ಹೆಬ್ರಿ ಅನಂತಪದ್ಮನಾಭ ದೇವಸ್ಥಾನ: ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ

| Published : Feb 10 2025, 01:46 AM IST

ಸಾರಾಂಶ

ಹೆಬ್ರಿಯ ಗ್ರಾಮದೇವರು ಅನಂತಪದ್ಮನಾಭ ಸ್ವಾಮಿ ಸನ್ನಿಯಲ್ಲಿ ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಶುಕ್ರವಾರ ನಡೆಯಿತು. ದೇವಸ್ಥಾನದ ತಂತ್ರಿ ಪ್ರೇಮಚಂದ್ರ ಐತಾಳ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ಕಾರ್ಕಳ

ಹೆಬ್ರಿಯ ಗ್ರಾಮದೇವರು ಅನಂತಪದ್ಮನಾಭ ಸ್ವಾಮಿ ಸನ್ನಿಯಲ್ಲಿ ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಶುಕ್ರವಾರ ನಡೆಯಿತು. ದೇವಸ್ಥಾನದ ತಂತ್ರಿ ಪ್ರೇಮಚಂದ್ರ ಐತಾಳ್ ನೇತೃತ್ವದಲ್ಲಿ ಶುಕ್ರವಾರ ಪೂರ್ವಾಹ್ನ 9.23ರ ಮೀನಲಗ್ನದಲ್ಲಿ ಧ್ವಜ ಪ್ರತಿಷ್ಠೆ, ಕಲಶಾಭಿಷೇಕ, ತತ್ವಹೋಮ, ಮಹಾಪೂಜೆ ನಡೆಯಿತು. ಧ್ವಜಸ್ತಂಭ ಸ್ಥಾಪನೆಯ ಪೂರ್ವಭಾವಿಯಾಗಿ ಸುಮಾರು ೨೫ ಲಕ್ಷ ರು. ವೆಚ್ಚದಲ್ಲಿ ಕಬ್ಬಿನಾಲೆಯಿಂದ ಧ್ವಜಮರವನ್ನು ಮೆರವಣಿಗೆಯಲ್ಲಿ ತರಿಸಿಕೊಂಡು ಮರ ಮುಹೂರ್ತ ಪೂಜೆ, ಕೆತ್ತನೆ ಕೆಲಸ, ತೈಲಾವಾಸ ಪ್ರಕ್ರಿಯೆಗಳನ್ನು ಪೂರೈಸಿಕೊಂಡು ಧ್ವಜಕಟ್ಟೆಯೊಂದಿಗೆ ಧ್ವಜಸ್ತಂಭ ಸ್ಥಾಪಿಸಿ ತಾಮ್ರದ ಹೊದಿಕೆ ಹೊದಿಸಲಾಗಿತ್ತು.

ಇದಕ್ಕೂ ಮೊದಲು ದೇವಸ್ಥಾನದಲ್ಲಿ ಫೆ.೫ ಮತ್ತು ಫೆ.೬ ರಂದು ವಾಸ್ತು, ಪ್ರಾಯಶ್ಚಿತ್ತಾ ಹೋಮಗಳನ್ನು ನಡೆಸಿ ಮಂಡಲಪೂಜೆ, ಅವಾಸ, ಕಲಶಾವಾಸ ಪ್ರಕ್ರಿಯೆಗಳನ್ನು ನಡೆಸಲಾಯಿತು.

ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಚ್. ತಾರಾನಾಥ ಬಲ್ಲಾಳ್, ತಂತ್ರಿ ಪ್ರೇಮಚಂದ್ರ ಐತಾಳ್, ಪವಿತ್ರಪಾಣಿ ವಾದಿರಾಜ ಓಕುಡ, ಅರ್ಚಕರಾದ ಗುರುಮೂರ್ತಿ ಜೋಯಿಸ್, ನಾರಾಯಣ ಆಚಾರ್ಯ, ಎಚ್. ಮೋಹನರಾಜ ಜೋಯಿಸ್, ಗಿಲ್ಲಾಳಿ ಪದ್ಮನಾಭ ಆಚಾರ್ಯ, ಎಚ್. ರಾಮಕೃಷ್ಣ ಆಚಾರ್ಯ, ನಾಗರಾಜ ಜೋಯಿಸ್, ಶ್ರೀಕಾಂತ ಆಚಾರ್ಯ, ಎಚ್. ಬಾಲಕೃಷ್ಣ ನಾಯಕ್, ಎಚ್. ಭಾಸ್ಕರ ಜೋಯಿಸ್, ರಾಮಕೃಷ್ಣ ಎನ್ ಆಚಾರ್ಯ, ಎಚ್. ಸತೀಶ್ ಪೈ ಮೊದಲಾದವರಿದ್ದರು.

ಫೆ.೯ ರಂದು ಬ್ರಹ್ಮಕಲಶಾಭಿಷೇಕ: ಧ್ವಜಸ್ತಂಭ ಪ್ರತಿಷ್ಠೆಯ ಬಳಿಕ ಫೆ.೯ ರಂದು ಗಣಪತಿಯಾಗ, ಬ್ರಹ್ಮಕಲಶ-೧೦೮ ಕಲಶಾಭಿಷೇಕ, ಮಹಾಪೂಜೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಮಹಾಸಂತರ್ಪಣೆ ನಡೆದವು.