ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರು. ಆರ್ಥಿಕ ನಷ್ಟ ಉಂಟುಮಾಡಿರುವ ಪ್ರಕರಣಗಳನ್ನು ಸಿಬಿಐ ಅಥವಾ ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಆಗ್ರಹ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರು. ಆರ್ಥಿಕ ನಷ್ಟ ಉಂಟುಮಾಡಿರುವ ಪ್ರಕರಣಗಳನ್ನು ಸಿಬಿಐ ಅಥವಾ ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಆಗ್ರಹಿಸಿದರು.ನಾಗಮಂಗಲ ತಾಲೂಕಿನ ಎಚ್.ಎನ್.ಕಾವಲು, ಚಿಕ್ಕಜಟಕ, ದೊಡ್ಡ ಜಟಕ, ಕರಡಹಳ್ಳಿ ಮತ್ತಿತರ ಗ್ರಾಮಗಳಲ್ಲಿನ ಸರ್ಕಾರಿ ಭೂಮಿಯ ದರಖಾಸ್ತು ಮಂಜೂರಾತಿ ದಾಖಲೆಗಳಾದ ಸಾಗುವಳಿ ಚೀಟಿ, ವಿತರಣಾ ವಹಿ, ಅಧಿಕೃತ ಜ್ಞಾಪನ ಇನ್ನಿತರ ದಾಖಲೆಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿದ್ದಿರುವುದು ಲೋಕಾಯುಕ್ತರ ತನಿಖೆಯಿಂದ ಸಾಬೀತಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಪಾಂಡವಪುರ ಉಪ ವಿಭಾಗಾಧಿಕಾರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಮುಖ್ಯಮಂತ್ರಿ, ಕಂದಾಯ ಸಚಿವರು, ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದು ಗಮನಸೆಳೆದಿದ್ದಾರೆ.
ಸರ್ಕಾರಿ ಜಮೀನು ಕಬಳಿಕೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ಎಲ್.ಎಂ.ನಂದೀಶ್ ಕೂಡ ಪಾಂಡವಪುರ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹಾಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರು ತಮಗೆ ಸರಿಸಮನಾದ ಅಧಿಕಾರಿಯನ್ನು ಸರಿಯಾದ ಕ್ರಮದಲ್ಲಿ ವಿಚಾರಣೆ ನಡೆಸುವುದು ಅನುಮಾನಾಸ್ಪದವಾಗಿದೆ. ಈಗಾಗಲೇ ೬೯೪ ಪ್ರಕರಣಗಳಲ್ಲಿ ಅಪರಾಧಿತ ಸಂಚು ನಡೆದಿರುವುದರಿಂದ ಸಾವಿರಾರು ಕೋಟಿ ರು. ಸರ್ಕಾರಕ್ಕೆ ನಷ್ಟವಾಗಿದೆ. ಆದ ಕಾರಣ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ವಿಭಾಗ ಅಥವಾ ಸಿಬಿಐಗೆ ವಹಿಸಿದರಷ್ಟೇ ಸತ್ಯಾಂಶ ಹೊರಬರಲಿದೆ ಎಂದರು.ನಾಗಮಂಗಲ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಸರ್ವೇ ನಂ.೫ರಲ್ಲಿ ೩೪.೩೯ ಎಕರೆ, ಸರ್ವೇ ನಂ.೮ರಲ್ಲಿ ೧೦.೨೨ ಎಕರೆ ಅರಣ್ಯ ಜಮೀನನ್ನು ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿ ಕೋಟ್ಯಂತರ ರು. ಆರ್ಥಿಕ ನಷ್ಟ ಉಂಟುಮಾಡಲಾಗಿದೆ. ಈ ವಿಷಯವಾಗಿ ಹಿಂದೆ ಇದ್ದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯಲ್ಲಿ ಎಂಟು ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಅಧಿಕಾರಿಗಳ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕೋರಲಾಗಿತ್ತು. ಇದೀಗ ಪ್ರಕರಣ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಹಸ್ತಾಂತರವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನೇಮಿಸಿದ್ದ ತನಿಖಾ ತಂಡ ಸುಳ್ಳು ವರದಿಯನ್ನು ನೀಡಿದ್ದು ಅದನ್ನೇ ಯಥಾವತ್ತಾಗಿ ಸರ್ಕಾರಕ್ಕೆ ಜಿಲ್ಲಾಧಿಕಾರಿ ಸಲ್ಲಿಸಿದ್ದಾರೆ ಎಂದು ದೂಷಿಸಿದರು.
