ಒಳಿತು ಬಯಸಿದರೆ ದೇವರು ಒಲಿಯುವನು: ಅಭಿನವ ಶ್ರೀ

| Published : Feb 25 2024, 01:46 AM IST

ಒಳಿತು ಬಯಸಿದರೆ ದೇವರು ಒಲಿಯುವನು: ಅಭಿನವ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಸ್ಕಿಯಲ್ಲಿ ಅದ್ಧೂರಿಯಾಗಿ ಜರುಗಿದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಹಾಗೂ ನೂತನ ರಥದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದದ ಅಭಿನವ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಸದ್ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ಜಯ ಘೋಷಣೆಗಳನ್ನು ಕೂಗಿ ಮಲ್ಲಿಕಾರ್ಜುನ ದೇವಸ್ಥಾನದಿಂದ ಶ್ರೀವೀರಭದ್ರೇಶ್ವರ ದೇವಸ್ಥಾನದವರೆಗೆ ರಥ ಎಳೆದು ಭಕ್ತಿ ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಸದಾ ಒಳಿತು ಮಾಡಿದರೆ ಭಕ್ತರ ಭಕ್ತಿಗೆ ಮಲ್ಲಿಕಾರ್ಜುನ ಅಭಯ ನೀಡುತ್ತಾನೆ. ಸಮಾಜದಲ್ಲಿ ಕೆಟ್ಟದ್ದು ಇದೆ, ಒಳ್ಳೆಯದು ಇದೆ. ಕೆಟ್ಟ ಕಡೆ ಮನಸ್ಸು ಮಾಡದೆ ಒಳ್ಳೆಯದನ್ನು ಮಾಡಿದರೆ ದೇವನ ಒಲುಮೆ ಸಾಧ್ಯ ಎಂದು ಕೊಪ್ಪಳ ಗವಿಮಠದದ ಅಭಿನವ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಹಾಗೂ ನೂತನ ರಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.

ಮೊದಲಿಗೆ ಧರ್ಮ ಧ್ವಜಾರೋಹಣ ನೆರವೇರಿಸಿ, ಧಾರ್ಮಿಕ ಲಾಂಛನ ಬೀಸುವ ಮೂಲಕ ರಥ ಎಳೆಯಲು ಚಾಲನೆ ನೀಡಿದರು.

ನೆರದಿದ್ದ ಸದ್ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ಜಯ ಘೋಷಣೆಗಳನ್ನು ಕೂಗಿ ಮಲ್ಲಿಕಾರ್ಜುನ ದೇವಸ್ಥಾನದಿಂದ ಶ್ರೀವೀರಭದ್ರೇಶ್ವರ ದೇವಸ್ಥಾನದವರೆಗೆ ರಥ ಎಳೆದು ಭಕ್ತಿ ಪ್ರದರ್ಶಿಸಿದರು.

ನಂದವಾಡಗಿಯ ಶ್ರೀಮಹಾಂತಲಿಂಗ ಶಿವಾಚಾರ್ಯರು, ತೆಕ್ಕಲಕೋಟೆಯ ಶ್ರೀವೀರಭದ್ರ ಶಿವಾಚಾರ್ಯರು, ಸಂತೆಕೆಲ್ಲೂರಿನ ಶ್ರೀ ಗುರುಬಸವ ಮಹಾಸ್ವಾಮೀಗಳು, ಸಿಂಧನೂರಿನ ಶ್ರೀಸೋಮನಾಥ ಶಿವಾಚಾರ್ಯರು, ಬಳಗಾನೂರಿನ ವೀರಭದ್ರ ಶಿವಾಚಾರ್ಯರು, ಮೆದಕಿನಾಳದ ಡಾ.ಚನ್ನಮಲ್ಲ ಮಹಾಸ್ವಾಮೀಗಳು, ತುರ್ವಿಹಾಳದ ಅಮರಗುಂಡ ಸ್ವಾಮೀಜಿ, ಬಳಗಾನೂರಿನ ಸಿದ್ದಬಸವ ಸ್ವಾಮೀಜಿ, ತಿಮ್ಮಾಪುರ ಕಲ್ಯಾಣ ಆಶ್ರಮದ ಶ್ರೀಮಹಾಂತ ಸ್ವಾಮೀಜಿ, ಸಂಸದ ಕರಡಿ ಸಂಗಣ್ಣ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಪ್ರತಾಪಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಕೆ.ವೀರನಗೌಡ, ಮಹಾದೇವಪ್ಪಗೌಡ ಪಾಟೀಲ, ಆರ್.ಸಿದ್ದನಗೌಡ ತುರ್ವಿಹಾಳ ತಹಸೀಲ್ದಾರ್‌ ಅರಮನೆ ಸುಧಾ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಜೆಸ್ಕಾಂ ಎಇಇ ವೆಂಕಟೇಶ, ಸಿಪಿಐ ಮಲ್ಲಿಕಾರ್ಜುನ, ಪಿಎಸ್ಐ ವೈಶಾಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪೂಜಾ ವಿಧಿ ವಿಧಾನ: ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕರು ಬೆಳಗ್ಗೆ ಮಲ್ಲಿಕಾರ್ಜುನ ಸ್ವಾಮಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ಹಳೆಯ ರಥವನ್ನು ಎಳೆಯಲಾಯಿತು.

ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿಯ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ನೂತನ ರಥದ ಸುತ್ತ ಐದು ಸಲ ಪ್ರದಕ್ಷಿಣೆ ಹಾಕಿ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಸಂಪ್ರದಾಯದಂತೆ ಗಚ್ಚಿನಮಠದ ಸ್ವಾಮೀಜಿಗಳು, ಅರ್ಚಕರು, ಗಣಾಚಾರಿಯವರು, ದೀವಟಗಿ ಹಿಡಿಯುವವರು ರಥದಲ್ಲಿದ್ದರು.