ಮೂರು ಸಲ ಮಂತ್ರಿಯಾದ ತಮ್ಮ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಸಹ ಇಲ್ಲವೆಂಬ ಹೇಳಿಕೆ ನೀಡಿದ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಬೆಂಗಳೂರಿನಿಂದ ಕಾಲಾ ಪತ್ತರ್ ರೌಡಿ ಗ್ಯಾಂಗ್ ಕರೆಸಿಕೊಂಡಿದ್ದರು. ಅಲ್ಲದೇ, ದಾವಣಗೆರೆ ಇತಿಹಾಸದಲ್ಲೇ ರೌಡಿಸಂ ಆರಂಭ ಮಾಡಿದ್ದು ಶಾಮನೂರು ಕುಟುಂಬ ಎಂಬುದನ್ನು ಜನತೆ ಮರೆತಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಆರೋಪ ಮಾಡಿದ್ದಾರೆ.

- ಡ್ರಗ್ಸ್, ಅಕ್ಕಿ ದಂಧೆ, ರೌಡಿಸಂ ಮಾಡೋರೆಲ್ಲಾ ಎಸ್ಸೆಸ್ಸೆಂ ಪರಮಾಪ್ತರು: ಬಿಜೆಪಿ ಮುಖಂಡ ಯಶವಂತ ರಾವ್ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೂರು ಸಲ ಮಂತ್ರಿಯಾದ ತಮ್ಮ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಸಹ ಇಲ್ಲವೆಂಬ ಹೇಳಿಕೆ ನೀಡಿದ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಬೆಂಗಳೂರಿನಿಂದ ಕಾಲಾ ಪತ್ತರ್ ರೌಡಿ ಗ್ಯಾಂಗ್ ಕರೆಸಿಕೊಂಡಿದ್ದರು. ಅಲ್ಲದೇ, ದಾವಣಗೆರೆ ಇತಿಹಾಸದಲ್ಲೇ ರೌಡಿಸಂ ಆರಂಭ ಮಾಡಿದ್ದು ಶಾಮನೂರು ಕುಟುಂಬ ಎಂಬುದನ್ನು ಜನತೆ ಮರೆತಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಆರೋಪ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1998ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ದಿವಂಗತ ಜಿ.ಮಲ್ಲಿಕಾರ್ಜುನಪ್ಪ, ಕಾಂಗ್ರೆಸ್‌ನ ದಿವಂಗತ ಶಾಮನೂರು ಶಿವಶಂಕರಪ್ಪ ಮಧ್ಯೆ ಸ್ಪರ್ಧೆ ಏರ್ಪಟ್ಟಿದ್ದ ವೇಳೆ ಕಾಲಾ ಪತ್ತರ್ ಹಾಗೂ ಆತನ ರೌಡಿ ಗ್ಯಾಂಗನ್ನು ಇಲ್ಲಿಗೆ ಕರೆಸಿಕೊಂಡು, ನಿಮ್ಮ ಮಿಲ್‌ನಲ್ಲಿಯೇ ಇಟ್ಟುಕೊಂಡಿದ್ದನ್ನು ಜನ ಮರೆತಿಲ್ಲ. ಆಗಿನ ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸೂರು ಇದೇ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ಗೆ ರೌಡಿ ಗ್ಯಾಂಗ್ ವಾಪಸ್ ಕಳಿಸುವಂತೆ ಎಚ್ಚರಿಸಿದ್ದನ್ನು ನಾವೇ ಕಣ್ಣಾರೆ ಕಂಡಿದ್ದೇವೆ ಎಂದರು.

