ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರ ಸೇರಿದಂತೆ ಬಳ್ಳಾರಿ ತಾಲೂಕಿನ ವಿವಿಧೆಡೆ ಸೋಮವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಮಳೆಗೆ ಹತ್ತಾರು ಮರಗಳು ನೆಲಕ್ಕುರುಳಿವೆ. ನಗರದ ರೇಡಿಯೋ ಪಾರ್ಕ್‌ನ ಮನೆಯೊಂದಕ್ಕೆ ಹಾನಿಯಾಗಿದೆ.ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಯಿಂದ ಇಲ್ಲಿನ ರೇಣುಕಾ ಕಾಲನಿ, ಹನುಮಾನ ನಗರ, ಡಾ. ಬಿ.ಆರ್. ಅಂಬೇಡ್ಕರ್ ನಗರ, ಕೊರಚರ ಬೀದಿ ಜಲಾವೃತಗೊಂಡವು. ಈ ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಜನ ಸಂಚಾರಕ್ಕೆ ಅಡ್ಡಿಯಾಯಿತು. ಜಿಲ್ಲಾ ಕ್ರೀಡಾಂಗಣ ಬಳಿಯ ರೇಲ್ವೆ ಸೇತುವೆಯಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ಬೆಳಗ್ಗೆ 10 ಗಂಟೆ ವರೆಗೆ ವಾಹನ ಸವಾರರಿಗೆ ಸಮಸ್ಯೆಯಾಯಿತು. ಬಳಿಕ ನೀರು ಹೊರಗಡೆ ಹಾಕುವ ಕಾರ್ಯ ನಡೆಯಿತು. ಸತತವಾಗಿ ಸುರಿದ ಮಳೆ-ಗಾಳಿಗೆ ನಗರದ ಇಂದಿರಾನಗರ, ರೇಡಿಯೋಪಾರ್ಕ್, ಕೌಲ್‌ಬಜಾರ್, ಹನುಮಾನ ನಗರ ಪ್ರದೇಶಗಳಲ್ಲಿ ಮರಗಳು ಬಿದ್ದಿದ್ದು ಯಾವುದೇ ಹಾನಿಯಾಗಿಲ್ಲ. ಅಲ್ಲಲ್ಲಿ ವಿದ್ಯುತ್ ಕಂಬಗಳು ಬಾಗಿದ್ದು ಜೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು.
ಸೋಮವಾರ ರಾತ್ರಿ ಸುರಿದ ಮಳೆ-ಗಾಳಿಯಿಂದ ಸುಮಾರು 20ಕ್ಕೂ ಹೆಚ್ಚು ಮರಗಳು ಹಾಗೂ 10 ಬಳ್ಳಾರಿ ತಾಲೂಕಿನ ಶಿವಪುರ, ಸಂಗನಕಲ್ಲು, ಶ್ರೀಧರಗಡ್ಡೆ, ಕೊಳಗಲ್ಲು, ಹೊಸ ಮೋಕಾ, ಹೊಣೆನೂರು, ಗೋಟೂರು, ಸೋಮಸಮುದ್ರ, ಕೊರ್ಲಗುಂದಿ ಗ್ರಾಮಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ಉಳಿದೆಡೆ ಸಾಧಾರಣ ಮಳೆಯಾಗಿದೆ. ಸಿರುಗುಪ್ಪ, ಕಂಪ್ಲಿ ಹಾಗೂ ಕುರುಗೋಡಿನಲ್ಲಿ ಮಳೆಯಾಗಿಲ್ಲ. ಬಳ್ಳಾರಿ ನಗರ ಹಾಗೂ ತಾಲೂಕಿನಲ್ಲಿ 9.4 ಮಿ.ಮೀಟರ್ ಮಳೆಯಾಗಿದ್ದು, ಕುರುಗೋಡು 0.4 ಮಿ.ಮೀಟರ್, ಸಿರುಗುಪ್ಪ 0.1 ಮಿ.ಮೀಟರ್, ಸಂಡೂರು 2.06 ಮಿ.ಮೀಟರ್ ಹಾಗೂ ಕಂಪ್ಲಿ ತಾಲೂಕಿನಲ್ಲಿ 0.5 ಮಿ.ಮೀಟರ್ ಮಳೆಯಾಗಿದೆ ಹವಾಮಾನ ಇಲಾಖೆ ತಿಳಿಸಿದೆ.ಮಳೆಯಿಂದ ತಂಪಾಯಿತು ಬಿಸಿಲೂರು:
ಬಿಸಿಲಿನಿಂದ ಕಂಗೆಟ್ಟಿದ್ದ ಬಳ್ಳಾರಿಗರಿಗೆ ಸೋಮವಾರ ರಾತ್ರಿ ಸುರಿದ ಮಳೆ ತಂಪೆರೆದಿದೆ.ಕಳೆದ ವಾರದಿಂದ ಬಿಸಿಲಿನ ಪ್ರಖರತೆ ಹೆಚ್ಚಾಗಿತ್ತು. ಹೀಗಾಗಿ ಜನರು ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದರು. ಬಿಸಿಲಿನಿಂದ ಪಾರಾಗಲು ಜನರು ಹೊರಗಡೆ ಓಡಾಟ ಕಡಿಮೆ ಮಾಡಿದ್ದರು. ಸೋಮವಾರ ರಾತ್ರಿ ಸುರಿದ ಮಳೆಯಿಂದ ಜನರು ಸಂತಸಗೊಂಡಿದ್ದಾರೆ.
ಮಂಗಳವಾರ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿತ್ತು.