ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ

| Published : May 13 2025, 11:55 PM IST

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ರೋಗಿಗಳ ಆರೋಗ್ಯವನ್ನು ವಿಚಾರಿಸಿ ಕುಶಲೋಪರಿ ವಿಚಾರಿಸಿದರು. ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಆಸ್ಪತ್ರೆಯು ಸ್ವಚ್ಛತೆ ಇಲ್ಲದೇ ಅವ್ಯವಸ್ಥೆಗಳ ಆಗರವಾಗಿರುವುದನ್ನು ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಮಾಹಿತಿ ಇದ್ದರೂ ಸ್ವಚ್ಛತೆ ಮಾಡಿಲ್ಲ:

ಕಳೆದ ಆರು ತಿಂಗಳ ಹಿಂದೆಯೇ ಆಸ್ಪತ್ರೆಗೆ ಬರಬೇಕೆಂದು ಪ್ರವಾಸ ನಿಗದಿ ಮಾಡಿ ಕಾರಣಾಂತರಗಳಿಂದ ಅಂದು ಬರಲು ಆಗಲಿಲ್ಲ, ಇವತ್ತು ನಾನು ಆಸ್ಪತ್ರೆಗೆ ಬರುತ್ತೇನೆ ಎಂದು ಮಾಹಿತಿ ಇದ್ದರೂ ಆಸ್ಪತ್ರೆಯನ್ನು ಸ್ವಚ್ಛತೆಯಿಂದ ಇಟ್ಟುಕೊಂಡಿಲ್ಲ, ಇದೇನಾ ನಿಮ್ಮ ಕಾರ್ಯ ವೈಖರಿ ಎಂದು ಸಿಬ್ಬಂದಿಯ ವಿರುದ್ಧ ಗರಂ ಆದರು.

ಹೆರಿಗೆ ಕೊಠಡಿ ಅವ್ಯವಸ್ಥೆ ಕಂಡು ಆಕ್ರೋಶ:

ಬಾಣಂತಿಯರಿಗೆ ಹೆರಿಗೆ ಮಾಡುವ ಸೌಲಭ್ಯಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು, ಹೆರಿಗೆ ಕೊಠಡಿ ವೀಕ್ಷಿಸಿ ಇದೇನು ಹೆರಿಗೆ ಕೊಠಡಿಯೋ ಅಥವಾ ಸ್ಟೋರ್ ರೂಮೋ ಎಂದು ಪ್ರಶ್ನಿಸಿ, ಕೊಳೆಯಾದ ಬೆಡ್ ಶೀಟ್, ಫ್ಯಾನ್ ಮೇಲಿನ ಧೂಳು, ಮೂಲೆಯಲ್ಲಿ ಬಿದ್ದಿದ್ದ ಕಸವನ್ನು ಕಂಡು ಇಲ್ಲಿ ಹೆರಿಗೆಗೆ ಬರುವ ಬಾಣಂತಿಯರ ಆರೋಗ್ಯವನ್ನು ನೀವೇ ಹಾಳು ಮಾಡಿ ಅವರನ್ನು ರೋಗಿಗಳನ್ನಾಗಿಸುತ್ತಿದ್ದೀರಾ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯಲ್ಲಿ ವೈದ್ಯರಿಲ್ಲ:

ದಾಬಸ್‍ಪೇಟೆಯು ದೊಡ್ಡ ಪಟ್ಟಣವಾಗಿ ಬೆಳೆಯುತ್ತಿದೆ. ಆದರೆ, ಈ ಆಸ್ಪತ್ರೆಗೆ ಕಾಯಂ ವೈದ್ಯರಿಲ್ಲ, ಪ್ರತಿನಿತ್ಯ ಬದಲಾಗುತ್ತಿರುತ್ತಾರೆ. ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಕಾಯಂ ವೈದ್ಯರು, ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಸಾರ್ವಜನಿಕರು ಅಧ್ಯಕ್ಷರ ಗಮನಕ್ಕೆ ತಂದರು.

ವೈದ್ಯರ ವಿರುದ್ಧ ಸಾಲು ಸಾಲು ಆರೋಪ:

ಆಸ್ಪತ್ರೆಯಲ್ಲಿ ಕೆಲಸ ಮಾಡಲು ನೇಮಕವಾಗಿರುವ ವೈದ್ಯರೊಬ್ಬರು ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಬಳಿ ಹಣ ಕೇಳುತ್ತಾರೆ. ಔಷಧಿಗಳಿದ್ದರೂ ಹೊರಗಡೆಯಿಂದ ತರುವಂತೆ ಚೀಟಿ ಬರೆದು ಕೊಡುತ್ತಾರೆ. ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ, ಏನಾದರೂ ಪ್ರಶ್ನಿಸಿದರೆ ರೋಗಿಗಳನ್ನೇ ಬೈಯುತ್ತಾರೆ. ಯಾರಾದರೂ ಪ್ರಮಾಣ ಪತ್ರಗಳಿಗೆ ಗೆಜೆಟೆಡ್ ಸಹಿ ಪಡೆಯಲು ಬಂದರೆ ಅವರ ಬಳಿಯೇ ಹಣ ಕೇಳುತ್ತಾರೆ. ಹಲವು ಬಾರಿ ಬಾಣಂತಿಯರಿಗೆ ಹೆರಿಗೆ ಮಾಡಲು ವಿಳಂಬ ಮಾಡಿದ್ದಾರೆ ಎಂದು ವೈದ್ಯರ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಸ್ಥಳೀಯರು ಅಂತಹ ವೈದ್ಯರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ರೋಗಿಗಳ ಕುಶಲೋಪರಿ ವಿಚಾರಣೆ:

ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ರೋಗಿಗಳ ಆರೋಗ್ಯವನ್ನು ವಿಚಾರಿಸಿ ಕುಶಲೋಪರಿ ವಿಚಾರಿಸಿದರು. ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಹೇಮಾ, ಸ್ತ್ರೀಶಕ್ತಿ ಒಕ್ಕೂಟ ಜಿಲ್ಲಾಧ್ಯಕ್ಷೆ ವೇದಾವತಿ, ಅಂಗನವಾಡಿ ಶಿಕ್ಷಕಿ ವಿದ್ಯಾವತಿ, ವೈದ್ಯರಾದ ಡಾ.ರಮೇಶ್ ಮತ್ತಿತರರಿದ್ದರು.