ಹೆಗ್ಗಣಕ್ಕೆ ಎಲ್ಲಾದರೂ ಕಪ್ಪುಚುಕ್ಕೆ ಹುಡುಕಲು ಸಾಧ್ಯವೇ? 1998ರ ನಗರಸಭೆ ಅಧ್ಯಕ್ಷ ಸ್ಥಾನ ಚುನಾವಣೆ ವೇಳೆ ಬಿಜೆಪಿ ಹಿರಿಯ ಮುಖಂಡ ಎಲ್.ಬಸವರಾಜ ಅವರನ್ನು ಹಾಡಹಗಲೇ ರಸ್ತೆಯಲ್ಲೇ ಅಪಹರಿಸಿ, ಮೂರು ದಿನ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ ದೂಡಾ ಹಾಲಿ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಇತರರು ತಿಂಗಳ ಕಾಲ ಜೈಲಿನಲ್ಲಿದ್ದರು. ಆಗಲೂ ಎಸ್ಪಿ ಗೋಪಾಲ್ ಬಿ. ಹೊಸೂರು ಇದೇ ದಿನೇಶ ಶೆಟ್ಟಿ ಇತರರನ್ನು ಜೈಲಿಗಟ್ಟಿದ್ದ ಜೈಲು ದಾಖಲೆಗಳಲ್ಲಿದೆ. ವನ್ಯಜೀವಿ ಪ್ರಕರಣದಲ್ಲಿ ನಿಮ್ಮ ಮೇಲೆ ಕೇಸ್ ಆದಾಗ ಬಿಜೆಪಿಯ ಯಾರ ಬಳಿ ಹೋಗಿ, ಬಚಾವಾಗಿದ್ದೀರಿ ಎಂಬುದೂ ಜನರಿಗೆ ಗೊತ್ತಿದೆ ಎಂದು ಟೀಕಿಸಿದರು.

ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಈಗ ಸಚಿವರು ಸಂಸ್ಕಾರದ ಮಾತುಗಳಾಡುತ್ತಿದ್ದಾರೆ. ಶಿವರಾಜ ಎಂಬವನನ್ನು ಮೊನ್ನೆ ಪೊಲೀಸರು ಬಂಧಿಸಿದ್ದು, ಆತ, ಅಕ್ಕಿ ಕೇಸ್ ಆದ ಮಹಮ್ಮದ್ ಜಮೀರ್ ಮಲ್ಲಿಕಾರ್ಜುನ ಆಪ್ತರು. ಸಂಸದೆ ಡಾ.ಪ್ರಭಾ ಅವರಿಂದ ರಾಖಿ ಕಟ್ಟಿಸಿಕೊಂಡು, ತನ್ನ ಅಕ್ಕಿ ದಂಧೆಗೆ ಆಶೀರ್ವಾದ ಪಡೆದಿದ್ದ. ಡ್ರಗ್ಸ್‌ ದಂಧೆ, ಅಕ್ಕಿ ದಂಧೆ ಮಾಡುವವರು, ರೌಡಿಸಂ ಮಾಡುವವರೆಲ್ಲಾ ಮಲ್ಲಿಕಾರ್ಜುನ ಪರಮಾಪ್ತರು ಎಂದು ಕುಹಕವಾಡಿದರು.

ಡ್ರಗ್ಸ್ ಕೇಸ್‌ ಆರೋಪಿಗೆ ನಿಮ್ಮ ಆಸ್ಪತ್ರೆ ಎಸಿ ರೂಂನಲ್ಲಿ ಚಿಕಿತ್ಸೆ ಕೊಡಿಸುತ್ತಿರುವುದು ಯಾರಿಗೂ ಗೊತ್ತಿಲ್ಲವಾ? ಡಾ.ಪ್ರಭಾ ಮಲ್ಲಿಕಾರ್ಜುನ ಸಂಸದರಾಗಲು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಪ್ರತಿನಿಧಿಸುವ ಉತ್ತರ ಕ್ಷೇತ್ರದಲ್ಲಿ ಎಷ್ಟು ಟಿಕೆಟ್ ಕೊಡಿಸಿದ್ದೀರಿ ಸ್ಪಷ್ಟಪಡಿಸಿ. ನಿಮ್ಮ ಮನೆ ಮಂದಿ ಮತ ಚಲಾಯಿಸುವ ಐಎಂಎ ಮತಗಟ್ಟೆಯಲ್ಲಿ ಈವರೆಗೆ ನಿಮ್ಮ ಪಕ್ಷ, ನಿಮ್ಮ ಕುಟುಂಬ ಚುನಾವಣೆಗೆ ಸ್ಪರ್ಧಿಸಿದಾಗ ಎಷ್ಟು ಲೀಡ್ ಪಡೆದಿದೆ ಬಹಿರಂಗಪಡಿಸಿ ಎಂದು ಯಶವಂತ ರಾವ್ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಮೇಶ ನಾಯ್ಕ, ಪುಲ್ಲಯ್ಯ, ಬಾಲಚಂದ್ರ ಶ್ರೇಷ್ಠಿ, ಟಿಂಕರ್ ಮಂಜಣ್ಣ, ಜಗದೀಶ ಕುಮಾರ ಪಿಸೆ, ಶಿವಾನಂದ, ಶಿವನಗೌಡ ಪಾಟೀಲ, ಗೋವಿಂದ, ರಾಜುಗೌಡ ಇತರರು ಇದ್ದರು.

- - -

(ಬಾಕ್ಸ್‌-1)

* ನಿಮ್ಮನ್ನು ಸಿದ್ದೇಶ್ ಮುಧೋಳಗೆ ಕಳ್ಸಿದ್ದು ಮರೆತಿರಾ?ದಾವಣಗೆರೆ: ಲೋಕಸಭೆ ಚುನಾವಣೆಗಳಲ್ಲಿ ಇದೇ ಜಿ.ಎಂ.ಸಿದ್ದೇಶ್ವರ ನಿಮ್ಮದೇ ನೇತೃತ್ವದ ಕಾಂಗ್ರೆಸ್ಸನ್ನು ಎಷ್ಟು ಸಲ ಸೋಲಿಸಿದ್ದಾರೆ ಎಂಬುದನ್ನೇ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಮರೆತಂತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ವ್ಯಂಗ್ಯವಾಡಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಕ್ಕೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಎಸ್.ಎಸ್.ಎಂ. ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪ, ಜಿ.ಎಂ.ಸಿದ್ದೇಶ್ವರ್‌ ಅವರು ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ, ಎಚ್.ಬಿ.ಮಂಜಪ್ಪಗೆ ಎಷ್ಟು ಸಲ ಸೋಲಿಸಿದ್ದರು ಎಂಬುದು ಮರೆತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಹಿಂದಿನ ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ತಾನು ಸೋಲಿಸಿ, ಊರಿಗೆ ಕಳಿಸಿದ್ದೇನೆ. ಈಗ ದಕ್ಷಿಣ ಉಪ ಚುನಾವಣೆಗೆ ಗರಿಗರಿ ಬಟ್ಟೆ ಧರಿಸಿಕೊಂಡು ಬಂದಿದ್ದಾರೆ ಎಂದು ದರ್ಪದಿಂದ ಸಚಿವ ಮಲ್ಲಿಕಾರ್ಜುನ ಮಾತನಾಡಿದ್ದಾರೆ. ಇದೇ ಸಿದ್ದೇಶ್ವರ ಈ ಹಿಂದೆ ನಿಮಗೆ, ನಿಮ್ಮ ತಂದೆಗೆ ಸೋಲಿಸಿ, ಮುಧೋಳಕ್ಕೆ ಹೋಗಿ ಸೇರಿಸಿದ್ದನ್ನೇ ಮರೆತಂತಿದೆ. ಸಿದ್ದೇಶ್ವರ ಯಾವತ್ತೂ ಚುನಾವಣೆಗೋಸ್ಕರ ಬಂದವರಲ್ಲ. ರಾಜಕೀಯದಲ್ಲಿ ಸೋಲು- ಗೆಲುವು ಸಹಜ. ಜನ, ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅದಕ್ಕಾಗಿಯೇ ದಾವಣಗೆರೆ ಲೋಕಸಭೆ ಮತದಾರರು ಜಿ.ಎಂ.ಸಿದ್ದೇಶ್ವರಗೆ ಸೋಲಿಲ್ಲದ ಸರದಾರನಾಗಿ ಮಾಡಿ, ಸತತ 4 ಅವಧಿಗೆ ಸಿದ್ದೇಶ್ವರ್‌ಗೆ ಗೆಲ್ಲಿಸಿದ್ದು ಎಂದು ಜಾಧವ್‌ ಟಾಂಗ್ ನೀಡಿದರು.

