ಪಾಂಡವಪುರ:

ತಾಲೂಕಿನ ಅರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ರೈತ ಸಂಘದ ನಾಯಕಿ ಸುನೀತ ಪುಟ್ಟಣ್ಣಯ್ಯ, ಡೇರಿ ಅಧ್ಯಕ್ಷ ಎ.ಜೆ.ಜಗದೀಶ್ ಭೂಮಿಪೂಜೆ ನೇರವೇರಿಸಿದರು.ಡೇರಿ ಅಧ್ಯಕ್ಷ ಜಗದೀಶ್ ಮಾತನಾಡಿ, ಗ್ರಾಮದ ಡೇರಿಯಲ್ಲಿ 3 ಸಾವಿರ ಸಾಮರ್ಥ್ಯದ ಬಿಎಂಸಿ ಘಟಕ ಇತ್ತು. ಪ್ರಸ್ತುತ 3 ಸಾವಿರ ಲೀಟರ್‌ಗೂ ಹೆಚ್ಚು ಹಾಲು ಪೂರೈಕೆಯಾದ ಹಿನ್ನೆಲೆಯಲ್ಲಿ 5 ಸಾವಿರ ಲೀಟರ್ ಸಾಮರ್ಥ್ಯ ಬಿಎಂಸಿ ಘಟಕವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸಂಘದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇದರಿಂದ ಸಂಘಕ್ಕೂ ಅಧಿಕ ಲಾಭ ಬರುವ ಜತೆಗೆ ಸಂಘವು ಅಭಿವೃದ್ಧಿಯತ್ತ ಮುನ್ನಡೆಯಲು ಸಾಧ್ಯವಾಗಲಿದೆ ಎಂದರು.

ಇದೇ ವೇಳೆ ಸುನೀತಾ ಪುಟ್ಟಣ್ಣಯ್ಯ, ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ವಿಸ್ತರಣಾಧಿಕಾರಿ ನಾಗೇಂದ್ರ ಅವರನ್ನು ಸಂಘದಿಂದ ಅಭಿನಂದಿಸಲಾಯಿತು. ಡೇರಿ ಉಪಾಧ್ಯಕ್ಷೆ ಪಿ.ಕೆ.ಪದ್ಮಮ್ಮ, ನಿರ್ದೇಶಕರಾದ ಎಸ್.ಸೋಮೇಗೌಡ, ಎ.ಎಸ್. ಕೀರ್ತಿಹರ್ಷ, ನಾರಾಯಣ, ಎ.ಆರ್.ಕೆಂಪೂಗೌಡ, ಎ.ಆರ್.ಅಲೋಕ್‌, ಕೆ.ನಾಗರಾಜು, ಆರತಿ, ಡಿ.ಜಯರಾಮು, ಚಿಕ್ಕಯ್ಯ, ಡೇರಿ ಕಾರ್ಯದರ್ಶಿ ಕೆ.ಜಯದೇವ್, ಎಂಜಿನಿಯಾರ್ ಸುಭಾಷ್, ಪರೀಕ್ಷ ಎಸ್.ಮಹೇಂದ್ರ, ಸಿಬ್ಬಂದಿ ರವಿಕುಮಾರ್, ರತ್ನ, ಲತಾ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.

ಕೃಷಿ ಭಾಗ್ಯ ಯೋಜನೆ, ಫಸಲ್ ಭೀಮಾ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪ್ರತಿಭಾ

ಮದ್ದೂರು: ಕೃಷಿಭಾಗ್ಯ ಯೋಜನೆ ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗಳ ಪ್ರಯೋಜನಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ ತಿಳಿಸಿದ್ದಾರೆ.ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಂಗಾಮಿನಲ್ಲಿ ಮಳೆ ಸಕಾಲದಲ್ಲಿ ಬಾರದ ಕಾರಣ ಬೆಳೆ ವಿಮೆಗೆ ಸರ್ಕಾರದಿಂದ ಅಧಿಸೂಚಿಸಲ್ಪಟ್ಟ ರಾಗಿ, ಹುರುಳಿ, ನೆಲಗಡಲೆ, ಭತ್ತ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನೀರಾವರಿ ರಾಗಿಗೆ 472 ರು. ಮತ್ತು ಮಳೆ ಆಶ್ರಿತ ರಾಗಿ ಗೆ 404 ರು, ಹುರುಳಿಗೆ 190 ರು, ನೆಲಗಡಲೆ 529 ರು, ನೀರಾವರಿ ಭತ್ತಕ್ಕೆ 879 ರೂ, ವಿಮಾ ಕಂತುಗಳ ಕೊನೆ ದಿನವಾದ ಜುಲೈ 15 ಹಾಗೂ ಆಗಸ್ಟ್ 14ರೊಳಗೆ ವಿಮಾ ಪ್ರಸ್ತಾವನೆಗಳನ್ನು ಸಲ್ಲಿಸಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ನಿಮ್ಮ ಕಂತುಗಳನ್ನು ಬ್ಯಾಂಕು, ಗ್ರಾಮ ಒನ್ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ರೈತರು ಬೆಳೆ ವಿಮೆ ಮಾಡಿಸುವುದಕ್ಕೆ ಅವಕಾಶ ನೀಡಲಾಗಿದೆ.ವಿಮಾ ಸೌಲಭ್ಯ ಪಡೆದುಕೊಳ್ಳುವ ರೈತರು ಒಂದೇ ಕಡೆ ಕನಿಷ್ಠ ಒಂದು ಎಕರೆ ಜಮೀನನ್ನು ಹೊಂದಿರಬೇಕು. ಯೋಜನೆಯಡಿ ಇತರ ವರ್ಗದ ರೈತರಿಗೆ ಶೇ.80ರ ಸಹಾಯಧನ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ರೈತರಿಗೆ ಶೇ.90ರ ಯೋಜನೆ ಸಹಾಯಧನವನ್ನು ನೀಡಲಾಗುವುದು.

ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನ ಮಾಡಬೇಕಾಗಿದೆ. ಕೃಷಿ ಹೊಂಡ, ಕಂದಕ ಬದು, ಪಾಲಿಥಿನ್ ಹೊದಿಕೆ, ತಂತಿಬೇಲಿ , ಡೀಸಲ್ ಪಂಪ್ ಸೆಟ್ ಘಟಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕೃಷಿ ಅಧಿಕಾರಿ ಪ್ರತಿಭಾ ಸೂಚನೆ ನೀಡಿದ್ದಾರೆ.