ಕುಂಭಾಭಿಷೇಕ, ಕ್ಷೀರಾಭಿಷೇಕದೊಂದಿಗೆ ಅದ್ಧೂರಿ 108 ಕಳಸ ಮೆರವಣಿಗೆ

| Published : Feb 10 2025, 01:46 AM IST

ಸಾರಾಂಶ

ಮಂಡ್ಯ ನಗರದ ಕಲ್ಲಹಳ್ಳಿ ವಿವಿ ನಗರದ ಶ್ರೀವರಸಿದ್ಧಿ ವಿನಾಯಕ ಶ್ರೀಕಂಠೇಶ್ವರ ದೇವಾಲಯದಲ್ಲಿ ಹಿತೈಷಿ ಮಹಿಳಾ ಮಂಡಳಿ ಟ್ರಸ್ಟ್ ದೇಗುಲದ 19ನೇ ವಾರ್ಷಿಕ ಮಹೋತ್ಸವ ಪ್ರಯುಕ್ತ ಹೋಮ, ಕುಂಭಾಭಿಷೇಕ, ಕ್ಷೀರಾಭಿಷೇಕ, 108 ಕಳಸ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕಲ್ಲಹಳ್ಳಿ ವಿವಿ ನಗರದ ಶ್ರೀವರಸಿದ್ಧಿ ವಿನಾಯಕ ಶ್ರೀಕಂಠೇಶ್ವರ ದೇವಾಲಯದಲ್ಲಿ ಹಿತೈಷಿ ಮಹಿಳಾ ಮಂಡಳಿ ಟ್ರಸ್ಟ್ ದೇಗುಲದ 19ನೇ ವಾರ್ಷಿಕ ಮಹೋತ್ಸವ ಪ್ರಯುಕ್ತ ಹೋಮ, ಕುಂಭಾಭಿಷೇಕ, ಕ್ಷೀರಾಭಿಷೇಕ, 108 ಕಳಸ ಮೆರವಣಿಗೆ ನಡೆಯಿತು.

ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷೆ ಜಯಶೀಲಮ್ಮ, ಲೋಕ ಕಲ್ಯಾಣಾರ್ಥವಾಗಿ ಇಂದು ದೇವಾಲಯದಲ್ಲಿ ಶ್ರೀವರಸಿದ್ಧಿ ವಿನಾಯಕ ಶ್ರೀಕಂಠೇಶ್ವರ ಮತ್ತು ಪಾವರ್ತಿ ಅಮ್ಮನವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಮರ್ಪಿಸಿದೇವೆ ಎಂದರು.

ಮಹಿಳಾ ಮಂಡಳಿ ಪದಾಧಿಕಾರಿಗಳು ಒಗ್ಗೂಡಿ, ಸಾರ್ವಜನಿಕರು ಮತ್ತು ದಾನಿಗಳ ಸಹಕಾರದಿಂದ ದೇವಾಲಯ ನಿರ್ಮಿಸಿ, ಇಂದಿಗೆ 19 ವರ್ಷಗಳಾಗಿವೆ. ಲೋಕದ ಜನತೆ ನೆಮ್ಮದಿಯಾಗಿ ಬದುಕಲಿ, ಸಕಾಲಕ್ಕೆ ಮಳೆ ಬೆಳೆ ಜನರ ಕೈಸೇರಲಿ, ಕಷ್ಟಗಳು ಪರಿಹಾರವಾಗಲಿ ಎಂಬುದು ನಮ್ಮ ಸದುದ್ದೇಶವಾಗಿದೆ ಎಂದರು.

ಇಂದು ಬಿಸಿಲು ಮಾರಮ್ಮ ದೇವಾಲಯದಿಂದ 108 ಕಳಸ ಮೆರವಣಿಗೆ ಮಾಡಲು ಜಾನಪದ ಡೋಳ್ಳು ಮತ್ತು ನಾದ ಮೇಳದೊಂದಿಗೆ ಟಿ.ನರಸೀಪುರದ ತ್ರಿವೇಣಿ ಸಂಗ್ರಮದ ಜಲ ಮತ್ತು ಶ್ರೀರಂಗಪಟ್ಟದ ಲೋಕಪಾವನಿ ಜಲ ತಂದು ವಿಶೇಷವಾಗಿ ಪೂಜೆ ಸಲ್ಲಿಸಿ, ದೇವಾಲಯದ ವರಗೆ ಮಹಿಳೆಯರು ಮತ್ತು ಮಕ್ಕಳು ಮೆರವಣಿಗೆ ನಡೆಸಿದೆವು ಎಂದರು.