ಈ ಪ್ರಕರಣದಲ್ಲಿ ಹೊನ್ನೇಗೌಡ ಎಂಬ ಸತ್ತ ವ್ಯಕ್ತಿಯ ಹೆಸರಿನಲ್ಲಿದ್ದ ಆರ್‌ಟಿಸಿಯನ್ನು ದುರುಪಯೋಗಪಡಿಸಿಕೊಂಡು ಪಿ.ಎಚ್.ಕೃಷ್ಣಪ್ಪ ಎಂಬುವರು ತಮ್ಮ ಎಲೆಕ್ಷನ್ ಕಾರ್ಡ್‌ನಲ್ಲಿ ತಮ್ಮ ಹೆಸರಿನ ಜಾಗದಲ್ಲಿ ಹೊನ್ನೇಗೌಡರ ಹೆಸರನ್ನು ಸೇರಿಸಿ ಸುಳ್ಳು ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ಮಾರಾಟ ಮಾಡಿದ್ದರು. ಈ ವಿಷಯವಾಗಿ ಗೊಲ್ಲರಹಳ್ಳಿ ಸರೋಜಮ್ಮ ಅವರು ಇಬ್ಬರು ಅಧಿಕಾರಿಗಳು ಸೇರಿದಂತೆ ೧೨ ಮಂದಿ ವಿರುದ್ಧ ೧೫ ನವೆಂಬರ್ ೨೦೧೯ರಲ್ಲಿ ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಸಾಬೀತಾಗಿದ್ದರೂ ಪ್ರಭಾವಿಗಳಿಂದ ಅದನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.ನಕಲಿ ಪ್ರಮಾಣಪತ್ರ ಸಲ್ಲಿಸಿದವರ ಅಮಾನತು ಇಲ್ಲ:
ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಜಿಲ್ಲೆಯ ಕಂದಾಯ ಇಲಾಖೆಗಳಲ್ಲಿ ಗ್ರಾಮ ಲೆಕ್ಕಿಗರಾಗಿ ಆಯ್ಕೆಯಾಗಿರು ಏಳು ಮಂದಿ ವಿರುದ್ಧ ಕಚೇರಿಯ ಸಿಸಿಎ ಶಾಖೆಯಲ್ಲಿ ಇಲಾಖಾ ವಿಚಾರಣೆ ನಡೆದಿದೆ. ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಸಿರುವ ಆರೋಪ ಎದುರಿಸುತ್ತಿರುವ ಐವರು ಗ್ರಾಮ ಆಡಳಿತಾಧಿಕಾರಿಗಳು ನಾಗಮಂಗಲ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಸಿರುವುದು ಅಪರ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ನಡೆಸಿದ ವಿಚಾರಣೆಯಿಂದ ದೃಢಪಟ್ಟಿದೆ. ಆದರೂ ಇವರನ್ನು ಇನ್ನೂ ಅಮಾನತುಗೊಳಿಸಿಲ್ಲ, ವಜಾ ಕೂಡ ಮಾಡಿಲ್ಲ. ಇವರೂ ಕೂಡ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನುಗಳನ್ನು ಕಬಳಿಕೆ ಮಾಡುವುದಕ್ಕೆ ನೆರವಾಗುವುದರೊಂದಿಗೆ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯಲು ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದರು.ಇದರ ನಡುವೆ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದ ಕುರಿತು ಸಾರ್ವಜನಿಕರು ನೀಡಿದ ದೂರಿನನ್ವಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನಡೆಸಿರುವ ತನಿಖೆಯಿಂದ ಸಾಬೀತಾಗಿದೆ. ಇದನ್ನು ಸರಿಯಾದ ದಾರಿಯಲ್ಲಿ ತನಿಖೆ ನಡೆಸಿ, ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಆರೋಪಿಗಳಿಂದ ಭರಿಸಬೇಕಿದೆ. ಹಾಗಾಗಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಎಲ್ಲಾ ಪ್ರಕರಣಗಳಲ್ಲಿ ಪ್ರಭಾವಿ ರಾಜಕಾರಣಿಗಳು, ಉನ್ನತಮಟ್ಟದ ಅಧಿಕಾರಿಗಳು, ಭಾಗಿಯಾಗಿರುವುದರಿಂದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ವಿಭಾಗ ಅಥವಾ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.