ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ ಸಾರ್ವಜನಿಕರು ಪ್ಲಾಸ್ಟಿಕ್‌ ಅನ್ನು ಬೀದಿಬದಿ ಎಸೆಯುವುದನ್ನು ಬಿಟ್ಟು ನಿಗದಿತ ಸ್ಥಳಗಳಲ್ಲಿ ಹಾಕಬೇಕು. ಅಲ್ಲದೇ ಹಸುಗಳನ್ನು ಸಾಕುವವರು ಅವುಗಳು ಕಸದ ರಾಶಿಯಲ್ಲಿ ಮೇಯದಂತೆ ಗಮನಹರಿಸಬೇಕು ಇದರಿಂದಲೂ ಗೋವು ರಕ್ಷಣೆ ಮಾಡಿದಂತಾಗುತ್ತದೆ ಎಂದು ಶಾಸಕ ಎಂ.ಕೃಷ್ಣಪ್ಪ ಕರೆ ನೀಡಿದರು.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರಿನಲ್ಲಿರುವ ಶ್ರೀಕೃಷ್ಣ ಗೋಶಾಲೆಯಲ್ಲಿ 4 ಅಂತಸ್ತಿನ ನೂತನ ಹೈಟೆಕ್ ಗೋಶಾಲೆ ಕಟ್ಟಡ ನಿರ್ಮಾಣದ ಪೂಜೆ ನೆರವೇರಿಸಿ ಮಾತನಾಡಿದರು. ದೇಶಿ ತಳಿಯ ಹಸುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಶ್ರೀ ಕೃಷ್ಣ ಗೋಶಾಲೆ ಮುಂದಾಗಿದ್ದು, ಹೈನುಗಾರಿಕೆಗೆ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.ಶ್ರೀಕೃಷ್ಣ ಗೋಶಾಲೆಯ ಮುಖ್ಯಸ್ಥ ಕೃಷ್ಣಮೂರ್ತಿ ಮಾತನಾಡಿ, 13 ವರ್ಷಗಳಿಂದ ಗೋಶಾಲೆ ನಡೆಸಿಕೊಂಡು ಬರಲಾಗುತ್ತಿದೆ. ಕಸಾಯಿಖಾನೆಗೆ ಸೇರುತ್ತಿದ್ದ 300ಕ್ಕೂ ಹೆಚ್ಚು ಹಸುಗಳನ್ನು ರಕ್ಷಿಸಿ ಸುಮಾರು 516ಕ್ಕೂ ಹೆಚ್ಚಿನ ಹಸುಗಳ ಆರೈಕೆ ಮಾಡಲಾಗುತ್ತಿದೆ. 15 ಸಾವಿರ ಅಡಿಯಲ್ಲಿ‌ 4 ಅಂತಸ್ತಿನ ಕಟ್ಟಡ ನಿರ್ಮಾಣದ ಮೂಲಕ ಭಾರತದಲ್ಲೇ ಅತ್ಯಾಧುನಿಕ ರೀತಿಯಲ್ಲಿ ಹೈಟೆಕ್ ಗೋಶಾಲೆಗೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.ತಳ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ಮೊದಲನೇ ಮಹಡಿಯಲ್ಲಿ ಹಸುಗಳ ಆರೈಕೆ, ಎರಡನೇ ಮಹಡಿಯಲ್ಲಿ ರಾಸುಗಳ ಆಹಾರ ಶೇಖರಣೆ, ಮೂರನೇ ಮಹಡಿಯಲ್ಲಿ ಪಂಚಗವ್ಯ ಚಿಕಿತ್ಸೆ ಹಾಗೂ ಗೋಶಾಲೆಗೆ ಬರುವ ಅತಿಥಿಗಳು ಉಳಿದುಕೊಳ್ಳಲು 20 ಕೊಠಡಿಗಳು ಮತ್ತು ಅಡುಗೆಮನೆ ಹಾಗೂ ಅನ್ನ ಪ್ರಸಾದಾಲಯ, ನಾಲ್ಕನೇ ಮಹಡಿಯಲ್ಲಿ ‌ಭಜನೆ ಮಂದಿರ ಅದರ ಮೇಲೆ ದೇವಸ್ಥಾನಗಳನ್ನು ಸುಮಾರು 5 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.

ಗೋಶಾಲೆಯ ನಾಗರಾಜ ರೆಡ್ಡಿ, ಬಿಜೆಪಿ ಮುಖಂಡ ರಮೇಶ್ ಆರಾಧ್ಯ, ರಾಮಕೃಷ್ಣ ಮಿಷನರಿ ಹಾಗೂ ಬೇಗೂರಿನ ಚರ್ಚ ಫಾದರ್, ಆನಂದ್ ಗುರೂಜಿ, ಸೇರಿದಂತೆ 30 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಭಜನೆಯಲ್ಲಿ ಪಾಲ್ಗೊಂಡಿದ್ದರು.