ಇದೇ ವೇಳೆ ದೇವಾಲಯದ ಆವರಣದಲ್ಲಿ ಪ್ರಸಾದ ದಾಸೋಹ ನಡೆಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಸುಶೀಲಮ್ಮ, ವರಲಕ್ಷ್ಮಿ, ಯಶೋಧಾ, ಚಿಕ್ಕತಾಯಿ, ದಾಕ್ಷಾಯಿಣಿ, ಶೋಭಾ, ಭಾಗೀರಥ, ಯಶೋಧಮ್ಮ , ಅರ್ಚಕರು, ನಾಗರೀಕರು ಮತ್ತಿತರರಿದ್ದರು.

ಲಕ್ಷ್ಮೀದೇವಿ ದೇಗುಲ ಲೋಕಾರ್ಪಣೆ ಸುಸಂಪನ್ನ

ಕಿಕ್ಕೇರಿ:

ಬೋಳಮಾರನಹಳ್ಳಿಯಲ್ಲಿ ನೂತನವಾಗಿ ಲಕ್ಷ್ಮೀದೇವಿ ದೇಗುಲ ಲೋಕಾರ್ಪಣೆ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವಿಯದರ್ಶನ ಪಡೆದರು. ಮೂರು ದಿನಗಳ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮ ತಳಿರು ತೋರಣ, ರಂಗವಲ್ಲಿಗಳ ಅಲಂಕಾರದಿಂದ ಶೃಂಗರಿಸಿ ಧಾರ್ಮಿಕ ಕಾರ್ಯಕ್ರಮ ಸಂಪನ್ನವಾಯಿತು.

ಪುಣ್ಯಾವಾಚನ, ತೀರ್ಥಸಂಗ್ರಹ, ರಕ್ಷಾಬಂಧನ, ಅಂಕುರಾರ್ಪಣ, ದೀಪ ಕುಂಭ ಆರಾಧನೆ, ಬೀರಿತಾಂಡವ ಪೂಜೆ, ವಾಸ್ತು ಆರಾಧನೆ, ವಾಸ್ತು, ಗಣಪತಿ, ನವಗ್ರಹ, ಶಾಂತಿಹೋಮ, ಅಷ್ಟಲಕ್ಷ್ಮೀ, ಗ್ರಾಮ ದೇವತಾ ಹೋಮ, ಪಂಚಗವ್ಯಅಮ್ಮನವರಿಗೆ ಬಿಂಬನ್ಯಾಸಾದಿಗಳ, ಆದಿವಾಸಗಳ ಮಹಾಪೂಜೆ, ಸುಪ್ರಭಾತ ಸೇವೆ, ಅಷ್ಟಾವಧಾನ ಸೇವೆ, ಕಲಶ, ನವಗ್ರಹ ಆರಾಧನೆ, ಪ್ರಾಣ ಪ್ರತಿಷ್ಟಾಪನೆ, ನೇತ್ರೋನ್ಮಿಲನ, ಕಳಶಾರಾಧನೆ, ಕುಂಭಾಬಿಷೇಕ, ಪಂಚಾಮೃತ ಸೇವೆ, ಪುಷ್ಪಾಲಂಕಾರ ಸೇವೆ, ಮಹಾ ಮಂಗಳಾರತಿ, ತೀರ್ಥಪ್ರಸಾದ, ಅನ್ನದಾಸೋಹ ಸೇವೆ ವಿಜೃಂಭಣೆಯಿಂದ ಜರುಗಿತು.

ವಿವಿಧ ಮಠಾಧೀಶರು ದೇಗುಲ ಲೋಕಾರ್ಪಣೆಯಲ್ಲಿ ಆಗಮಿಸಿ ಧಾರ್ಮಿಕ ಸಂದೇಶ ನೀಡಿದರು. ದೇಗುಲ ನಿರ್ಮಾಣಕ್ಕೆ ಶ್ರಮಿಸಿದ ಕಾರಣಕರ್ತರನ್ನು ದೇಗುಲ ಸಮಿತಿಯಿಂದ ಗೌರವಿಸಲಾಯಿತು.