ನೋಡುಗರ ಗಮನ ಸೆಳೆದ ಅಜ್ಜಿ ತಿಂಡಿಗಳು

| Published : Sep 02 2024, 02:02 AM IST

ಸಾರಾಂಶ

ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಪೋದಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳಿಗಾಗಿ ಬೆಂಕಿಯ ಸಹಾಯವಿಲ್ಲದೆ ತಯಾರಿಸುವ ಪೌಷ್ಟಿಕ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.

ಕನಕಪುರ: ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಪೋದಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳಿಗಾಗಿ ಬೆಂಕಿಯ ಸಹಾಯವಿಲ್ಲದೆ ತಯಾರಿಸುವ ಪೌಷ್ಟಿಕ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.

ಹಿಂದಿನ ಕಾಲದಲ್ಲಿ ಹಿರಿಯರು ಮನೆಯಲ್ಲಿ ಕ್ಷಣ ಮಾತ್ರದಲ್ಲಿ ತಯಾರಿಸುತ್ತಿದ್ದ ಪೌಷ್ಟಿಕಾಂಶ ಆಹಾರಗಳನ್ನುಪರಿಚಯಿಸುವ ದೃಷ್ಟಿಯಿಂದ ಅಜ್ಜಿ ತಿಂಡಿ ಎಂಬ ಘೋಷವಾಕ್ಯದೊಂದಿಗೆ ಶಾಲಾ ಆವರಣದಲ್ಲಿ ಮಕ್ಕಳು ಹಾಗೂ ಪೋಷಕರಿಗಾಗಿ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಶಾಲಾ ಆಡಳಿತ ಅಧಿಕಾರಿ ಫೈರೋಜ್ ಖಾನ್ ತಿಳಿಸಿದರು.

ಹಿಂದಿನ ಕಾಲದಲ್ಲಿ ನಾವು ಸೇವಿಸುತ್ತಿದ್ದ ಆಹಾರದಲ್ಲಿ ಹೆಚ್ಚು ಪೌಷ್ಟಿಕಾಂಶ ಪದಾರ್ಥಗಳು ಇರುತ್ತಿದ್ದವು. ಆದರೆ ಇಂದು ಮಕ್ಕಳ ಆಹಾರ ಪದ್ಧತಿಯೇ ಬದಲಾಗಿದ್ದು ಬರೀ ಪಿಜ್ಜಾ, ಬರ್ಗರ್, ಗೋಬಿ, ನೂಡಲ್ಸ್ ನಂತಹ ಹಲವು ಕೆಮಿಕಲ್ ಯುಕ್ತ ಆಹಾರವನ್ನು ಸೇವಿಸುತ್ತಿರುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ, ಈ ಅಂಶಗಳನ್ನು ಚಿಕ್ಕವರಿಂದಲೇ ಅವರಿಗೆ ತಿಳಿಸುವುದರ ಜೊತೆಗೆ ಹಣ್ಣು ತರಕಾರಿಗಳ ಬಳಕೆಯಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿ ಕೊಡುವ ಸಲುವಾಗಿ ನಮ್ಮ ಶಾಲೆಯಲ್ಲಿ ಈ ರೀತಿಯ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ಆಹಾರ ಮೇಳದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು ಹಣ್ಣು, ತರಕಾರಿಗಳನ್ನು ಬಳಸಿಕೊಂಡು ಬೆಂಕಿ ಯ ಸಹಾಯವಿಲ್ಲದೆ ರುಚಿ-ಶುಚಿಯಾದ ಆಹಾರ ಪದಾರ್ಥಗಳನ್ನು ತಯಾರಿಸಿ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಾಂಶುಪಾಲ ಪ್ಯಾಬಿಯಾನ್ ಮ್ಯಾಕ್ ಡೊನಾಲ್ಡ್ ಮಕ್ಕಳ ಚಟುವಟಿಕೆಗಳನ್ನು ನೋಡಿ ಪ್ರಶಂಸಿದರು.

ಶಾಲಾ ಮುಖ್ಯೋಪಾಧ್ಯಾಯ ಅಭಯ್. ಕೆ, ಶಿಕ್ಷಕರಾದ ಪುಷ್ಪ, ರಮ್ಯ, ರತ್ನ, ಸುಮ, ಮಾನಸ, ಸ್ಮಿತಾ, ಮಹಾಲಕ್ಷ್ಮಿ, ತೇಜಸ್ವಿನಿ, ರಮ್ಯ ಬಿ. ಎಸ್ ಸೇರಿದಂತೆ ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಮತ್ತು ಪೋಷಕರು ಈ ವೇಳೆ ಉಪಸ್ಥಿತರಿದ್ದರು.