೆಂದು ವೇದ ಆಸ್ಪತ್ರೆಗೆ ದಾಖಲಾಗಿದ್ದಾನೆಂಬ ಮಾಹಿತಿ ಇದ್ದು, ಇಂತಹದ್ದಕ್ಕೆಲ್ಲಾ ಇಲಾಖೆ ಆಸ್ಪದ ನೀಡಬಾರದು. ಡಿ.22ರಂದು ಆರೋಪಿಗಳ ಬಂಧನದಿಂದ ಅಂದು ರಾತ್ರಿವರೆಗೆ ಎಸ್‌ಪಿ ಉಮಾ ಪ್ರಶಾಂತ ಅವರಿಗೆ ಯಾರಿಂದೆಲ್ಲಾ ಫೋನ್ ಕರೆ ಹೋಗಿವೆ, ಏನೆಲ್ಲಾ ಒತ್ತಡ ಹೇರಿದ್ದರು ಎಂಬ ಬಗ್ಗೆಯೂ ತನಿಖೆ ಆಗಬೇಕು ಎಂದು ಯಶವಂತ ರಾವ್, ಎಫ್ಐಆರ್ ದಾಖಲಿಸುವ ವೇಳೆ ವೇದನ ಬಗ್ಗೆ ಮೆದು ಧೋರಣೆ ತೋರಿದರೆ ಬೀದಿಗಿಳಿದು ಹೋರಾಡುತ್ತೇವೆ ಎಂದರು.
ಬಿಜೆಪಿ ಹಿರಿಯ ಮುಖಂಡ ಅಣಬೇರು ಜೀವನಮೂರ್ತಿ, ಶಿವನಗೌಡ ಪಾಟೀಲ, ರಾಜು ನೀಲಗುಂದ, ಟಿಂಕರ್ ಮಂಜಣ್ಣ, ಬಾಲಚಂದ್ರ ಶ್ರೇಷ್ಠಿ, ಶಿವಾನಂದ, ಕಿಶೋರಕುಮಾರ, ಸೋಗಿ ಗುರುಶಾಂತ ಇತರರು ಇದ್ದರು.- - -
(ಕೋಟ್) ವೇದನ ಮನೆಗೆ ಸಚಿವರು ಹೋದರೆ ಬೆಳ್ಳಿತಟ್ಟೆಯಲ್ಲೇ ಊಟ, ಬೆಳ್ಳಿಲೋಟದಲ್ಲೇ ನೀರು ಕುಡಿಯುತ್ತಿದ್ದವರು ಕಾಂಗ್ರೆಸ್ ನಾಯಕರು. ಸಚಿವರ ಬಲಗೈಭಂಟ ಶಾಮನೂರು ವೇದನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರೌಡಿಸಂ, ಕಳ್ಳದಂಧೆ ಮಾಡುವವರಿಗೆ ಸಚಿವರೇ ಪಿತಾಮಹ. ಈ ಹಿಂದೆ ವನ್ಯಜೀವಿ ಕೇಸ್ ಮುಚ್ಚಿ ಹೋದಂತೆ ಈಗಿನ ಡ್ರಗ್ಸ್ ಕೇಸ್ ಆಗಬಾರದು. ಸಚಿವರ ಮನೆಯಿಂದಲೇ ತನಿಖೆ ಆಗಬೇಕು.- ಯಶವಂತ ರಾವ್ ಜಾಧವ್, ಬಿಜೆಪಿ ಮುಖಂಡ.
- - --24ಕೆಡಿವಿಜಿ4: ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.