ಬುದ್ಧ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಪಾಲನೆ ಮಾಡಿ: ದರ್ಶನ್ ಬಿ.ಸೋಮಶೇಖರ್

| Published : May 13 2025, 11:55 PM IST

ಬುದ್ಧ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಪಾಲನೆ ಮಾಡಿ: ದರ್ಶನ್ ಬಿ.ಸೋಮಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಭಗವಾನ್ ಬುದ್ಧರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳ ಅಳವಡಿಕೆ ಮೂಲಕ ಯುವ ಪೀಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಬುದ್ಧರ ಪಂಚಶೀಲ ತತ್ವಗಳ ಪಾಲನೆ ಜೀವನಕ್ಕೆ ದಾರಿದೀಪವಾಗಿವೆ. ಜಗತ್ತಿನಲ್ಲಿ ಶಾಂತಿ ಸಂದೇಶಕ್ಕೆ ಬುದ್ಧಾನುಕರಣೆಯೇ ಶಾಶ್ವತ ಮಾರ್ಗವಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿಶ್ವಕ್ಕೆ ಜ್ಞಾನದ ಸಂದೇಶ ಕೊಟ್ಟ ಬುದ್ಧ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಪಾಲನೆ ಮಾಡಬೇಕು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ತಿಳಿಸಿದರು.

ತಾಲೂಕಿನ ಬಾಚನಹಳ್ಳಿ ಬಳಿ ಭಗವಾನ್ ಬುದ್ಧರ ಪುತ್ಥಳಿ ಬಳಿಯ ಮಿಲಿಂದ ಬುದ್ಧ ವಿಹಾರ ಕೇಂದ್ರದ ಆವರಣದಲ್ಲಿ ನಡೆದ ವೈಶಾಖ ಬುದ್ಧಪೂರ್ಣಿಮೆ ಸಂಭ್ರಮಾಚರಣೆ ಹಾಗೂ ಬುದ್ಧ ಧಮ್ಮ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಜಗತ್ತಿನಲ್ಲಿ ಶಾಂತಿ ಸಂದೇಶ ಸಾರಲು ಬುದ್ಧಾನುಕರಣೆಯೇ ಶಾಶ್ವತ ಮಾರ್ಗ. ಹಾಗಾಗಿ ನಮ್ಮ ಮಕ್ಕಳಿಗೆ ಬುದ್ಧರ ಸಂದೇಶ ತಿಳಿಸಬೇಕು. ಮನಸ್ಸು, ಮನೆ ಶುದ್ಧವಾಗಿಟ್ಟುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದು ಸಲಹೆ ನೀಡಿದರು.

ಭಗವಾನ್ ಬುದ್ಧರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳ ಅಳವಡಿಕೆ ಮೂಲಕ ಯುವ ಪೀಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಬುದ್ಧರ ಪಂಚಶೀಲ ತತ್ವಗಳ ಪಾಲನೆ ಜೀವನಕ್ಕೆ ದಾರಿದೀಪವಾಗಿವೆ. ಜಗತ್ತಿನಲ್ಲಿ ಶಾಂತಿ ಸಂದೇಶಕ್ಕೆ ಬುದ್ಧಾನುಕರಣೆಯೇ ಶಾಶ್ವತ ಮಾರ್ಗವಾಗಿದೆ ಎಂದರು.

ಮಕ್ಕಳಿಗೆ ಪೋಷಕರು ಒಳ್ಳೆಯ ಸಂಸ್ಕಾರ ನೀಡಬೇಕು. ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ತತ್ವಾದರ್ಶಗಳನ್ನು ಪಾಲನೆ ಮಾಡುವಂತೆ ಅವರಲ್ಲಿ ಜ್ಞಾನ ಬೆಳೆಸಬೇಕು. ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು, ಉತ್ತಮ ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕು. ಬುದ್ಧರ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳು ಯುವ ಜನತೆಗೆ ತಿಳಿಸಿ ಜಾಗೃತಿ ಮೂಡಿಸುವ ಇಂಥ ವಿಚಾರ ಸಂಕಿರಣವನ್ನು ಆಯೋಜಿಸಲಾಗುತ್ತಿದೆ ಎಂದರು.

ಭಾರತದಲ್ಲಿ ಬುದ್ಧ ಧಮ್ಮದ ಉನ್ನತಿ ಮತ್ತು ಅವನತಿ ಕುರಿತು ನಿವೃತ್ತ ಪ್ರಾಂಶುಪಾಲ ಬೆಳಕವಾಡಿ ಪ್ರೊ.ರಂಗಸ್ವಾಮಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಬುದ್ಧ ಭಾರತವನ್ನು ಪ್ರತಿಷ್ಠಾಪಿಸಲು ನಮಗೇಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ ಎಂಬ ವಿಷಯದ ಬಗ್ಗೆ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸುನಿಲ್ ಕುಮಾರ್ ವಿಷಯ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಾರ್ಕಾಲು ನಟರಾಜು, ತಾಲೂಕು ಘಟಕದ ಅಧ್ಯಕ್ಷ ವಕೀಲ ಮೋಹನ್ ಕುಮಾರ್, ನಿವೃತ್ತ ವಿಜ್ಞಾನಿ ಚನ್ನಕೇಶವ ಇದ್ದರು.