ಕಳೆದ 16 ರಂದು ಬಾಗೇಪಲ್ಲಿಯ ಕಾಂಗ್ರೆಸ್ ವಿಜಯಿ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿಯವರ ಶಾಸಕ ಸ್ಥಾನ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಿತ್ತು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಪ್ರಕರಣವು ಫೆ. 27 ರ ಶುಕ್ರವಾರದಂದು ದೆಹಲಿಯ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಅರ್ಜಿ ವಿಚಾರಣೆ ನಡೆಸುವ ಸಿಜೆಐ ಸೂರ್ಯಕಾಂತ್ ಅವರು ಅರ್ಜಿಯ ಸ್ವೀಕಾರ ಅಥವಾ ವಜಾಗೊಳಿಸಿ ರಾಜ್ಯ ಹೈಕೋರ್ಟ್ ತೀರ್ಪು ಎತ್ತಿ ಹಿಡಿಯುತ್ತಾ ಎಂದು ಕಾದು ನೋಡಬೇಕಿದೆ.ಕಳೆದ 16 ರಂದು ಬಾಗೇಪಲ್ಲಿಯ ಕಾಂಗ್ರೆಸ್ ವಿಜಯಿ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿಯವರ ಶಾಸಕ ಸ್ಥಾನ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಿತ್ತು.
2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಿಜೆಪಿಯ ಸಿ.ಮುನಿರಾಜು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಹೈಕೋರ್ಟ್ ಪೀಠ, ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಆದೇಶಿಸಿತ್ತು. ಇನ್ನು ಅಸಿಂಧುಗೊಳಿಸಿದ ಆದೇಶವನ್ನು ಕೋರ್ಟ್, ಚುನಾವಣಾ ಆಯೋಗ ಹಾಗೂ ವಿಧಾನಸಭೆ ಕಾರ್ಯದರ್ಶಿಗೂ ರವಾನಿಸಿತ್ತು. ಚುನಾವಣೆಯಲ್ಲಿ ಎಸ್.ಎನ್. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷದಿಂದ ಕೂಡಿದೆ. ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು ಕೋರ್ಟ್ ಮೆಟ್ಟಿಲೇರಿದ್ದರು.ಇನ್ನೊಂದೆಡೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಹ ತಮ್ಮ ಅರ್ಜಿ ವಜಾ ಮಾಡಬೇಕೆಂದು ಮನವಿ ಮಾಡಿದ್ದರು. ಚುನಾವಣಾ ತಕರಾರು ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಅದನ್ನು ವಜಾಗೊಳಿಸಬೇಕೆಂದು ಎಸ್.ಎನ್.ಸುಬ್ಬಾರೆಡ್ಡಿ ಮನವಿ ಮಾಡಿದ್ದರು. ಎರಡು ಕಡೆಯ ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್, ಎಸ್.ಎನ್.ಸುಬ್ಬಾರೆಡ್ಡಿ ಅರ್ಜಿಯನ್ನು ವಜಾ ಮಾಡಿತ್ತು. ಇದೀಗ ಫೆ. 16ರಂದು ಕೋರ್ಟ್ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿ, ಎದುರಾಳಿ ಅಭ್ಯರ್ಥಿಯಾಗಿದ್ದ ಸಿ.ಮುನಿರಾಜು ವಿಜಯಿ ಎಂದು ಘೋಷಿಸಲು ಹೈಕೋರ್ಟ್ ನಿರಾಕರಿಸಿತ್ತು.
ಅಸಿಂಧು ಆದೇಶಕ್ಕೆ ಮಧ್ಯಂತರ ತಡೆಮೇಲ್ಮನವಿ ಸಲ್ಲಿಕೆವರೆಗೆ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಲು ಎಸ್.ಎನ್.ಸುಬ್ಬಾರೆಡ್ಡಿ ಪರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ಮನವಿ ಮಾಡಿದ್ದರು. ಆದರೆ, ಈ ಮನವಿಗೆ ಅರ್ಜಿದಾರರ ಪರ ಹಿರಿಯ ವಕೀಲೆ ನಳಿನಾ ಮಾಯಗೌಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಕೋರ್ಟ್ ಅಸಿಂಧು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಹೀಗಾಗಿ ಸುಬ್ಬಾರೆಡ್ಡಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದ್ದು, ಸುಪ್ರೀಂ ಕೋರ್ಟ್ ಮೊರೆ ಹೋಗಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲಾಗಿತ್ತು. ಹೈಕೋರ್ಟ್ ತೀರ್ಪನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದರು. ಸುಪ್ರೀಂಕೋರ್ಟ್ ಯಾವ ತೀರ್ಪು ನೀಡುತ್ತೆ ಎನ್ನುವುದೇ ಕುತೂಹಲ ಮೂಡಿಸಿದೆ.
ಪ್ರಕರಣದ ವಿವರ:2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಎಸ್.ಎನ್. ಸುಬ್ಬಾರೆಡ್ಡಿ ಗೆಲುವು ಸಾಧಿಸಿದ್ದರು. ಆದರೆ, ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲುಕಂಡಿದ್ದ ಸಿ. ಮುನಿರಾಜು ಅವರು ಎಸ್.ಎನ್. ಸುಬ್ಬಾರೆಡ್ಡಿ ನಾಮಪತ್ರ ಕ್ರಮವಾಗಿಲ್ಲ. ಚುನಾವಣೆಯಲ್ಲಿ ಎಸ್.ಎನ್. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷದಿಂದ ಕೂಡಿದೆ. ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಜತೆಗೆ ಆಸ್ತಿಗಳ ತೆರಿಗೆ ಪಾವತಿ ಬಾಕಿ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ. ಹಾಗಾಗಿ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕೆಂದು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಇನ್ನೊಂದೆಡೆ ಆ ಅರ್ಜಿಯನ್ನು ವಜಾಗೊಳಿಸಲು ಎಸ್.ಎನ್. ಸುಬ್ಬಾರೆಡ್ಡಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್, ಅಂತಿಮವಾಗಿ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ್ದು, ಕಾನೂನು ಹೋರಾಟದದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜುಗೆ ಗೆಲುವು ಸಿಕ್ಕಿದೆ.
ಆದರೆ ಸಿ.ಮುನಿರಾಜು ಅವರು ವಿಜಯಿ ಎಂದು ಘೋಷಿಸಲು ಮನವಿ ಮಾಡಿದ್ದರು. ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಚುನಾವಣಾ ಆಯೋಗಕ್ಕೆ ಮರುಚುನಾವಣೆ ಮಾಡುವ ಅಧಿಕಾರ ಇದೆ ಎಂದು ಇದೇ ವೇಳೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು. ಈಗ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಿಂಧು ಅಥವಾ ಅಸಿಂಧು ಚಂಡು ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ನ್ಯಾಯಮೂರ್ತಿಗಳು ಶುಕ್ರವಾರ ನೀಡುವ ತೀರ್ಪಿನ ಮೇಲೆ ಎಸ್.ಎನ್. ಸುಬ್ಬಾರೆಡ್ಡಿ ಶಾಸಕ ಸ್ಥಾನ ನಿರ್ಧಾರವಾಗಲಿದೆ.ಸಿಕೆಬಿ-2 ಶಾಸಕ ಎಸ್.ಎನ್. ಸುಬ್ಬಾರೆಡ್ಡಿ
ಸಿಕೆಬಿ-3 ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು