ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ ಬಯೋಸೇಫ್ಟಿ ಲೆವೆಲ್-3 (ಬಿಎಸ್‌ಎಲ್-3) ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಅಧಿಕೃತ ಮಾನ್ಯತೆ ಲಭಿಸಿದೆ. ಮಾಹೆಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎಂಐವಿ) ಇದರ ಸಂಶೋಧನೆ, ರೋಗ ಪತ್ತೆ ಮತ್ತು ತರಬೇತಿ ಕಾರ್ಯಗಳಿಗಾಗಿ ಈ ಪ್ರಯೋಗಾಯವನ್ನು ಸ್ಥಾಪಿಸಲಾಗಿದ್ದು, ಮಾಹೆಯ ಜೀವ ವೈದ್ಯಕೀಯ ಸಂಶೋಧನೆ, ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಜಾಗತಿಕ ಆರೋಗ್ಯ ಸುರಕ್ಷೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಹೆಚ್ಚಿನ ಅಪಾಯಕಾರಿ ರೋಗಾಣುಗಳನ್ನು ಸುರಕ್ಷಿತವಾಗಿ ಪತ್ತೆ ಹಚ್ಚಲು, ಹೊಸದಾದ ಹಾಗೂ ಮರುಕಳಿಸುವ ಸಾಂಕ್ರಾಮಿಕ ರೋಗಗಳ ಬಗ್ಗೆ ಅಧ್ಯಯನ ನಡೆಸಲು ಮತ್ತು ಸುಧಾರಿತ ರೋಗ ಪತ್ತೆ, ಮೇಲ್ವಿಚಾರಣೆ ಹಾಗೂ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ವೈದ್ಯರಿಗೆ ಈ ಬಿಎಸ್‌ಎಲ್-3 ನೆರವಾಗಲಿದೆ.
ಉಸಿರಾಟದ ಮೂಲಕ ಹರಡುವ, ಗಂಭೀರ ಸೋಂಕುಕಾರಕ ಸೂಕ್ಷ್ಮಜೀವಿಗಳ ಸುರಕ್ಷಿತವಾದ ಅಧ್ಯಯನಕ್ಕಾಗಿ ವಿನ್ಯಾಸಗೊಳಿಸಲಾದ, ಸುಧಾರಿತ ಬಯೋಸೇಫ್ಟಿ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾದ ವಿಶೇಷ ಸುರಕ್ಷತಾ ಪ್ರಯೋಗಾಲಯ ಇದಾಗಿದೆ.ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆಯು ಈ ಪ್ರಯೋಗಾಲಯದ ವಿನ್ಯಾಸ, ಎಂಜಿನಿಯರಿಂಗ್ ವ್ಯವಸ್ಥೆ, ಬಯೋಸೇಫ್ಟಿ ನಿರ್ವಹಣೆ, ಕಾರ್ಯವಿಧಾನಗಳು, ಸಿಬ್ಬಂದಿ ಪರಿಣತಿ ಮತ್ತು ತುರ್ತು ಪರಿಸ್ಥಿತಿಗಳಿಗಿರುವ ಸಿದ್ಧತೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಪ್ರಮಾಣ ಪತ್ರ ನೀಡಿದೆ. ಈ ಪ್ರಮಾಣಪತ್ರವು ಬಿಎಸ್‌ಎಲ್-3ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜೈವಿಕ ಸುರಕ್ಷತೆ ಹಾಗೂ ಭದ್ರತೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದನ್ನು ಪುಷ್ಟೀಕರಿಸಿದೆ. ಎಂಐವಿ ನಿರ್ದೇಶಕ ಡಾ. ಚಿರಂಜಯ್ ಮುಖೋಪಾಧ್ಯಾಯ ಅವರ ನಾಯಕತ್ವದಲ್ಲಿ ಈ ಸುಸಜ್ಜಿತ ಸೌಲಭ್ಯದ ಸ್ಥಾಪನೆ ಮತ್ತು ಪ್ರಮಾಣೀಕರಣ ಲಭಿಸಿದೆ. ಈ ಯಶಸ್ಸಿಗೆ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ (ಕೆಎಂಸಿ), ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (ಎಂಸಿಒಪಿಎಸ್), ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್ (ಎಂಎಸ್‌ಎಲ್‌ಎಸ್) ಮತ್ತು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಸ್ಥೆಗಳು ಬೆಂಬಲ ನೀಡಿವೆ.
ಮಾಹೆಯ ಬದ್ದತೆಗೆ ಪ್ರಮಾಣ: ಡಾ. ಬಲ್ಲಾಳ್ಈ ಪ್ರಮಾಣಪತ್ರಕ್ಕೆ ಸಂತಸ ವ್ಯಕ್ತಪಡಿಸಿರುವ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ‘ಬಿಎಸ್‌ಎಲ್-3ಕ್ಕೆ ಸಿಕ್ಕ ಈ ಪ್ರಮಾಣೀಕರಣವು ಮಾಹೆಗೆ ಅತ್ಯಂತ ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣವಾಗಿದೆ. ಇದು ವೈಜ್ಞಾನಿಕ ಶ್ರೇಷ್ಠತೆ, ನಾವೀನ್ಯತೆ ಮತ್ತು ಸಾರ್ವಜನಿಕ ಆರೋಗ್ಯದ ಕಡೆಗಿನ ಮಾಹೆಯ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ, ಇಂತಹ ಅತ್ಯಾಧುನಿಕ ಹಾಗೂ ಸ್ವತಂತ್ರ ಬಿಎಸ್‌ಎಲ್-3 ಸೌಲಭ್ಯ ಹೊಂದಿರುವ ಮೊದಲ ಕೆಲವು ಸಂಸ್ಥೆಗಳಲ್ಲಿ ಮಾಹೆ ಕೂಡ ಒಂದಾಗಿದೆ. ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಸೇವೆ ಸಲ್ಲಿಸಲು ಈ ಪ್ರಯಾಗಾಲಯವು ಸಜ್ಜಾಗಿದ್ದು, ಭವಿಷ್ಯದಲ್ಲಿ ಮಹತ್ವದ ಕೊಡುಗೆ ನೀಡುವ ಗುರಿ ಹೊಂದಿದೆʼ ಎಂದು ತಿಳಿಸಿದ್ದಾರೆ.