ಪಟ್ಟಣದ ಗುಬ್ಬಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.
ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ಗುಬ್ಬಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಪೂಜೆಯೊಂದಿಗೆ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿದ ನಂತರ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಳವಾದ್ಯದೊಂದಿಗೆ, ಮಂತ್ರ ಘೋಷದೊಂದಿಗೆ ಹಾಗೂ ನಂದಿ ಧ್ವಜದೊಂದಿಗೆ ಮೆರವಣಿಗೆ ಮೂಲಕ ಸ್ವಾಮಿಯನ್ನು ಕರೆತಂದು ಪುಷ್ಪಗಳಿಂದ ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ. ರಥದಲ್ಲಿ ಪ್ರತಿಷ್ಠಾಪಿಸಿ ಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ಬಗೆ ಬಗೆ ಹೂವಿನಿಂದಲೂ ಅಲಂಕರಿಸಿ ಮಹಾ ಮಂಗಳಾರತಿ ನಂತರ ರಥೋತ್ಸವಕ್ಕೆ ಭಕ್ತಾದಿಗಳಿಂದ ಚಾಲನೆ ನೀಡಲಾಯಿತು. ರಥೋತ್ಸವ ಶುರುವಾಗುತ್ತಿದ್ದಂತೆ ಭಕ್ತಾದಿಗಳು ಬಾಳೆಹಣ್ಣು, ದವನ ಸ್ವಾಮಿಗೆ ಇಷ್ಟವಾದ ಪದಾರ್ಥಗಳನ್ನು ಅರ್ಪಿಸುವ ಮೂಲಕ ತಮ್ಮ ಹರಿಕೆಯನ್ನು ತೀರಿಸಿದರು.ರಥೋತ್ಸವಕ್ಕೆ ಬಂದ ಭಕ್ತಾದಿಗಳಿಗೆ ಸಂಘ ಸಂಸ್ಥೆಗಳಿಂದ ಹೆಸರುಬೇಳೆ, ಪಾನಕ, ಮಜ್ಜಿಗೆ, ಕೇಸರಿಬಾತು, ಪಲಾವು, ಟಮಟೋಬಾತು, ತುಪ್ಪದಿಂದ ಮಾಡಿದ ಮೈಸೂರುಪಾಕು, ಜಿಲೇಬಿ, ಬಾದುಷಾ, ಪಾಯಸ, ಇನ್ನು ಅನೇಕ ಸಿಹಿ ಪದಾರ್ಥಗಳನ್ನು ಭಕ್ತಾದಿಗಳಿಗೆ ನೀಡಲಾಯಿತು.ರಥೋತ್ಸವಕ್ಕೆ ಬಂದ ಎಲ್ಲಾ ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ, ಅಪಾರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ತಹಸೀಲ್ದಾರ್ ಆರತಿ.ಬಿ., ಪೇಷ್ಕಾರ್ ಜಿ.ವಿನೋದ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ತೆವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ತೋರೆಮಠದ ಅಟವಿ ಚನ್ನಬಸವ ಸ್ವಾಮೀಜಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಣ್ಣ, ದಾಸೋಹ ಸಮಿತಿ, ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು ಹಾಗೂ 18 ಕೋಮಿನ ಮುಖಂಡರು, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಪಟ್ಟಣ,ತಾಲೂಕು ಹಾಗೂ ಜಿಲ್ಲೆಗಳಿಂದ ಭಾಗವಹಿಸಿದ್ದರು.