ಲೋಕಾಯುಕ್ತಕ್ಕೆ ಒಪ್ಪಿಸಿ:

ಕಾಡಜ್ಜಿ ಕೃಷಿ ಇಲಾಖೆ ಜಮೀನಿನ ಮಣ್ಣು, ಬಾತಿ ಗುಡ್ಡದ ಮಣ್ಣು, ಟಿವಿ ಸ್ಟೇಷನ್ ಕೆರೆ ಮಣ್ಣು ಅಕ್ರಮ ಲೂಟಿ ಬಗ್ಗೆ ನೀವೇ ಲೋಕಾಯುಕ್ತ ಸಂಸ್ಥೆಗೆ ದೂರು ಕೊಟ್ಟು, ತನಿಖೆಗೆ ಒಪ್ಪಿಸಿ ಎಂದು ಯಶವಂತ ರಾವ್ ಜಾಧವ್ ಜಿಲ್ಲಾ ಮಂತ್ರಿಗೆ ಸವಾಲು ಹಾಕಿದರು. ಕಾಡಜ್ಜಿ, ಬಾತಿ ಗುಡ್ಡ, ಟಿವಿ ಸ್ಟೇಷನ್ ಕೆರೆ ಮಣ್ಣನ್ನು ನಿಮ್ಮ ಕಲ್ಲೇಶ್ವರ ಮಿಲ್ ಹಿಂಭಾಗದ ಜಾಗ, ಎಂಬಿಎ ಕಾಲೇಜಿಗೆ ತುಂಬಿಕೊಂಡಿದ್ದೀರಿ. ಈ ಎಲ್ಲ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಿ, ಸಾಯಿಲ್ ಟೆಸ್ಟ್ ಮಾಡಿಸಿ. ಲೋಕಾಯುಕ್ತಕ್ಕೆ ನೀವೇ ತನಿಖೆಗೊಪ್ಪಿಸಿ. ಇಲ್ಲ ನಾವೇ ಆ ಕೆಲಸ ಮಾಡುತ್ತೇವೆ ಎಂದರು.

- - -

(ಬಾಕ್ಸ್‌-2)

* ದಾ.ದಕ್ಷಿಣ ಕ್ಷೇತ್ರಕ್ಕೆ ನಾನೂ ಟಿಕೆಟ್‌ ಆಕಾಂಕ್ಷಿ: ಜಾಧವ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ನಾನೂ ಆಕಾಂಕ್ಷಿ. 4 ಚುನಾವಣೆಯಲ್ಲಿ ಅಲ್ಪ ಮತಗಳಿಂದ ದಿವಂಗತ ಶಾಮನೂರು ಶಿವಶಂಕರಪ್ಪ, ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ಧ ಸೋತಿದ್ದೆ. ನಮ್ಮ ಪಕ್ಷ ಈ ಸಲ ನನಗೆ ಟಿಕೆಟ್ ನೀಡಿದರೆ ಖಂಡಿತಾ ಸ್ಪರ್ಧೆ ಮಾಡುತ್ತೇನೆ. ಸೋತೆ ಅಂತಾ ನಾನೇನೂ ಊರುಬಿಟ್ಟು ಹೋಗಿಲ್ಲ. ಯರಗುಂಟೆ ಬಳಿ ಇದ್ದ ನಮ್ಮ ಹಿರಿಯರ 4 ಎಕರೆ ಜಮೀನನ್ನು ಕೇವಲ ₹6 ಲಕ್ಷದಂತೆ ಮಾರಿ, ಚುನಾವಣೆ ಎದುರಿಸಿದ್ದೇನೆ. ಇದೇ ಕಾಂಗ್ರೆಸ್‌ನ ಬಿ.ವೀರಣ್ಣ ಜಮೀನು ಖರೀದಿಸಿದ್ದು, ಈಗ ಅಲ್ಲಿ ಎಕರೆಗೆ ಐದಾರು ಕೋಟಿ ರು. ಬೆಲೆ ಇದೆ.

- ಯಶವಂತ ರಾವ್ ಜಾಧವ್, ನಿಕಟಪೂರ್ವ ಜಿಲ್ಲಾಧ್ಯಕ್ಷ, ಬಿಜೆಪಿ.

- - -

-21ಕೆಡಿವಿಜಿ3:

ಡ್ರಗ್ಸ್ ಕೇಸ್‌ನಲ್ಲಿ ಬಂಧಿತ, ಅಕ್ಕಿ ದಂಧೆ ಕೇಸ್ ಆದ ಆರೋಪಿಗಳ ಜೊತೆಗೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ, ಅವರ ಪುತ್ರ ಇರುವ ಫೋಟೋವನ್ನು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಇತರರು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.